Monday, December 27, 2010

ಸಾಹಿತ್ಯ ಸಮಾಜದ ಪ್ರತಿಬಿಂಬ- ಜಯಸುತೆ



ಕೊಪ್ಪಳ: ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕಥೆಗಳನ್ನು ಬರೆಯಬೇಕು, ಸಮಾಜವನ್ನು ಎಚ್ಚರಿಸುವ ಕೆಲಸ ಕತೆಗಳಲ್ಲಿ ನಡೆಯಬೇಕು. ಸಾಹಿತ್ಯ ಸಮಾಜದ ಪ್ರತಿಬಿಂಬದಂತೆ ಹಾಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ , ಜವಾಬ್ದಾರಿಯಿಂದ ರಚಿಸಬೇಕು ಎಂದು ಜಯಸುತೆ ಕಾವ್ಯನಾಮದಿಂದ ಖ್ಯಾತರಾಗಿರುವ ಶ್ರೀಮತಿ ಸ್ನೇಹಲತಾ ಜೋಷಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ತಂದೆಯವರು ನನ್ನ ಮೇಲೆ ಬಹಳ ಪ್ರಭಾವಿ ಬೀರಿದ್ದು ಅವರೂ ಸಹ ಸಾಹಿತಿಗಳಾಗಿದ್ದರಿಂದ ಬಾಲ್ಯದಿಂದಲೇ ಸಾಹಿತ್ಯದತ್ತ ಸೆಳೆತ ಉಂಟಾಗಿತ್ತು. ನಂತರದ ದಿನಗಳಲ್ಲಿ ಕಥೆ,ಕಾದಂಬರಿ, ಕವನಗಳನ್ನು ಬರೆಯಲು ಅವರೇ ಸ್ಪೂರ್ತಿ ಎಂದು ಅವರು ಹೇಳಿದರು.
ಈ ಸಲದ ಕವಿಸಮಯದಲ್ಲಿ ಹೊಸ ಪ್ರಯೋಗ ಹಮ್ಮಿಕೊಳ್ಳಲಾಗಿತ್ತು. ಈ ಸಲ ಕಥಾವಾಚನ ನಡೆಸಲಾಯಿತು. ಸ್ವರಚಿತ ಕಥೆಗಳನ್ನು ಕತೆಗಾರರು ವಾಚನ ಮಾಡಿದರು. ನಂತರ ಅತಿಥಿಗಳು ಆ ಕತೆಗಳ ಬಗ್ಗೆ ಮಾತನಾಡಿದರು. ಕಥೆಗಳ ಕುರಿತ ಚರ್ಚೆ ನಡೆಯಿತು. ಮಹೇಶ ಬಳ್ಳಾರಿ- ರಘುಪತಿ ರಾಘವ ರಾಜಾರಾಮ, ಶಿವಪ್ರಸಾದ ಹಾದಿಮನಿ-ತ್ಯಾಗ, ಪುಷ್ಪಲತಾ ಏಳುಬಾವಿ- ಅದೃಷ್ಟದ ರಾಣಿ, ಅರುಣಾ ನರೇಂದ್ರ- ರಮ್ಯಾ - ರಮೇಶ ಕಥೆಗಳನ್ನು ವಾಚನ ಮಾಡಿದರು. ಸ್ನೇಹಲತಾ ಜೋಷಿಯವರೂ ತಮ್ಮ ಕಥೆ ನಿಗೂಢದ ಸಾರಾಂಶ ಹೇಳಿದರು.
ಕಾರ್‍ಯಕ್ರಮದಲ್ಲಿ ವೀರಣ್ಣ ಹುರಕಡ್ಲಿ, ಮಲ್ಲಿಕಾರ್ಜುನ ಎಚ್. ವಾಗೀಶ ಪಾಟೀಲ್, ಎನ್.ಜಡೆಯಪ್ಪ, ಶಿವಾನಂದ ಹೊದ್ಲೂರ, ಬಸವರಾಜ ಶೀಲವಂತರ, ಸುಮತಿ ಹಿರೇಮಠ, ಸುದೀಂದ್ರ,ಸಮೀರ್ ಜೋಷಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Monday, December 20, 2010

ಯಶಸ್ವಿ ಮುಕ್ತ ಕವಿಗೋಷ್ಠಿ :೩೪ನೇ ಕವಿಸಮಯ


ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ನಗರದ ಎನ್‌ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೪ನೇ ಕವಿ ಸಮಯ ಯಶಸ್ವಿಯಾಗಿ ಜರುಗಿತು. ಕವಿಗೋಷ್ಠಿಯಲ್ಲಿ ಮೊದಲು ಕವನ ವಾಚನ ಮಾಡಲಾಯಿತು. ನಂತರ ಅದರ ಬಗ್ಗೆ ಸಂವಾದ ನಡೆಯಿತು. ಕವಿಗೋಷ್ಠಿಯಲ್ಲಿ ವಾಗೀಶ್ ಪಾಟೀಲ್- ರೈತನ ಬಾಳು, ಎಸ್.ಎಂ.ಕಂಬಾಳಿಮಠ- ನನ್ನವಳು, ಎನ್.ಜಡೆಯಪ್ಪ- ಕಣ್ಣೀರು, ಬೆಳದಿಂಗಳು, ಹನುಮಂತಪ್ಪ ಅಂಡಗಿ- ವಿಪರ್‍ಯಾಸ, ಪುಷ್ಪಲತಾ ರಾಜಶೇಖರ ಏಳುಬಾವಿ- ಆದರ್ಶ ಸತಿ, ವಿಮಲಾ ಇನಾಂದಾರ್- ದಾಹರ ,ಸಂಗಾತಿ, ನಟರಾಜ ಸವಡಿ-ಆಸೆ, ಸಿರಾಜ್ ಬಿಸರಳ್ಳಿ-ಮಾರುತ್ತೇವೆ ನಾವು ಕವನಗಳನ್ನು ವಾಚನ ಮಾಡಿದರು.
ಕವನ ವಾಚನದ ನಂತರ ಅ ಮತ್ತಹ ಹ ಕಾರಗಳ ಉಚ್ಛಾರಣೆಯನ್ನು ತಪ್ಪು ತಪ್ಪಾಗಿ ಮಾಡಲಾಗುವ ಕುರಿತು ಮತ್ತು ಸ್ಪಷ್ಟ ಉಚ್ಛಾರಣೆ ಇರಬೇಕು, ಪ್ರಾದೇಶಿಕ ಭಿನ್ನತೆಯಿಂದ ಭಾಷೆಯಲ್ಲಿ ಹೆಚ್ಚು ಕಡಿಮೆ ಇದ್ದರೂ ಓದುವಾಗ ಸರಿಯಾಗಿ ಓದಬೇಕು ಎನ್ನುವ ಕುರಿತು ಚರ್ಚೆ ನಡೆಯಿತು.
ಕಾರ್‍ಯಕ್ರಮದಲ್ಲಿ ಮಲ್ಲಿಕಾರ್ಜುನ ಹೆಚ್.ವಿರೇಶ್, ತಿಪ್ಪೇಸ್ವಾಮಿ ಬೋದಾ, ಶಿವಾನಂದ ಹೊದ್ಲೂರ, ಭುಜಂಗಸ್ವಾಮಿ ಇನಾಂದಾರ್, ಆರ್.ಎಂ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Monday, December 13, 2010

ಅನುಭವ- ಅರಿವಿನೊಡನೆ ಸೇರಿದ ಕಾವ್ಯ ಸಕಾಲಿಕ ಹಾಗೂ ಸಾರ್ವಕಾಲಿಕ- ಬಿ.ಪೀರ್ ಬಾಷಾ




ಕೊಪ್ಪಳ : ಕಾವ್ಯ ಸರಳವಾಗಿದ್ದು ಮಹತ್ತರವಾದದ್ದನ್ನು ಕಾವ್ಯ ಹೇಳಬೇಕು ,ಅನುಭವ- ಅರಿವಿನೊಡನೆ ಸೇರಿದಾಗ ಮಾತ್ರ ಸಕಾಲಿಕವಾಗಿ ಸಾರ್ವಕಾಲಿಕವಾಗಿರುತ್ತದೆ ಎಂದು ಯುವ ಕವಿ ಬಿ.ಪೀರ್ ಬಾಷಾ ಹೇಳಿದರು. ಅವರು ನಗರದ ಎನ್‌ಜಿಒ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೩ನೇ ಕವಿಸಮಯದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪದ ಜೋಡಣೆಯೇ ಕಾವ್ಯವಲ್ಲ. ಪದವಿನ್ಯಾಸ ಕಾವ್ಯವಾಗಬಲ್ಲದು. ಅಂತರ್ಗತ ಲಯ, ಆಳದಲ್ಲಿ ತಾತ್ವಿಕತೆಯನ್ನು ಕಾವ್ಯ ಹೊಂದಬೇಕು. ಸ್ವಂತ ರಚನೆಗಳೊಂದಿಗೆ ವಿಮರ್ಶಾತ್ಮಕ ದೃಷ್ಟಿಯನ್ನಿಟ್ಟುಕೊಂಡಾಗ ಬೆಳೆಯಬಹುದು. ಸಕಾಲಿಕ,ದಕ್ಕಿದ ಅನುಭವಗಳನ್ನು ಬಳಸಿಕೊಂಡು ಬರೆಯಬೇಕು ಎಂದು ಹೇಳಿದರು. ಕಾವ್ಯದ ಬಗ್ಗೆ ನಡೆದಷ್ಟು ಚರ್ಚೆ ಬೇರೆಯಾವುದೇ ಸಾಹಿತ್ಯ ಪ್ರಕಾರದ ಬಗ್ಗೆ ನಡೆದಿಲ್ಲ.ಕವಿ ತನ್ನ ಸಮಾಜಿಕ ಜವಾಬ್ದಾರಿಗಳನ್ನು ಅರಿತು ಬರೆಯಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರ- ರೂಪಾ ಕನ್ವರ್, ಶ್ರೀನಿವಾಸ ಚಿತ್ರಗಾರ- ಜಾದೂ, ಜಾನಪದ ಗೀತೆ, ಎನ್.ಜಡೆಯಪ್ಪ- ಧ್ವನಿ, ಮಗನ ಮಡದಿ, ರುಬಾಯಿಗಳು, ಪುಷ್ಪಾ ರಾಜಶೇಖರ ಏಳುಬಾವಿ- ಪರಿವರ್ತನೆ, ಪ್ರೀತಿ, ಬಸವರಾಜ ಸೂಳಿಬಾವಿ- ಆಯ್ದ ಕವನಗಳು, ಸುಮತಿ ಹಿರೇಮಠ- ಚರಿತ್ರೆಯಲ್ಲಿ ನಾವು, ಬೆನ್ನ ಹಿಂದಿನ ಹೆರಳು, ಸಿರಾಜ್ ಬಿಸರಳ್ಳಿ- ಬೆಂಕಿ ಹಚ್ಚಿ, ಮತ್ತೊಮ್ಮೆ ತೇರು ಎಳೆಯೋಣ ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯಲ್ಲಿ ವೀರಣ್ಣ ವಾಲಿ, ವಿನಯ ಮದರಿ, ಎ.ಎಂ.ಮದರಿ, ಶಿವಪ್ರಸಾದ ಹಾದಿಮನಿ, ನಟರಾಜ ಸವಡಿ ಭಾಗವಹಿಸಿದ್ದರು. ಜಡೆಯಪ್ಪ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, December 6, 2010

ವಿಮರ್ಶೆಗಳನ್ನು ಸ್ವೀಕರಿಸುವ ಕವಿ ಬೆಳೆಯುತ್ತಾನೆ



ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹ ತನ್ನ ೩೨ನೇ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿತ್ತು. ಈ ಸಲದ ಕವಿಸಮಯದಲ್ಲಿ ಮುಕ್ತ ಕವಿಗೋಷ್ಠಿ ಹಮ್ಮಿ ಕೊಳ್ಳಲಾಗಿತ್ತು.
ಕವಿಗೋಷ್ಠಿಯಲ್ಲಿ ನಟರಾಜ ಸವಡಿ- ಪ್ರೇಮೋತ್ಸವ,ಮುಂಜಾವು, ಮಲ್ಲಿಕಾರ್ಜುನ ಹಡಪದ- ಪ್ರೇಮ ಪತ್ರ, ಮಹಾಂತೇಶ ಮಲ್ಲನಗೌಡರ- ಈ ಲೋಕದಾಚೆ, ಜಡೆಯಪ್ಪ ಎನ್- ಚುಟುಕುಗಳು, ಎ.ಪಿ.ಅಂಗಡಿ- ಬಸ್ಸಿನಲ್ಲಿ ಹೆರಿಗೆ, ವಾಗೀಶ ಪಾಟೀಲ -ಅಳಲು, ಪುಷ್ಪಲತಾ ಏಳುಬಾವಿ- ಆಸೆ, ಮಹೇಶ ಬಳ್ಳಾರಿ-ಆಂಗ್ ಸಾನ್ ಸೂಕಿ, ಶಿವಪ್ರಸಾದ ಹಾದಿಮನಿ- ಬಸವಣ್ಣ, ಸಿರಾಜ್ ಬಿಸರಳ್ಳಿ - ಸಿದ್ದಾರ್ಥನ ಸ್ವಗತ ಕವನಗಳನ್ನು ವಾಚನ ಮಾಡಿದರು.
ಕಾವ್ಯ ವಾಚನದ ನಂತರ ಕವನಗಳ ವಿಮರ್ಶೆಯನ್ನು ಮಹಾಂತೇಶ ಮಲ್ಲನಗೌಡರ ಮತ್ತು ಎ.ಪಿ.ಅಂಗಡಿಯವರು ಮಾಡಿದರು. ನಂತರ ಕಾವ್ಯ ವಿಮರ್ಶೆಯ ಬಗ್ಗೆ ಚರ್ಚೆ ನಡೆಯಿತು. ಕವಿಗಳಿಗೆ ಮಹಾಂತೇಶ ಮಲ್ಲನಗೌಡರ ಮಾರ್ಗದರ್ಶನ ಮಾಡಿದರು. ಇತಿಹಾಸದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಹೈದ್ರಾಬಾದ್ ಕರ್ನಾಟಕದ ಸಾಹಿತಿಗಳು,ಸಾಹಿತ್ಯ ಮತ್ತು ಹೋರಾಟದ ಬಗ್ಗೆ ಚರ್ಚೆ ನಡೆತು,
ಹೈದ್ರಾಬಾದ್ ಕರ್ನಾಟಕದ ಸಾಹಿತಿಗಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸದ ಸಾಹಿತ್ಯ ಲೋಕಕ್ಕೆ ನಮ್ಮ ಯುವ ಪೀಳಿಗೆ ಸೂಕ್ತ ಉತ್ತರ ನೀಡುವಂತಾಗಬೇಕು. ಕರ್ನಾಟಕದ ಪ್ರತಿಯೊಬ್ಬರು ನಮ್ಮತ್ತ ತಿರುಗಿ ನೋಡುವಂತಹ ಸಾಹಿತ್ಯ ರಚನೆಯಾಗಬೇಕು. ದಾಸ ಸಾಹಿತ್ಯ, ಶರಣ ಸಾಹಿತ್ಯವನ್ನು ನೀಡಿದ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಲೋಕದಲ್ಲಿ ಯಾವತ್ತೂ ನಿರ್ಲಕ್ಷ್ಯಕ್ಕೊಳಗಾಗಿದೆ. ಇಲ್ಲಿಯ ಸಾಹಿತಿಗಳ,ಸಾಹಿತ್ಯದ ಕುರಿತ ಗಂಭೀರ ಚಿಂತನೆ, ವಿಮರ್ಶೆ , ಅಧ್ಯಯನ ನಡೆದೇ ಇಲ್ಲ. ಗಟ್ಟಿ ಸಾಹಿತ್ಯ ನೀಡಿರುವ , ಹೋರಾಟದ ಭೂಮಿಯಾಗಿರುವ ಹೈದ್ರಾಬಾದ್ ಕರ್ನಾಟಕದ ಇತಿಹಾಸ, ಸಾಹಿತ್ಯ ಕುರಿತ ಗಂಭೀರ ಅಧ್ಯಯನ ನಡೆಯುವಂತಾಗಬೇಕು. ಹೊಸ ಸಂವೇದನೆಗಳ ಸ್ಟೃಯಾಗಬೇಕು, ಆದರ್ಶಗಳ ಹುಡುಕಾಟ ನಡೆಯಬೇಕು ಎಂದು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕವಿಯಾದವನು ಮುಕ್ತವಾಗಿ ವಿಮರ್ಶೆಗಳಿಗೆ ತೆರೆದುಕೊಂಡಾಗ ಮಾತ್ರ ಬೆಳೆಯಲು ಸಾಧ್ಯ ಎಂದೂ ಅಭಿಪ್ರಾಯ ಪಡಲಾತು. ಚರ್ಚೆಯಲ್ಲಿ ಶಿವಪ್ರಸಾದ ಹಾದಿಮನಿ, ಸುಮತಿ ಹಿರೇಮಠ, ಸಿರಾಜ್ ಬಿಸರಳ್ಳಿ, ಮಹಾಂತೇಶ ಮಲ್ಲನಗೌಡರ, ಜಡೆಯಪ್ಪ, ಶಾಂತೇಶ,ಬಸವರಾಜ ಶೀಲವಂತರ ಭಾಗವಹಿಸಿದ್ದರು.
ಶಿವಾನಂದ ಹೊದ್ಲೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾಂತೇಶ ಮಲ್ಲನಗೌಡರ ಸ್ವಾಗತ ಕೋರಿದರು,ಜಡೆಯಪ್ಪ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, November 29, 2010

ಪ್ರಾಸಬದ್ದವಾಗಿರುವ,ಸರಳ ಕವನಗಳು ಅರುಣಾ ನರೇಂದ್ರರ ವೈಶಿಷ್ಟ್ಯ



ಕೊಪ್ಪಳ :ಪ್ರಾಸಬದ್ದವಾಗಿರುವ,ಸರಳ ಕವನಗಳು ಮಕ್ಕಳನ್ನು ತಲುಪುತ್ತವೆ. ಅವರಿಗೆ ಇಷ್ಟವಾಗುವಂತೆ ಶಿಶುಕವಿತೆಗಳು, ಶಿಶುಸಾಹಿತ್ಯ ರಚನೆಯಾಗಬೇಕು. ಮಕ್ಕಳ ಕವನಗಳಲ್ಲಿ ರೂಪಕ, ಉಪಮೆಗಳ ಭಾರಬೇಕಿಲ್ಲ. ಅವರ ಮನಸ್ಥಿತಿಗೆ ತಕ್ಕಂತಹ ಕವನಗಳಿದ್ದಾಗ ಮಾತ್ರ ಮಕ್ಕಳು ಅವನ್ನು ಇಷ್ಟಪಡುತ್ತಾರೆ. ಮಕ್ಕಳ ಜೊತೆಗಿನ ಸತತ ಒಡನಾಟ, ಅವರ ಆಸಕ್ತಿಗಳನ್ನು, ಬೇಕು ಬೇಡಗಳನ್ನು ಗಮನಿಸುತ್ತಿರಬೇಕು. ಆಗ ಶಿಶು ಕವಿತೆಗಳನ್ನು ರಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಶಿಶು ಸಾಹಿತಿಗಳು ಒಳ್ಳೆಯ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಅರುಣಾ ನರೇಂದ್ರರ ಕವನಗಳು ಮಕ್ಕಳನ್ನು ತಟ್ಟನೆ ಸೆಳೆಯುವಂತಿವೆ. ಮಕ್ಕಳ ಸಾಹಿತ್ಯ ಕೃಷಿಯಲ್ಲಿ ಹೆಸರು ಮಾಡಿರುವ ಕವಿಯತ್ರಿ ಅವರು ಎಂದು ಕವಿಸಮಯದ ಸಂವಾದದಲ್ಲಿ ಭಾಗವಹಿಸಿದ ಕವಿಗಳು ಹೇಳಿದರು.
ಮಕ್ಕಳ ಮನಸ್ಸು ಶುಭ್ರ ಹಾಳೆಯ ರೀತಿ. ಹೀಗಾಗಿ ಮಕ್ಕಳ ಸಾಹಿತ್ಯದಲ್ಲಿ ನೈತಿಕತೆ ಮುಖ್ಯ ಅಂಶವಾಗಿರಬೇಕು ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಕ್ಕಳ ಕವಿಯತ್ರಿ ಅರುಣಾ ನರೇಂದ್ರ ತಮ್ಮ ಆಯ್ದ ಕವನಗಳನ್ನು ವಾಚನ ಮಾಡಿದರು. ಸೆರಗಲ್ಲಿ ಬಚ್ಚಿಡುವೆ,ಮೊಬೈಲ್, ಮೌನದ ಹಕ್ಕಿ, ಹೋಗಬೇಡ ಅಮ್ಮ,ಮುದ್ದಿನ ಗಿಣಿ,ಹಕ್ಕು, ದೇವರ ಪಾತ್ರ, ನಾಯಿ ಮರಿ, ಅಮ್ಮನ ಸೆರಗು ಕವನಗಳ ವಾಚನ ಮಾಡಿದರು. ನಂತರ ಆ ಕವನಗಳ ಕುರಿತು ಚರ್ಚೆ ಮತ್ತು ಸಂವಾದ ನಡೆಯಿತು. ಸಂವಾದದಲ್ಲಿ ಡಾ.ವಿ.ಬಿ.ರಡ್ಡೇರ್, ಡಾ.ಮಹಾಂತೇಶ ಮಲ್ಲನಗೌಡರ, ಈಶ್ವರ ಹತ್ತಿ, ಶಿವಪ್ರಸಾದ ಹಾದಿಮನಿ,ಎನ್.ಜಡೆಯಪ್ಪ ,ಎ.ಪಿ.ಅಂಗಡಿ, ಪುಷ್ಪಲತಾ ಏಳುಬಾವಿ, ಜಿ.ಎಸ್.ಗೋನಾಳ, ಬಡಿಗೇರ ಇನ್ನಿತರರು ಭಾಗವಹಿಸಿದ್ದರು. ಅರುಣಾ ನರೇಂದ್ರರ ಪರಿಚಯ ಸಾಧನೆ ಕುರಿತು ಶಿವಪ್ರಸಾದ ಹಾದಿಮನಿ ಮಾತನಾಡಿದರು. ಎನ್.ಜಡೆಯಪ್ಪ ಸ್ವಾಗತಿಸಿದರು. ಬಸಪ್ಪ ಬಾರಕೇರ, ವೀರಣ್ಣ ಹುರಕಡ್ಲಿ, ರಾಕೇಶ್, ಬಸವರಾಜ ಶೀಲವಂತರ, ಮಲ್ಲಿಕಾರ್ಜುನ ಪಾಟೀಲ್,ಶಿವಾನಂದ ಹೊದ್ಲೂರ ಸೇರಿದಂತೆ ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Saturday, November 27, 2010

ಕವಿಸಮಯ -೩೧: ವಾರದ ಅತಿಥಿಯಾಗಿ ಶ್ರೀಮತಿ ಅರುಣಾ ನರೇಂದ್ರ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರತಿ ರವಿವಾರ ಸಂಜೆ ಜರುಗುವ ಕಾರ್‍ಯಕ್ರಮದಲ್ಲಿ ಕವಿಗಳು ತಮ್ಮ ಸ್ವಂತ ಕವಿತೆ/ಚುಟುಕು/ಶಾಯಿರಿ/ಗಜಲ್ ಗಳನ್ನು ವಾಚಿಸುವರು ,ಓದಿದ ಕವಿತೆಗಳ ಕುರಿತು ಉಪಸ್ಥಿತರಿರುವ ಹಿರಿಯ ಕವಿಗಳು ವಿಮರ್ಶಿಸುವರು.
ಶ್ರೀಮತಿ ಅರುಣಾ ನರೇಂದ್ರ ವಾರದ ಅತಿಥಿಯಾಗಿ ಆಗಮಿಸಲಿದ್ದಾರೆ.
ಕವಿಸಮೂಹದಲ್ಲಿ ಈ ವಾರ ಶ್ರೀಮತಿ ಅರುಣಾ ನರೇಂದ್ರ ಕಾವ್ಯ,ಸಾಹಿತ್ಯ ಕುರಿತು ಚರ್ಚೆ ಮತ್ತು ಸಂವಾದ ನಡೆಯಲಿದೆ.
ಈ ಕವಿ ಸಮಯ ಕಾರ್‍ಯಕ್ರಮ ರವಿವಾರ ೨೮-೧೧-೨೦೧೦ ರಂದು ನಗರದ ಪ್ರವಾಸಿ ಮಂದಿರದಲ್ಲಿ ಕವಿ ಸಮಯ ಸಂಜೆ ೪-೩೦ ಗಂಟೆಗೆ ಜರುಗಲಿದೆ. ಆಸಕ್ತರು ಮತ್ತು ಕವಿಗಳು ಭಾಗವಹಿಸಲು ಕವಿಸಮೂಹ ವಿನಂತಿಸಿದೆ. ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಶಿ.ಕಾ.ಬಡಿಗೇರ ೯೦೩೬೨೬೫೦೩೭ ಸಂಪರ್ಕಿಸಿ

Monday, November 22, 2010

ಶ್ರೀಮತಿ ವಿಮಲಾ ಇನಾಂದಾರ್ ಜಿಲ್ಲೆಯ ಯುವಕವಿಯತ್ರಿಯರಿಗೆ ಮಾದರಿ



ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತನ್ನ ೩೦ನೇ ಕಾರ್‍ಯಕ್ರಮದಲ್ಲಿ ಶ್ರೀಮತಿ ವಿಮಲಾ ಇನಾಂದಾರ್ ಅತಿಥಿಯಾಗಿ ಭಾಗವಹಿಸಿದ್ದರು. ೩೦ನೇ ಕವಿಸಮಯದಲ್ಲಿ ಹೊಸ ಪ್ರಯೋಗ ಮಾಡಲಾಗಿತ್ತು. ಶ್ರೀಮತಿ ವಿಮಲಾ ಇನಾಂದಾರ್ ರ ಕವಿತೆಗಳ ಕುರಿತು ಸಂವಾದ ಮತ್ತು ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ವಿಮಲಾ ಇನಾಂದಾರ್ ತಮ್ಮ ಮೆಚ್ಚಿನ ೬ ಕವನಗಳನ್ನು ವಾಚಿಸಿದರು. ನಂತರ ಸೇರಿದ್ದ ಹಿರಿಯ,ಕಿರಿಯ ಕವಿಗಳು ಸಂವಾದದಲ್ಲಿ ಭಾಗವಹಿಸಿದರು.
ಶ್ರೀಮತಿ ವಿಮಲಾ ಇನಾಂದಾರ್ ನಮ್ಮ ಮಕ್ಕಳು, ಗಟ್ಟಿತನ, ಕಡಲ ಮೊರೆತ, ತಾಯಿಯ ಋಣ, ಇದು ನನ್ನ ಆಸೆ,ಹಕ್ಕು ಎಂಬ ಕವನಗಳನ್ನು ವಾಚನ ಮಾಡಿ, ಕವಿತೆ ಹುಟ್ಟಿದ ಸಮಯದ ಬಗ್ಗೆ,ಕಾವ್ಯ ಸೃಷ್ಟಿಯ ಪ್ರೇರಣೆಯ ಬಗ್ಗೆ ಹೇಳಿದರು. ಇವರ ಕುರಿತು ಕವಿಯತ್ರಿ ಅರುಣಾ ನರೇಂದ್ರ ಮಾತನಾಡಿದರು.
ಕವನ ವಾಚನದ ನಂತರ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿ ವಿಮಲಾ ಇನಾಂದಾರ್ ಕವನಗಳು ಬಹಳ ಸರಳವಾಗಿ ಮನಮುಟ್ಟುವಂತಿವೆ ಎಂದರು. ಸುಮತಿ ಹಿರೇಮಠ ಕವಿಯ ಕಾಲಘಟ್ಟದ ಮೇಲೆ ಕಾವ್ಯವನ್ನು ಅಳೆಯಬೇಕು, ವಿಮಲಾ ಇನಾಂದಾರ್ ರ ಕವನಗಳಲ್ಲಿ ಇನ್ನಷ್ಟು ಗಟ್ಟಿತನ ಬೇಕು ಎಂದರು. ಕಾವ್ಯದಲ್ಲಿ ಗಟ್ಟಿತನದ ಬಗ್ಗೆ ಚರ್ಚೆ ನಡೆಯಿತು. ಪುಷ್ಪಲತಾ ಏಳುಬಾವಿ- ನಮ್ಮ ಮಕ್ಕಳು ಕವಿತೆಯಲ್ಲಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆನ್ನುವ ಆಶಯ ಇದೆ ಎಂದರು. ಕವನಗಳ ಕುರಿತು ರೇಣುಕಾ ಕರಿಗಾರ, ಶಾಂತಾದೇವಿ ಹಿರೇಮಠ, ಎಸ್.ಎಂ.ಕಂಬಾಳಿಮಠ,ಬಸವರಾಜ ಶೀಲವಂತರ ಮಾತನಾಡಿದರು.
ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ನಮ್ಮ ಮಕ್ಕಳು ಶಿಶು ಗೀತೆಗೆ ಉತ್ತಮ ಉದಾಹರನೆ, ಗಟ್ಟಿತನ ಕವನದಲ್ಲಿ ವಾಚ್ಯತೆ ಕಂಡುಬರುತ್ತದೆ. ಮಾತುಗಳಲ್ಲಿ ಹೇಳಲಾಗದ್ದನ್ನು ಕಾವ್ಯದ ಮೂಲಕ ಹೇಳಬೇಕು. ಆ ರೀತಿಯ ಕಾವ್ಯದ ಲಕ್ಷಣಗಳನ್ನು ಅವರ ಕಡಲ ಮೊರೆತ ಕವನದಲ್ಲಿ ಸಹಜವಾಗಿ ಮೂಡಿಬಂದಿದೆ. ಹೆಸರಿನ ಹಂಬಲ ಮೀರಿ ಕಾಲಾತೀತವಾದ ದಾರ್ಶನಿಕ ಭಾವ ಕವಿಯಲ್ಲಿ ಒಳಗೊಂಡಿದ್ದಾಗ ಹೆಚ್ಚು ಮಹತ್ವದ ಕಾವ್ಯ ಮೂಡಿ ಬರಲು ಸಾಧ್ಯ, ಕೊಪ್ಪಳ ಜಿಲ್ಲೆಯಲ್ಲಿ ವಿಮಲಾ ಇನಾಂದಾರ್ ರಂತಹ ಹಿರಿಯ ಕವಿಯತ್ರಿಯರು ಅನೇಕ ಕಿರಿಯರಿಗೆ ಮಾದರಿಯಾಗಿದ್ದಾರೆ. ಕವಿಯತ್ರಿಯರು ಕವಿಸಮಯದ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಹೊರ ಬರುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್‍ಯಕ್ರಮದಲ್ಲಿ ಭುಜಂಗಸ್ವಾಮಿ ಇನಾಂದಾರ್, ವೀರಣ್ಣ ಹುರಕಡ್ಲಿ, ಹನುಮಂತಪ್ಪ ಅಂಡಗಿ,ತಿಪ್ಪೆಸ್ವಾಮಿ ಬೋಧಾ,ಕನಕಪ್ಪ ತಳವಾರ,ಮೆಹಮೂದಮಿಯಾ, ಲಕ್ಷ್ಮಿ ಶೆಟ್ಟರ್,ಸವಡಿ ಶಿವಪ್ರಸಾದ ಹಾದಿಮನಿ, ಶಾಂತೇಶ,ಜಡೆಯಪ್ಪ ಎನ್. ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ ಕೋರಿದರೆ, ಕಾರ್‍ಯಕ್ರಮವನ್ನು ಶಿ.ಕಾ.ಬಡಿಗೇರ ನಡೆಸಿಕೊಟ್ಟರು.

Wednesday, November 17, 2010

ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳು ರಚನೆಯಾಗಲಿ




ಕೊಪ್ಪಳ : ಕವಿತೆ ಎನ್ನುವುದು ಒಳಾರ್ಥದೊಂದಿಗೆ ಮೂಡಿಬಂದಾಗ ಒಳ್ಳೆಯ ಪರಿಣಾಮ ಬೀರುತ್ತದೆ. ಕವಿತೆ ಗಧ್ಯದಷ್ಟು ಸುಲಭವಲ್ಲ . ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳು , ಸಾರ್‍ವಕಾಲಿಕ ಕವನಗಳ ರಚನೆಯಾಗಬೇಕು ಎಂದು ಯುವ ಬರಹಗಾರ ಬಸವರಾಜ ಮೂಲಿಮನಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಜಡೆಯಪ್ಪ ಎನ್- ಕನಸು ಕಂಡಿದ್ದೀಯಾ ನೀನು?, ಶಿ.ಕಾ.ಬಡಿಗೇರ- ಬಾಲ್ಯದ ಬಣ್ಣದೊಳಗೆ ಮಿಂದು, ವಿಮಲಾ ಇನಾಂದಾರ್- ನಾಡಗೀತೆ, ಶಾಂತಾದೇವಿ ಹಿರೇಮಠ- ಬಣ್ಣದ ಕಾರಂಜಿ, ಪುಷ್ಪಲತಾ ಏಳುಬಾವಿ- ಪಾರಿವಾಳ, ಶಿವಾನಂದ ಹೊದ್ಲೂರ- ಅಬುರವರ ಕವನ, ಡಾ.ಮಹಾಂತೇಶ ಮಲ್ಲನಗೌಡರ- ಕಾಮನಬಿಲ್ಲು, ಅಲ್ಲಮಪ್ರಭು ಬೆಟ್ಟದೂರ- ಮಹಾಸ್ವಾಮಿಗಳು ಬರುತ್ತಿದ್ದಾರೆ ಎಚ್ಚರಿಕೆ, ವಾಸುದೇವ ಕುಲಕರ್ಣಿ- ಬಸ್ಸಿನಲ್ಲಿ ಹಿಂದುಳಿದವರು, ಸಿರಾಜ್ ಬಿಸರಳ್ಳಿ- ಚುಟುಕು, ಶಾಯಿರಿಗಳು, ಎ.ಪಿ.ಅಂಗಡಿ- ಸೊಳ್ಳೆಗಳು ಸಾರ್ ಸೊಳ್ಳೆಗಳು, ಶಾಂತೇಶ ಬಡಿಗೇರ-ಹೃದಯ ಮಿಡಿತ, ಅರುಣಾ ನರೇಂದ್ರ- ಕೊಡೆ ಚುಟುಕು, ವಿಠ್ಠಪ್ಪ ಗೋರಂಟ್ಲಿ, ಕನಸು ಬಿತ್ತಿ ಕಣ್ಮರೆಯಾದ ವಿಭಾ, ವೀರಣ್ಣ ಹುರಕಡ್ಲಿ- ಮಾತು, ಕನಕಪ್ಪ ತಳವಾರ- ಚೆನ್ನವೀರ ಕಣವಿ, ಎಸ್.ಎಂ.ಕಂಬಾಳಿಮಠ- ಅಸ್ತು, ಅಮ್ಮಾ-ಅಪ್ಪ, ತಿಪ್ಪೆಸ್ವಾಮಿ ಬೋಧಾ- ಅಕ್ಕಮಹಾದೇವಿ, ಜಿ.ಎಸ್.ಬಾರಕೇರ- ಚಾಚಾ ನೆಹರು ಕವನಗಳನ್ನು ವಾಚನ ಮಾಡಿದರು.
ಮುಂದಿನ ವಾರ ಶ್ರೀಮತಿ ವಿಮಲಾ ಇನಾಂದಾರ್ ರ ಕಾವ್ಯ ಕುರಿತು ವಿಮರ್ಶೆ ಹಾಗೂ ಚರ್ಚೆ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜಶೇಖರ ಅಂಗಡಿ,ಭುಜಂಗಸ್ವಾಮಿ ಹಿರೇಮಠ ,ಮಾನಪ್ಪ ಬೆಲ್ಲದ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಿಠ್ಠಪ್ಪ ಗೋರಂಟ್ಲಿಯವರು ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Saturday, November 13, 2010

ಕವಿಸಮಯ ಕಾರ್‍ಯಕ್ರಮ-೨೯: ವಾರದ ಅತಿಥಿಯಾಗಿ ಯುವ ಬರಹಗಾರ ಬಸವರಾಜ್ ಮೂಲಿಮನಿ


ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್‍ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರತಿ ರವಿವಾರ ಸಂಜೆ ಜರುಗುವ ಕಾರ್‍ಯಕ್ರಮದಲ್ಲಿ ಕವಿಗಳು ತಮ್ಮ ಸ್ವಂತ ಕವಿತೆ/ಚುಟುಕು/ಶಾಯಿರಿ/ಗಜಲ್ ಗಳನ್ನು ವಾಚಿಸುವರು ,ಓದಿದ ಕವಿತೆಗಳ ಕುರಿತು ಉಪಸ್ಥಿತರಿರುವ ಹಿರಿಯ ಕವಿಗಳು ವಿಮರ್ಶಿಸುವರು.
ಯುವ ಬರಹಗಾರ ಬಸವರಾಜ್ ಮೂಲಿಮನಿ ವಾರದ ಅತಿಥಿಯಾಗಿ ಆಗಮಿಸಿ ಕವನಗಳ ವಿಮರ್ಶೆ ಮಾಡಲಿದ್ದಾರೆ.
ಈ ಕವಿ ಸಮಯ ಕಾರ್‍ಯಕ್ರಮ ರವಿವಾರ ೧೪-೧೧-೨೦೧೦ ರಂದು ನಗರದ ಪ್ರವಾಸಿ ಮಂದಿರದಲ್ಲಿ ಕವಿ ಸಮಯ ಸಂಜೆ ೪-೩೦ ಗಂಟೆಗೆ ಜರುಗಲಿದೆ. ಆಸಕ್ತರು ಮತ್ತು ಕವಿಗಳು ಭಾಗವಹಿಸಲು ಕವಿಸಮೂಹ ವಿನಂತಿಸಿದೆ. ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಶಿ.ಕಾ.ಬಡಿಗೇರ ೯೦೩೬೨೬೫೦೩೭ ಸಂಪರ್ಕಿಸಿ

Tuesday, November 9, 2010

ಹಿರಿಯ ಕವಿಗಳ ಮಾರ್ಗದರ್ಶನ ಅವಶ್ಯಕ- ಶಿವಪ್ರಸಾದ ಹಾದಿಮನಿ



ಕೊಪ್ಪಳ : ಎಲ್ಲರೂ ಹೇಳಿದ ಮಾತುಗಳನ್ನೇ ಹೇಳುವುದರಲ್ಲಿ ಅರ್ಥವಿಲ್ಲ. ಹಿರಿಯ ಕವಿಗಳ ಮಾರ್ಗದರ್ಶನ ಯುವಕವಿಗಳಿಗೆ ಅವಶ್ಯಕ ಮತ್ತು ಅವರು ಹೇಳಿದ ಮಾತುಗಳನ್ನು ಕಾವ್ಯ ರಚನೆಯಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಗಟ್ಟಿ ಕಾವ್ಯ ಸಾಧ್ಯ ಎಂದು ಯುವ ಕವಿ ಶಿವಪ್ರಸಾದ ಹಾದಿಮನಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ಕವಿಸಮಯ 28ನೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಸಮಾನ ಮನಸ್ಕರ ಬೆರೆಯುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ ಅವರು ಮುಕ್ತವಾಗಿ ಕವನಗಳ ವಿಮರ್ಶೆಮಾಡಿ ನಾನು ಮಾಡುತ್ತಿರುವುದು ವಿಮರ್ಶೆ ಅಲ್ಲ ಅವಲೋಕನ ಎಂದು ಹೇಳಿ ಸರಳವಾಗಿ ಕವನಗಳ ಕುರಿತು ಮಾತನಾಡಿದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ 20 ಕವಿಗಳು ತಮ್ಮ ಕವನ ವಾಚನ ಮಾಡಿದರು.

ಎ.ಪಿ.ಅಂಗಡಿ- ಪಟಾಕಿ, ಡಾ.ಮಹಾಂತೇಶ ಮಲ್ಲನಗೌಡರ- ಹಾಡು ಬಾರೆಲೆ ಕೋಗಿಲೆ, ಪುಷ್ಪಲತಾ ಏಳುಬಾವಿ- ಪಾಪದ ಹೂಗಳು, ಸುಮತಿ- ಪ್ರೀತಿಗೆ ಶ್ರದ್ದಾಂಜಲಿ, ಭಾವಬಿಂಬ,ಶಾಂತಾದೇವಿ ಹಿರೇಮಠ-ಚುಟುಕುಗಳು, ಲಕ್ಷ್ಮೀ ನಾಯಕ್-ಪ್ರೀತಿ, ಶಿ.ಕಾ.ಬಡಿಗೇರ-ಸಹಬಾಳ್ಬೆ,ಜಡೆಯಪ್ಪ-ದೀಪಾವಳಿ, ನೀ ಬದುಕಬಲ್ಲೆ, ವಿಠ್ಠಪ್ಪ ಗೋರಂಟ್ಲಿ- ಬರಾಕೋಗ್ಬೆಡಮಾ, ಎಸ್.ಎಂ.ಕಂಬಾಳಿಮಠ-ಇದ್ರ ಹೇಳ್ರಿ, ನಟರಾಜ ಸವಡಿ- ನೆರೆಹಾವಳಿ, ಸಿರಾಜ್ ಬಿಸರಳ್ಳಿ- ಸಿಕ್ಕುಗಳು, ಪ್ರೋ.ಅಲ್ಲಮಪ್ರಭು ಬೆಟ್ಟದೂರು-ಕವಿತೆ ಚುಟುಕುಗಳು,ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್- ಕವಿತೆ, ಡಾ.ಮಾರ್ಕಂಡಯ್ಯ ಹಂದ್ರಾಳ -ಚುಟುಕು, ಭರತೇಶ್ -ಯಾರಿವಳು, ಶಿವಾನಂದ ಹೊದ್ಲೂರ-ಕನ್ನಡಾಂಭೆ, ತುಳಸಿಪ್ರಿಯ- ನೀರಜೆ ಚುಟುಕು, ತಿಪ್ಪೇಸ್ವಾಮಿ ಭೋದಾ- ಕಾಯಕ ದಾಸೋಹ, ವಾಗೀಶ ಪಾಟೀಲ್-ನೆನಪುಗಳು ಕವನಗಳನ್ನು ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ ಶಿವಪ್ರಸಾದ ಹಾದಿಮನಿ ಕುರಿತು ಮಾತನಾಡಿದರು. ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.

Monday, November 1, 2010

ಕೋಮುವಾದವನ್ನು ಹತ್ತಿಕ್ಕಲು ಸಾಹಿತಿಗಳು ಮನುಷ್ಯ ಪ್ರೇಮ ಬೆಳೆಸಬೇಕು- ಮಕಾನದಾರ


ಕೊಪ್ಪಳ : ಜೀವನವನ್ನೇ ನರಕ ಮಾಡುತ್ತಿರುವ ,ಮನುಷ್ಯ ಮನುಷ್ಯರ ನಡುವೆ ಕಂದಕ ನಿರ್ಮಿಸಿ ಕೋಮುಸೌಹಾರ್ಧಕ್ಕೆ ದಕ್ಕೆ ತಂದು ಮಾರಣಹೋಮ ಮಾಡುತ್ತಿರುವವರಲ್ಲಿ ಮನುಷ್ಯ ಪ್ರೇಮ ಬೆಳೆಸಬೇಕು. ಇದು ಸಾಹಿತ್ಯದಿಂದ, ಕಾವ್ಯದಿಂದ ಸಾಧ್ಯ, ಸಾಹಿತಿಗಳು ಮನುಷ್ಯ ಪ್ರೇಮ ಬೆಳೆಸಬೇಕು ಎಂದು ಬಂಡಾಯ ಸಾಹಿತಿ ಗದಗಿನ ಎ.ಎಸ್.ಮಕಾನದಾರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸೂಫಿ ಸಂತರು ನಡೆದಾಡಿದಂತಹ ಸ್ಥಳಗಳಲ್ಲಿ ಕೋಮುವಾದದ ಬೀಜ ಬಿತ್ತಿ ಕೋಮು ಗಲಭೆ ನಡೆಸಲಾಗುತ್ತಿದೆ. ಜಾತಿ,ಜನಾಂಗ.ಭಾಷೆಯ ಎಲ್ಲ ಕಟ್ಟು ಪಾಡುಗಳನ್ನು ಮೀರಿ ಮನುಷ್ಯತ್ವದೆಡೆಗೆ, ಸೌಹರ್ಧತೆಯೆಡೆಗೆ,ಸಾಮರಸ್ಯದೆಡೆಗೆ ಸಾಗಿದ ಸೂಫಿ ಸಂತರ ವಿಚಾರಗಳ ಪ್ರಚಾರವಾಗಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದರು.

ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವಾಗೀಶ ಪಾಟೀಲ-ಕ್ರಾಂತಿ, ಬಸಪ್ಪ ಬಾರಕೇರ-ಆಧುನೀಕ ವಚನಗಳು, ಮಹಾಂತೇಶ ಮಲ್ಲನಗೌಡರ-ಕನ್ನಡ ಜ್ಯೋತಿ, ಮಹೇಶ ಬಳ್ಳಾರಿ-ಕಟ್ಟುತ್ತೇವೆ, ಶಿವಪ್ರಸಾದ ಹಾದಿಮನಿ-ಚುಟುಕು, ಎ.ಪಿ.ಅಂಗಡಿ-ಶಿಶುಗೀತೆ, ಜಡೆಯಪ್ಪ- ಗಲ್ಲ, ಹಂದಿಗಳು, ಎ.ಎಸ್.ಮಕಾನದಾರ - ಅಣ್ಣಪ್ಪನಿಗೊಂದು ಮನವಿ, ಸಿರಾಜ್ ಬಿಸರಳ್ಳಿ-ಕನ್ನಡತಿ, ಬಿ.ಎಸ್.ಪಾಟೀಲ್-ಮಧ್ಯಮರು, ಗೋವಿಂದರಾಜ್ ಸಿದ್ದಾಂತಿ -ದೇಶಭಕ್ತಿಗೀತೆ, ಶಾಂತಾದೇವಿ ಹಿರೇಮಠ- ರಾಜ್ಯೋತ್ಸವ ನಾಡಹಬ್ಬ,ಮಹೆಬೂಬ ಮಕಾನದಾರ- ಹನಿಗವನ, ವಿಠ್ಠಪ್ಪ ಗೋರಂಟ್ಲಿ- ಚುಟುಕುಗಳ ವಾಚನ ಮಾಡಿದರು. ಕವಿಗೋಷ್ಠಿಯ ನಂತರ ಎ.ಎಸ್.ಮಕಾನದಾರರ ಸಾಹಿತ್ಯ ಕುರಿತ ಸಂವಾದ ನಡೆಯಿತು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಎ.ಎಸ್.ಮಕಾನದಾರರ ವಿಶ್ವ ಭ್ರಾತೃತ್ವದ ಸೂಫಿ ದೂದಪೀರಾಂ ಕೃತಿಯ ಬಗ್ಗೆ ಮಾತನಾಡಿ ಸೂಪಿ ಸಂತರ ವಿಚಾರಗಳನ್ನು ತಿಳಿಸಿದರು. ಶಿವಪ್ರಸಾದ ಹಾದಿಮನಿ- ಎದೆ ಸುಡುವ ನೆನಪುಗಳು ಕವನ ಸಂಕಲನದ ಬಗ್ಗೆ, ಎ.ಪಿ.ಅಂಗಡಿ-ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ ಕುರಿತು ಮಾತನಾಡಿದರು., ಜಡೆಯಪ್ಪ ನಾವೇ ಅಲ್ಲವೇ ಕವನವನ್ನು ಉಲ್ಲೇಖಿಸಿ ಮಾತನಾಡಿದರು. ಎ.ಎಸ್.ಮಕಾನದಾರ ಕೊಪ್ಪಳ ಜಿಲ್ಲೆಯ ಸಾಹಿತಿಗಳು ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Monday, October 25, 2010

ಹಳೆಯ ಪರಂಪರೆಯ ಕಾವ್ಯವನ್ನು ಯುವಕವಿಗಳು ಓದಬೇಕು- ವೀರಣ್ಣ ವಾಲಿ


ಕೊಪ್ಪಳ : ಕಾವ್ಯ ಸಾಂಸ್ಕೃತಿಕ ಮಡಿಲನ್ನು ಕಟ್ಟುತ್ತದೆ. ಕಾವ್ಯಂ ರಸಾತ್ಮಕ ವಾಕ್ಯಂ ಎನ್ನುವಂತೆ ಕಾವ್ಯದಲ್ಲಿ ರಸಬೇಕು. ಜೀವನದ ಅಭಿವ್ಯಕ್ತಿಯೇ ಕಾವ್ಯ. ನಮ್ಮ ಸಧ್ಯದ ಸಾಮಾಜಿಕ ಅವ್ಯವಸ್ಥೆಯನ್ನು ಎದುರಿಸುವುದಕ್ಕೆ ಕಾವ್ಯ ಪ್ರಭಾವಶಾಲಿ ಮಾಧ್ಯಮ,ಸಾಹಿತ್ಯ ಯಾವತ್ತೂ ನಿಂತ ನೀರಲ್ಲ ಅದು ನಿರಂತರ ಚಲನಶೀಲತ್ವ ಹೊಂದಿದೆ. ನಮ್ಮ ಕಾವ್ಯ ಪರಂಪರೆಯು ಶ್ರೀಮಂತವಾದುದು. ಯುವಕವಿಗಳು ಹೆಚ್ಚಿನ ಅಧ್ಯಯನ ಮಾಡಬೇಕು. ಹಳೆಯ ಪರಂಪರೆಯ ಕಾವ್ಯವನ್ನು ಓದುವದರ ಮೂಲಕ ತಮ್ಮ ಕಾವ್ಯವನ್ನು ಗಟ್ಟಿಗೊಳಿಸಿಕೊಳ್ಳುವತ್ತ ಸಾಗಬೇಕು ಎಂದು ಬಂಡಾಯ ಕವಿ ವೀರಣ್ಣ ವಾಲಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನ್ಯಭಾಷಾ ಸಾಹಿತ್ಯವನ್ನು ಓದುವುದರಿಂದ ಬೆಳವಣಿಗೆ ಸಾಧ್ಯ,ನಿರಂತರ ಅಧ್ಯಯನ ಶೀಲತೆಯಿಂದ ಸಮೃದ್ದ, ಗಟ್ಟಿಯಾದ ಕಾವ್ಯ ರಚನೆ ಸಾಧ್ಯ ಅದರತ್ತ ಯುವ ಕವಿಗಳು ಗಮನ ಹರಿಸಬೇಕು ಎಂದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎನ್.ಜಡಿಯಪ್ಪ- ಒಳಬರಬೇಡ ಹೊರಗೆ ನಿಲ್ಲು, ಶಿವಪ್ರಸಾದ ಹಾದಿಮನಿ-ಹಗರಣಗಳು ಎಷ್ಟು ಬಲ್ಲಿರಾ?, ಶಾಂತಪ್ಪ ಬಡಿಗೇರ-ಭೂದೇವಿ, ಎಂ.ಎಸ್.ಕಂಬಾಳಿಮಠ-ಭುವಿಯ ಬಾನು,ಶಿ.ಕಾ.ಬಡಿಗೇರ-ನಮನ,ವಾಗೀಶ ಪಾಟೀಲ್- ಆ ದಿನಗಳು, ಮಲ್ಲಿಕಾರ್‍ಜುನ - ಅರ್ಥ, ಶ್ರೀಮತಿ ಅರುಣಾ ನರೇಂದ್ರ- ಆಧುನಿಕ ವಚನಗಳು ಕವನಗಳನ್ನು ವಾಚನ ಮಾಡಿದರು. ವೀರಣ್ಣ ಹುರಕಡ್ಲಿ, ತಿಪ್ಪೇಸ್ವಾಮಿ ಭೋದಾ, ಗಿರೀಶ ಹೊನ್ನಾಳು ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಎನ್.ಜಡೆಯಪ್ಪ ,ವಂದನಾರ್ಪಣೆ- ಎಸ್.ಎಂ.ಕಂಬಾಳಿಮಠ ಮಾಡಿದರು. ಶಿ.ಕಾ.ಬಡಿಗೇರ ಕಾರ್‍ಯಕ್ರಮ ನಿರೂಪಿಸಿದರು.

Monday, October 18, 2010

ಕವಿಗೆ ಬದ್ದತೆ ಇರಬೇಕು - ಡಾ.ಮಹಾಂತೇಶ ಮಲ್ಲನಗೌಡರ



ಕೊಪ್ಪಳ : ಕವಿ ಸ್ವಸಂತೊಷಕ್ಕಾಗಿ ರಚಿಸಿದ ಕವಿತೆ ಎಲ್ಲರಿಗೂ ತಲುಪಬೇಕು. ಓದುಗರು ಅವರವರ ಭಾವನೆಗಳಿಗೆ ತಕ್ಕಂತೆ ಕವನವನ್ನು ಅರ್ಥೈಸಿಕೊಳ್ಳುತ್ತಾರೆ. ಹೀಗಾಗಿ ಕವನಗಳು ನಾನಾ ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಹಾಡುವುದು ಅನಿವಾರ್‍ಯ ಕರ್ಮ ನನಗೆ ಎನ್ನುವಂತೆ ವಿಮರ್ಶೆಗಳಿಗೆ ಅಂಜದೇ ಕವಿ ಬರೆಯುತ್ತಾ ಹೋಗಬೇಕು . ಕವಿಯಾದವನು ಸಮಾಜದೊಂದಿಗೆ ಹೋರಾಟಕ್ಕಿಳಿಯುತ್ತಾನೆ. ಸ್ವಂತ ಬದುಕು ಮತ್ತು ಸಾಮಾಜಿಕ ಬದುಕುಗಳ ನಡುವೆ ಹೋರಾಡುತ್ತ ಕವಿತೆ ಬರೆಯುವ ಕವಿಗೆ ಬದ್ದತೆ ಇರಬೇಕು ಎಂದು ಹಿರಿಯ ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಕಾವ್ಯದ ವಿಮರ್ಶೆ ಮಾಡಿ ಮಾತನಾಡುತ್ತಿದ್ದರು. ಇತ್ತೀಚಿಗೆ ಬದ್ದತೆ ಇರುವ ಕವಿಗಳು, ಸಾಹಿತಿಗಳು ಕಡಿಮೆಯಾಗುತ್ತಿದ್ದಾರೆ ಸಾಮಾಜಿಕ ಜೀವನದಲ್ಲಿ ಹೋರಾಟದ ಬದಲು ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಿದ್ದಾರೆ ಎಂದು ಅವರು ವಿಷಾಧಿಸಿದರು.
ಡಾ.ಮಹಾಂತೇಶ ಮಲ್ಲನಗೌಡರು ಭಾವಪೂರ್ಣವಾಗಿ ತಮ್ಮ ಭಾವಗೀತೆಯನ್ನು ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದಕ್ಕೂ ಮೊದಲು ನಡೆದ ಕವನ ವಾಚನದಲ್ಲಿ ಶಿವಪ್ರಸಾದ ಹಾದಿಮನಿ- ರಸ ಋಷಿಗೆ ನಮನ, ಎನ್.ಜಡೆಯಪ್ಪ- ಚುಟುಕುಗಳು, ರಮೇಶ ಬನ್ನಿಕೊಪ್ಪ-ವಿಮೋಚನೆ, ಶಿ.ಕಾ.ಬಡಿಗೇರ-ಒಡಲ ದನಿ, ಮಹೇಶ ಬಳ್ಳಾರಿ-ನಿತ್ಯಾನಂದ, ಸಿರಾಜ್ ಬಿಸರಳ್ಳಿ- ತೇರು ಎಳೆಯೋಣ, ಎ.ಪಿ.ಅಂಗಡಿ- ಕಿನ್ನಾಳದ ಗೊಂಬೆಗಳು, ಬಸಪ್ಪ ಬಾರಕೇರ- ವಚನಗಳು, ಪುಷ್ಪಲತಾ ಏಳುಬಾವಿ- ಹೈಕುಗಳು, ಶಾಂತೇಶ ಬಡಿಗೇರ- ಅಂಬೆ ಕವನಗಳನ್ನು ವಾಚನ ಮಾಡಿದರು. ಮಹೇಶ ಬಳ್ಳಾರಿ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, October 11, 2010

ಸಮಾಜ ಮುಖಿ ಕಾವ್ಯ ಸೃಷ್ಟಿಯಾಗಲಿ- ಈಶ್ವರ ಹತ್ತಿ




ಕೊಪ್ಪಳ : ಇಂದಿನ ಬದುಕು ಅಸ್ತಿರತೆ,ತಳಮಳದಿಂದ ಕೂಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕವಿ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜಮುಖಿ ಕಾವ್ಯ ರಚಿಸಬೇಕು ಎಂದು ವಿಮರ್ಶಕ,ಕವಿ ಈಶ್ವರ ಹತ್ತಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾವ್ಯ ಎನ್ನುವುದು ಜೀವನಾನುಭವವಾಗಿರಬೇಕು, ಕಿರಿದಾದ ಶಬ್ದಗಳಲ್ಲಿ ದೊಡ್ಡ ಅರ್ಥವನ್ನು ನೀಡುವಂತಾಗಬೇಕು. ಇದಕ್ಕಾಗಿ ಯುವಕವಿಗಳು ಹಿರಿಯ ಕವಿಗಳ ಕಾವ್ಯವನ್ನು ಓದಬೇಕು, ಭಾಷೆಯನ್ನು ಸರಿಯಾಗಿ ದುಡಿಸಿಕೊಳ್ಳಬೇಕು. ಮೊದಲು ಕಾವ್ಯ ಕವಿಗೆ ಆನಂದ ನೀಡಿದರೆ ಅದು ಎಲ್ಲರಿಗೂ ತಲುಪುತ್ತದೆ. ಕಾಟಾಚಾರಕ್ಕೆ ಎಂಬಂತೆ ಬರೆದರೆ ಅದು ಕಾವ್ಯವಾಗಲಾರದು,ಕಾವ್ಯದ ಲಕ್ಷಣಗಳ ಬಗ್ಗೆ ಅರಿವಿಟ್ಟುಕೊಂಡು ಕಲಾತ್ಮಕವಾಗಿ ಬರೆದಾಗ ಕಾವ್ಯ ನಿಲ್ಲುತ್ತದೆ ಎಂದು ಹೇಳಿದರು.
ಕವಿಸಮಯದಲ್ಲಿ ಶಿವಪ್ಪ ಶೆಟ್ಟರ್-ನೀನೇ ನೀನು, ಎನ್.ಜಡೆಯಪ್ಪ-ಗಾಂಧಿ ಕನಸು,ಮಲ್ಲಿಕಾರ್ಜುನ- ಅಂಧಕಾರ, ಶಾಂತಾದೇವಿ ಹಿರೇಮಠ- ಒಲಿದರೆ ನಾರಿ ಮುನಿದರೆ ಮಾರಿ, ಎಸ್.ಎಂ.ಕಂಬಾಳಿಮಠ- ಕೇಳಿ, ಹರಿಯಲು ಬಿಡಿ, ನಾಗೇಂದ್ರ ಪ್ರಸಾದ ಕಾಮನೂರ-ಇನ್ನಾದರೂ ನೆಟ್ಟಗಾಗಿರಿ, ಶಿ.ಕಾ.ಬಡಿಗೇರ- ಒಡಲ ದನಿ, ವೀರಣ್ಣ ಹುರಕಡ್ಲಿ- ಇಂದಿನ ಆದರ್ಶ ಜೀವಿಗಳು, ಸಿರಾಜ್ ಬಿಸರಳ್ಳಿ-ಭರವಸೆ,ಸುಮತಿ-ಮುಖ ಮುಖವಾಡಗಳು, ಪುಷ್ಪಲತಾ ಏಳುಬಾವಿ- ಮರಳು, ಗಜಲ್, ರಮೇಶ ಬನ್ನಿಕೊಪ್ಪ- ಈ ಸ್ವಾಮಿಯರೇ ಹೀಗೆ, ಈಶ್ವರ ಹತ್ತಿ- ತ್ರಿಪದಿಗಳು, ಬಸವರಾಜ್ ಸೂಳಿಬಾವಿ- ಹಾಯ್ಕುಗಳು, ಅರೀಪ್ ರಾಜಾರ ಕವನಗಳನ್ನು ವಾಚನ ಮಾಡಿದರು.
ತಿಪ್ಪೆಸ್ವಾಮಿ ಬೋದಾ,ಹಿರಿಯ ಪತ್ರಕರ್ತರಾದ ಬಸವರಾಜ ಶೀಲವಂತರ, ಬಸವರಾಜ ಸೂಳಿಬಾವಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ಸ್ವಾಗತಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, October 4, 2010

ಹಂತ ಹಂತವಾಗಿ ಕವಿ ಬೆಳೆಯುತ್ತಾ ಹೋಗಬೇಕು - ಶಾಂತಾದೇವಿ ಹಿರೇಮಠ : ಕವಿಯ ಮನಸ್ಸು ಪ್ರಯೋಗಶೀಲವಾಗಿರಬೇಕು- ವಿ.ಹರಿನಾಥಬಾಬು





ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹದ ೨೩ನೇ ಕವಿಸಮಯ ಕಾರ್‍ಕ್ರಮ ವಿಶೇಷವಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ಹಿರಿಯ ಕವಿಯತ್ರಿ ಬೆಳೆಯುವ ಕವಿಗಳಿಗೆ "ಅಂಬೆಗಾಲಿಡುವ ಮಗುವಿನಂತೆ ಕವಿ ಬೆಳೆಯುತ್ತಾ ಹೋಗಬೇಕು. ಯಾರೂ ಒಮ್ಮೇಲೆ ಶ್ರೇಷ್ಠ ಕವಿಯಾಗಲು ಸಾಧ್ಯವಿಲ್ಲ. ನಿರಂತರ ಓದು,ಜೀವನಾನುಭವ ಕವಿಯನ್ನು ಬೆಳೆಸುತ್ತದೆ. ಎಲ್ಲ ಹಿರಿಯ ಕಿರಿಯರ ಕವನಗಳನ್ನು ಓದುತ್ತಾ ಬೆಳೆಯುತ್ತಾ ಹೋಗಬೇಕು ಎಂದು ಹೇಳಿದರು. ಯುವಕವಿಗಳು ವಿಮರ್ಶೆಗೆ ಹೆದರಿ ಬರೆಯುವುದನ್ನು ನಿಲ್ಲಿಸಬಾರದು.ಸ್ವವಿಮರ್ಶೆ ಮಾಡಿಕೊಳ್ಳುತ್ತ ಉತ್ತಮ ಕಾವ್ಯ ರಚನೆಯಲ್ಲಿ ತೊಡಗಬೇಕು. ತಾವು ಇನ್ನೂ ಕಲಿಯುವ ಕವಿಯತ್ರಿ, ತಮಗೆ ಎಲ್ಲರ ಮಾರ್ಗದರ್ಶನ ಅಗತ್ಯ ಎನ್ನುವ ಮೂಲಕ ಸೌಜನ್ಯ ಮೆರೆದರು.
ಕವಿಸಮಯದಲ್ಲಿ ೨೨ ಕವಿಗಳು ಕವನ ವಾಚನ ಮಾಡಿದರು. ಕವನಗಳ ವಿಮರ್ಶೆಯನ್ನು ಇನ್ನೊರ್ವ ಅತಿಥಿ ಕವಿ ವಿ.ಹರಿನಾಥ ಬಾಬು ಮಾಡಿದರು. ಕವನಗಳ ವಿಶ್ಲೇಷಣೆ ಮಾಡಿ ಮಾತನಾಡಿದ ಅವರು "ಕವಿ ಎನ್ನುವ ಕ್ರಿಯಾಪದದಂತೆ ಕವಿಯಾದವನು ಎಲ್ಲವನ್ನೂ,ಎಲ್ಲರನ್ನೂ ಆವರಿಸಿಕೊಳ್ಳಬೇಕು. ನಮ್ಮ ಕವಿತೆಗಳು ಎಲ್ಲರನ್ನು ಸಮ್ಮೋಹನಗೊಳಿಸುವಂತಿರಬೇಕು. ಸಶಕ್ತವಾದ ಪದಗಳ ಬಳಕೆ ಕವಿತೆಗೆ ತೂಕ ನೀಡುತ್ತದೆ. ಭಾಷೆಯನ್ನು ಒಡೆದು ಕಟ್ಟುತ್ತಾ ಹೋಗಬೇಕು.ಹಾಗಾದಾಗ ಹೊಸದನ್ನು ಕಟ್ಟಲು ಸಾಧ್ಯ. ಕವಿತೆಗೆ ರೂಪಕ,ಉಪಮೆ, ಅಲಂಕಾರಗಳು ಬೇಕು. ಆದರೆ ಅವೇ ಕವನಕ್ಕೆ ಭಾರವಾಗುವಂತಿರಬಾರದು. ನಿರಂತರ ಗಂಭೀರವಾದ ಓದು ಬೆಳಕಿನಂತೆ. ಅದು ಕವಿಯನ್ನು ಉತ್ತಮವಾದ ದಾರಿಗೆ ನಡೆಸುತ್ತದೆ, ಕವಿಗಳು ಹೆಚ್ಚಾದಂತೆ ಮಾನವತೆ ಹೆಚ್ಚಾಗುತ್ತೆ. ಸಮಕಾಲೀನ ಸಮಸ್ಯೆಗಳಿಗೆ ತತ್ ಕ್ಷಣಕ್ಕೆ ಪ್ರತಿಕ್ರಿಸುವಂತಾಗಬೇಕು.ಬರೆದ ಕವಿತೆಯನ್ನು ಕೇಳುಗರಿಗೆ ಸರಿಯಾಗಿ ಮುಟ್ಟಿಸುವ ಕೆಲಸವಾಗಬೇಕು. ಕವಿಯ ಮನಸ್ಸು ಸದಾ ಪ್ರಯೋಗಶೀಲವಾಗಿರಬೇಕು. ಹೊಸತನದ ಸೃಷ್ಟಿಸಲು ಸಾಧ್ಯ ಎಂದು ಅವರು ಹೇಳಿದರು".
ಕವಿಸಮಯದಲ್ಲಿ ಮಹೇಶ ಬಳ್ಳಾರಿ-ಪುಟ್ಟಜ್ಜ, ಜಿ.ಎಸ್.ಬಾರಕೇರ-ತುಂಗಭದ್ರೆಯರು, ಶ್ರೀನಿವಾಸ ಚಿತ್ರಗಾರ-ಸಾಕಿನ್ನು ಮಗಳೆ, ವಾಸುದೇವ ಕುಲಕರ್ಣಿ- ಸೋಮಾರಿ, ಶಾಂತಾದೇವಿ ಹಿರೇಮಠ- ಸಾಕಾರ ರೂಪಿ, ಕನಕಪ್ಪ ತಳವಾರ- ಕವಿತೆ ಎಂದರೆ ಏನಂತಿ?, ಎಸ್.ಎಂ.ಕಂಬಾಳಿಮಠ-ಹುಲಿ ಬಂತು ಹುಲಿ,ಅಲ್ಲಮಪ್ರಭು ಬೆಟ್ಟದೂರ- ಗಾಂಧಿ, ರೊಟ್ಟಿ, ಸುಮತಿ- ಬೆನ್ನ ಹಿಂದಿನ ಹೆರಳು, ಶಿ.ಕಾ.ಬಡಿಗೇರ-ಕವಿತೆಯ ಬೆನ್ನತ್ತಿ, ವಿ.ಹರಿನಾಥ ಬಾಬು-ಲಂಗಗಳು, ಎ.ಪಿ.ಅಂಗಡಿ- ಇಂಡಿಯಾ ಗಾಂಧಿ, ಶಿವಪ್ರಸಾದ ಹಾದಿಮನಿ- ಗಾನಯೋಗಿ ಪುಟ್ಟರಾಜರ ನೆನೆದು, ವೀರಣ್ಣ ಹುರಕಡ್ಲಿ- ಶಾಂತಿ ತತ್ವ, ಪುಷ್ಪಲತಾ ಏಳುಬಾವಿ- ಹಾಯ್ಕುಗಳು, ಲಕ್ಷ್ಮೀ- ಕನಸು, ಹನುಮಂತಪ್ಪ ಅಂಡಗಿ- ಪುಟ್ಟರಾಜರು, ರಮೇಶ ಬನ್ನಿಕೊಪ್ಪ- ಆ ಮುಗ್ದ ಹುಡುಗಿ, ಮಾನಪ್ಪ ಬೆಲ್ಲದ- ಧರೆಯ ಬೆಳಕು, "ಠ್ಠಪ್ಪ ಗೋರಂಟ್ಲಿ- ಪುಟ್ಟರಾಜರು ಏರಿದ ಎತ್ತರ, ಸಿರಾಜ್ ಬಿಸರಳ್ಳಿ- ಬೆಂಕಿ ಹಚ್ಚಿ ಎನ್ನುವ ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಶಂಕರಪ್ಪ ಕಾತರಕಿ, ಕೃಷ್ಣಪ್ಪ ಸಂಗಟಿ,ಮಂಜುನಾಥ ಗೊಂಡಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, September 27, 2010

ಕವಿತೆಯಲ್ಲಿ ಬರೀ ವರ್ಣನೆ ಅಲ್ಲ ಧ್ವನಿಯೂ ಇರಬೇಕು- ಎಚ್.ಎಸ್.ಪಾಟೀಲ್



ಕಾವ್ಯ ಎಲ್ಲಕಾಲದಲ್ಲೂ ತನ್ನ ಉಷ್ಣತೆಯನ್ನು ಕಾಪಾಡಿಕೊಂಡು ಬಂದಾಗ ಸಾರ್ವಕಾಲಿಕವಾಗುತ್ತದೆ. ಕವಿತೆ ಎನ್ನುವುದು ಬರಿಯ ವರ್ಣನೆ ಅಲ್ಲ ಅದರಲ್ಲಿ ಧ್ವನಿ ಇರುತ್ತದೆ. ಅರ್ಥಪೂರ್ಣ ಸಾಲುಗಳನ್ನು ಕವನದಲ್ಲಿ ಬಳಸಬೇಕು.ಪದಗಳಿಗೆ, ಶಬ್ದಗಳಿಗೆ ಕಾವ್ಯಾತ್ಮಕ ಸ್ಪರ್ಶ ಇರಬೇಕು ಎಂದು ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೨ನೇ ಕವಿಸಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಕಾವ್ಯ ಯಾವ ಸ್ತರದಲ್ಲಿ ಎನ್ನುವದನ್ನು ಗಮನಿಸಬೇಕು, ವಿವಿಧ ಕವಿಗಳ ಕವನಗಳನ್ನು, ವಿವಿಧ ಸಾಪ್ತಾಹಿಕ,ವಾರಪತ್ರಿಕೆಗಳನ್ನು ಓದಬೇಕು ಎಂದರು. ನಾವು ರಚಿಸಿದ ಕವನಗಳು ಪ್ರಸ್ತುತ ಸಂದರ್ಭದ ಕವನಗಳ ಜೊತೆ ಸ್ಪರ್ಧಿಸಬೇಕು, ನಿಲ್ಲುವಂತಾಗಬೇಕು. ಇದಕ್ಕಾಗಿ ಸತತ ಅಧ್ಯಯನದಲ್ಲಿ ತೊಡಗಬೇಕು. ಹೊಸ ಪ್ರಯೋಗಗಳಿಗೆ ಒಳಗಾಗಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವನವಾಚನದಲ್ಲಿ ೨೦ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅಲಿ ನವಾಜ್ -ನಾಡಿನ ಸಂಸ್ಕೃತಿ, ವಾಗೀಶ ಪಾಟೀಲ್- ನನ್ನೂರು, ಶಾಂತಾದೇವಿ ಹಿರೇಮಠ- ತಿರುವು, ಲಕ್ಷ್ಮೀ- ಕತ್ತಲು, ಶಾಂತು ಬಡಿಗೇರ-ದೃವತಾರೆ,ಶಿವಪ್ರಸಾದ ಹಾದಿಮನಿ-ಕಟ್ಟೋಣ, ಹಾಲಪ್ಪ, ವಾಲ್ಮಿಕಿ ಎಕರನಾಳ- ಪುಣ್ಯಕೋಟಿ ಗುರುರಾಜ, ಡಾ.ಮಹಾಂತೇಶ ಮಲ್ಲನಗೌಡರ- ಹಾರಾಡಿ ಶಾಂತಿ ದೂತರೆ, ಎಸ್. ಕಂಬಾಳಿಮಠ- ಯೋಗಿ ಪುಂಗವ ಮರಿಶಾಂತವೀರ,ಡಾ.ವಿ.ಬಿ.ರಡ್ಡೇರ್-ಅಂದು ಗದುಗಿನಲಿ, ಶಿ.ಕಾ.ಬಡಿಗೇರ- ಹಾಯ್ಕುಗಳು, ಎನ್.ಜಡೆಯಪ್ಪ- ಗುರು ಪುಟ್ಟರಾಜ, ವಾಸುದೇವ ಕುಲಕರ್ಣಿ- ಜ್ಞಾನಜ್ಯೋತಿ, ವೀರಣ್ಣ ವಾಲಿ-ಕಪ್ಪು ಗೆಳೆಯನ ಕುರಿತು, ಸಿರಾಜ್ ಬಿಸರಳ್ಳಿ- ಕ್ರಾಂತಿ ಸೂರ್‍ಯನ ಕಂದೀಲು, ಪುಷ್ಪಾ ಏಳುಬಾವಿ-ಯಾರು ನೀನು? , ಮೌನೇಶ- ಮಿನುಗು, ನಾಗರಾಜ್ ಬೆಣಕಲ್- ಸ್ನೇಹ ಕವನಗಳನ್ನು ವಾಚನಮಾಡಿದರು.
ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಹುಸೇನಪಾಷಾ, ಕರಿಸಿದ್ದನಗೌಡ, ಮಲ್ಲಿಕಾರ್ಜುನ, ಹನುಮಂತಪ್ಪ ಅಂಡಗಿ, ಈಶ್ವರ ಹತ್ತಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Wednesday, September 22, 2010

ಭಾವೋಪಯೋಗಿ ಭಾಷೆಯಲ್ಲಿ ಕವನಗಳು ಬರಬೇಕು - ಮುನಿಯಪ್ಪ ಹುಬ್ಬಳ್ಳಿ




ಕೊಪ್ಪಳ : ಕವಿತೆ ಬುದ್ದಿ , ಭಾವ, ಭಾಷೆಯಲ್ಲಿ ಮಿಂದು ಬರಬೇಕು, ಆಗ ಕವನಗಳಿಗೆ ಮೆರಗು ಬರುತ್ತದೆ. ಸಶಕ್ತ ಶಬ್ದಗಳನ್ನು ಉಪಯೋಗಿಸಿಕೊಂಡು ಕಾವ್ಯ ರಚನೆ ಮಾಡಬೇಕು. ಶಬ್ದಗಳು ನೇರವಾಗಿ ಹೃದಯಕ್ಕೆ ತಟ್ಟುವಂತಿರಬೇಕು. ಕವನ ರಚನೆಗೆ ಬೇಕಾದ ಶಬ್ದ ಸಂಪತ್ತು ಸತತ ಓದಿನಿಂದ ಬರುತ್ತದೆ. ಹೀಗಾಗಿ ಕವಿಗಳು ಅಧ್ಯಯನ ಶೀಲರಾಗಬೇಕು. ಭಾಷೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು. ಅವರ ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮನಸ್ಸು ಮುಟ್ಟುವ, ಮನಸ್ಸಿನ ಕದತಟ್ಟುವ ಭಾಷೆಯೇ ಕಾವ್ಯ . ಇದನ್ನು ಸಶಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಕಾವ್ಯ ಎಂದರೇನು, ಸಾಹಿತ್ಯ ಎಂದರೇನು ಎನ್ನುವಂತಹ ನೂರಾರು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಮಾಜವನ್ನು ತೆರೆದಿಡುವ , ಸರಿದಾಗಿ ಯಾವುದೆಂದು ತೋರುವುದು ಕಾವ್ಯದ ಕೆಲಸವಾಗಬೇಕು. ತಿದ್ದುವದು ಸಾಧ್ಯವಾಗದಿದ್ದರೂ, ಸರಿದಾರಿ ತೋರುವ ಕೆಲಸ ಸಾಹಿತ್ಯ ಮಾಡಬೇಕು ಎಂದರು.
ಕವಿಸಮಯದಲ್ಲಿ ಇತ್ತೀಚಿಗೆ ನಿಧನರಾದ ಪಂಡಿತ ಪುಟ್ಟರಾಜ ಗವಾಯಿಗಳ ಆತ್ಮಕ್ಕೆ ಶಾಂತಿಯನ್ನು ಕೋರಿ ೧ ನಿಮಿಷ ಮೌನ ಆಚರಿಸಲಾಯಿತು. ನಂತರ ಅವರ ಬಗ್ಗೆ ಮುನಿಯಪ್ಪ ಹುಬ್ಬಳ್ಳಿ, ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಶಿ.ಕಾ.ಬಡಿಗೇರ- ಹಾಯ್ಕುಗಳನ್ನು, ವೀರಣ್ಣ ಹುರಕಡ್ಲಿ- ಗದುಗಿನ ಗಂದರ್ವ, ಶಿವಪ್ರಸಾದ ಹಾದಿಮನಿ- ನಾವೆಂಥ ಜನ, ಮಹೇಶ ಬಳ್ಳಾರಿ= ಭವತಿ ಭಿಕ್ಷಾಂದೇಹಿ, ಡಾ.ಮಹಾಂತೇಶ ಮಲ್ಲನಗೌಡರ- ಗುರು ಪುಟ್ಟರಾಜ, ಪುಷ್ಪಲತಾ ಏಳುಬಾವಿ- ಹುಡುಕಾಟ, ಜಡೆಯಪ್ಪ ಎನ್.- ಬಡತನ, ಎ.ಪಿ.ಅಂಗಡಿ- ನಾವು ಸೈನಿಕರು, ಜಿ.ಎಸ್.ಬಾರಕೇರ- ಡಾ.ಪುಟ್ಟರಾಜ ಗವಾಯಿ, ಸಿರಾಜ್ ಬಿಸರಳ್ಳಿ- ಸಾಕಿಯ ಪದ್ಯ, ಲಕ್ಷ್ಮೀ- ಶಿಕ್ಷಕಿ, ಅನ್ನದ ಬೆಲೆ, ವಿಠ್ಠಪ್ಪ ಗೋರಂಟ್ಲಿ- ಪುಟ್ಟನಾದವನೇ ದೊಡ್ಡವನಾಗುವನು, ಮೆಹಮೂದಮಿಯಾ-ಚಲನಶೀಲತ್ವ, ಕೆಂಚಪ್ಪ ಹಾಲವರ್ತಿ- ಯಾರಿಗಾಗಿ, ಮುನಿಯಪ್ಪ ಹುಬ್ಬಳ್ಳಿ- ಮಹಾತ್ಯಾಗಿ ಕವನಗಳನ್ನು ವಾಚನ ಮಾಡಿದರು.
ಮುನಿಯಪ್ಪ ಹುಬ್ಬಳ್ಳಿ ಕವನಗಳ ಕುರಿತು ಮಾತನಾಡಿದರು. ನಂತರ ಮಹಾಕಾವ್ಯಗಳಲ್ಲಿನ ಬಂಡಾಯದ ಬಗ್ಗೆ ಮಾತನಾಡಿದರು. ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ನಾಗರಾಜ ಬೆಣಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿ.ಕಾ.ಬಡಿಗೇರ ಸ್ವಾಗತಿಸಿ ಮಹೇಶ ಬಳ್ಳಾರಿ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, September 13, 2010

ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ




ಕೊಪ್ಪಳ : ಕವಿತೆಯನ್ನು ಬರೆದು ನಂತರ ಇದು ಪ್ರಕಟವಾಗಲೇಬೇಕು, ಇದೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕವಿಯಾದವನು ವಿಮರ್ಶೆಗೆ, ಅದರಲ್ಲೂ ಸ್ವ ವಿಮರ್ಶೆಗೆ ಒಳಗಾಗಬೇಕು, ಕವಿತೆ ಮೊದಲು ಬರೆದ ಕವಿಗೆ ಇಷ್ಟವಾಗಬೇಕು ನಂತರವೇ ಇತರರು ಮೆಚ್ಚಲು ಸಾಧ್ಯ ಎಂದು ಕವಿ, ಲೇಖಕ 'ಎತ್ತಣ ಮಾಮರ ಎತ್ತಣ ಕೋಗಿಲೆ'ಖ್ಯಾತಿಯ ಸಿದ್ದು ಯಾಪಲಪರವಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೦ನೇ ಕವಿಸಮಯದ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಾಚ್ಯತೆ ಮೀರಿದ ಕವನಗಳು ಹುಟ್ಟಬೇಕು ಇದು ಬೇರೆ ಬೇರೆ ಕವಿಗಳನ್ನು ಓದುವದರಿಂದ ವಚನ ಸಾಹಿತ್ಯದಂತವುಗಳನ್ನು ಅಧ್ಯಯನ ಮಾಡುವುದರಿಂದ ಸಾಧ್ಯ. ಕಾವ್ಯದಲ್ಲಿ ಸೂಕ್ಷ್ಮ ನೇಯುವಿಕೆ ಅಗತ್ಯ. ಗೇಯತೆ, ರೂಪಕ, ಪ್ರತಿಮೆಗಳಿರುವ ಕಾವ್ಯ ದ ಸೃಷ್ಟಿಯಾಗಬೇಕು ಎಂದರು. ಇಡೀ ವಿಶ್ವದಲ್ಲಿ ಸುಂದರ ಸೃಷ್ಟಿ ಎಂದರೆ ಕವಿತೆ, ಅದು ಎಲ್ಲವನ್ನೂ ಒಳಗೊಂಡಿರುವಂತಹದ್ದು , ಯುವ ಕವಿಗಳ ಕವಿತೆಗಳನ್ನು ಹಿರಿಯ ಕವಿಗಳು ತಿದ್ದಿ ಅವರಿಗೆ ಮಾರ್ಗದರ್ಶನ ನೀಡಬೇಕು ಕವಿಗೋಷ್ಠಿ ಎಂದರೇ ಹಿಂದೆ ಮುಂದೆ ನೋಡುವಂಥಹ ಪ್ರಸ್ತುತ ಸಂದರ್ಭದಲ್ಲಿ ಕವಿಸಮಯದಂತಹ ಕಾರ್‍ಯಕ್ರಮಗಳು ಹೆಚ್ಚಾಗಬೇಕು, ಲೇಖಕ ಕವಿಯಾದವನು ಹಮ್ಮನ್ನು ಬಿಟ್ಟು ಎಲ್ಲರೊಡನೆ ಬೆರೆತು ಚರ್ಚೆಗೆ ತೊಡಗುವಂತಾಬೇಕು ಇದರಿಂದ ಸುಂದರ ಕಾವ್ಯ ರಚನೆ ಸಾಧ್ಯ ಎಂದರು.
ಇದಕ್ಕೂ ಮೊದಲು ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ-ವಿಪರ್‍ಯಾಸ, ಶಿ.ಕಾ.ಬಡಿಗೇರ- ಜನಪ್ರತಿನಿಧಿ, ಎನ್.ಜಡೆಯಪ್ಪ- ಇವರ್‍ಯಾರು?, ಶಿವಪ್ರಸಾದ ಹಾದಿಮನಿ-ರಾಜಕೀಯವಯ್ಯ, ಎ.ಪಿ.ಅಂಗಡಿ- ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ, ಶ್ರೀನಿವಾಸ ಚಿತ್ರಗಾರ- ರಾಜಕೀಯ, ಡಾ.ಮಹಾಂತೇಶ ಮಲ್ಲನಗೌಡರ- ಕರ್ನಾಟಕ ರತ್ನ ಕುವೆಂಪು, ಅರುಣಾ ನರೇಂದ್ರ- ವಾಸ್ತವ, ಶಾಂತಾದೇವಿ ಹಿರೇಮಠ- ನಮ್ಮ ನಾಯಕರು, ವೀರಣ್ಣ ಹುರಕಡ್ಲಿ- ಸುತ್ತೋಣ ಬಾರಾ, ಸಿರಾಜ್ ಬಿಸರಳ್ಳಿ- ಮಾರುತ್ತೇವೆ ನಾವು, ಪುಷ್ಪಲತಾ ಏಳುಬಾವಿ-ಆಲಾಪನೆ, ವಾಸುದೇವ ಕುಲಕರ್ಣಿ- ಹಾರುವ ಹಕ್ಕಿಯ ಸಾಲು, ಶಾಂತು ಬಡಿಗೇರ-ಬಣ್ಣ, ಜಿ.ಎಸ್.ಬಾರಕೇರ-ಕನ್ನಡ ಕಂದನ ಆಸೆ, ಬಸವರಾಜ- ಅಮ್ಮನ ಮಡಿಲು, ಡಾ.ವಿ.ಬಿ.ರಡ್ಡೇರ- ಕದಡಬೇಡಿ ತಿಳಿನೀರ ಕೊಳವ, ವಿಠ್ಠಪ್ಪ ಗೋರಂಟ್ಲಿ- ಚುಟುಕು, ಸಿದ್ದು ಯಾಪಲಪರವಿ- ಯಾರಿವರು ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಸಿದ್ದು ಯಾಪಲಪರವಿಯವರ ನೆಲದ ಮರೆಯ ನಿದಾನ ಕುರಿತು ಸಂವಾದ ಏರ್ಪಡಿಸಲಾಗಿತ್ತು.ಸಂವಾದಲ್ಲಿ ಮಾತನಾಡಿದ ಶಿ.ಕಾ.ಬಡಿಗೇರ- ಈ ಕವನಸಂಕಲನದ ಕವನಗಳಿಗೆ ಯಾವತ್ತೂ ಮುಪ್ಪಿಲ್ಲ, ಸಾವಿಲ್ಲ, ಸಾಮಾಜಿಕ ಪ್ರಜ್ಞೆಯುಳ್ಳ, ಬದ್ದತೆಯುಳ್ಳ ಕವನಗಳು ಇವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಪ್ರಸಾದ ಹಾದಿಮನಿ- ಕವಿಯನ್ನು ನವ್ಯ ಎನ್ನಬೇಕೋ, ಸಾಮಾಜಿಕ ಕವಿ ಎನ್ನಬೇಕೋ ತಿಳಿಯದಾಗಿದೆ. ಅವರ ಕವನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ ಮಾತನಾಡಿದರು. ಡಾ.ವಿ.ಬಿ.ರಡ್ಡೇರ ಮಾತನಾಡಿ ಸಿದ್ದು ಯಾಪಲಪರವಿಯವ ಮೇಲೆ ವಚನ ಸಾಹಿತ್ಯ ಹೆಚ್ಚಿನ ಪ್ರಭಾವ ಬೀರಿದೆ ಎಂದರು. ಬೂಟು ಪಾಲೀಸು ಮಾಡುವ ಹುಡುಗನ ಕುರಿತ ಕವನದ ಕುರಿತು ಅತೀ ಮೆಚ್ಚುಗೆ ವ್ಯಕ್ತಪಡಿಸಿದರು. ವಿಠ್ಠಪ್ಪ ಗೋರಂಟ್ಲಿಯವರೂ ಸಹ ಸಿದ್ದು ಯಾಪಲಪರವಿ ಬಹುಮುಖ ಪ್ರತಿಭೆಯ ವ್ಯಕ್ತಿ , ಅವರ ಕವನಗಳಲ್ಲಿ ವಚನಗಳ ಪ್ರಭಾವ ಎದ್ದು ಕಾಣುವಂತಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಕೊನೆಯಲ್ಲಿ ಮಾತನಾಡಿದ ಕವಿ ಸಿದ್ದು ಯಾಪಲಪರವಿ ತಮ್ಮ ಕವನಗಳ ಹುಟ್ಟಿನ ಕುರಿತು ಮಾತನಾಡಿದರು. ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್‍ಯಕ್ರಮ ನಡೆಸಿಕೊಟ್ಟ ಸಿರಾಜ್ ಬಿಸರಳ್ಳಿ ಸಿದ್ದು ಯಾಪಲಪರವಿಯವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ, ಜಿಲ್ಲೆಯ ಯುವ ಕವಿಗಳಿಗೆ, ಲೇಖಕರಿಗೆ ಅವರ ಮಾರ್ಗದರ್ಶನ ನೀಡುವಂತಾಗಲಿ ಎಂದರು.

Tuesday, September 7, 2010

ಸತತ ಅಧ್ಯಯನವೇ ಗಟ್ಟಿ ಕವಿತೆಗೆ ಕಾರಣ -ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್




ಕವಿಗಳು ಸತತ ಅಧ್ಯಯನಶೀಲರಾಗಬೇಕು, ಹಿರಿಯ ಕವಿಗಳ ಕವನಗಳನ್ನು ಓದುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಇದರಿಂದ ನಮ್ಮ ರಚನೆಗಳು ಇನ್ನೂ ಗಟ್ಟಿಗೊಳ್ಳುತ್ತಾ ಸಾಗುತ್ತವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಬಯಸುವ ಕವಿತೆ ಶಕ್ತಿಯುತವಾದಾಗ ಅದು ಎಲ್ಲರನ್ನೂ ತಲುಪುತ್ತದೆ ಎಂದ ಸಂಶೋದಕ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ಹೇಳಿದರು. ಅವರು ನಗರ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೯ನೇ ಕವಿಸಮಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಠೋರ ಸತ್ಯಗಳನ್ನು ಹೇಳುವ ಶಕ್ತಿ ಮತ್ತು ಮನಸ್ಸಿನ ಕತ್ತಲನ್ನು ಹೊಡೆದೊಡಿಸುವ ಶಕ್ತಿ ಸಾಹಿತ್ಯಕ್ಕಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಲವೂ ಕವಿಸಮಯದಲ್ಲಿ ಅಶುಕವಿತೆ ರಚನೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಾಗರಾಜ ಬೆಲ್ಲದ-ಗೆಳತಿ, ಜಿ.ಎಸ್.ಬಾರಕೇರ- ಪುಸ್ತಕ, ಎನ್.ಜಡೆಯಪ್ಪ-ನಾಯಿ,ಗುರು, ಶಾಂತಾದೇವಿ ಹಿರೇಮಠ- ಶಿಕ್ಷಕ, ವಾಗೀಶ ಪಾಟೀಲ -ಸಾಹಿತ್ಯ, ಮಹಾಂತೇಶ ಮಲ್ಲನಗೌಡರ- ಬೆತ್ತಲೆಯವರ ನಾಡಿನಲ್ಲಿ, ವಿಠ್ಠಪ್ಪ ಗೋರಂಟ್ಲಿ- ರಸ್ತೆಗಳು, ಗುರು, ಎ.ಪಿ.ಅಂಗಡಿ- ಚುಟುಕು, ಶಿ.ಕಾ.ಬಡಿಗೇರ- ಗುರು ಶಿಷ್ಯ, ಸಿರಾಜ್ ಬಿಸರಳ್ಳಿ- ಗುರು, ವೀರಣ್ಣ ಹುರಕಡ್ಲಿ- ಅಕ್ಷರ, ಸಿದ್ದಲಿಂಗಪ್ಪ ಕೊಟ್ನೇಕಲ್- ಕಾಲ, ಸತ್ಯ ಮತ್ತು ದೈವ, ಪುಷ್ಪಲತಾ ಏಳುಬಾವಿ- ಸಾಲುಮರದ ತಿಮ್ಮಕ್ಕ ,ಚುಟುಕುಗಳನ್ನು ವಾಚಿಸಿದರು.
ಕವಿಗೋಷ್ಠಿಯ ನಂತರ ಎ.ಪಿ.ಅಂಗಡಿಯವರ ಮಗ್ಗಿಮಾಮನ ಹಾಡುಗಳು ಕುರಿತು ಸಂವಾದ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಶಿವಪ್ರಸಾದ ಹಾದಿಮನಿ, ಪುಷ್ಪಲತಾ ಏಳುಬಾವಿ, ಎನ್.ಜಡೆಯಪ್ಪ ಮತ್ತಿತರರು ಭಾಗವಹಿಸಿ ಮಾತನಾಡಿದರು. ಸಂವಾದಕ್ಕೆ ಪ್ರತಿಯಾಗಿ ಮಾತನಾಡಿದ ಕವಿ ಎ.ಪಿ.ಅಂಗಡಿ ವಿಮರ್ಶೆ ಮಾಡಿದ ಎಲ್ಲರಿಗು ಧನ್ಯವಾದ ಅರ್ಪಿಸಿ, ಸಲಹೆ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವುದಾಗಿ ಹೇಳಿದರು. ಶಿ.ಕಾ.ಬಡಿಗೇರ ಸ್ವಾಗತಿಸಿದರು, ಕಾರ್‍ಯಕ್ರಮವನ್ನು ಕವಿಸಮೂಹದ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Monday, August 30, 2010

೧೮ನೇ ಕವಿಸಮಯದಲ್ಲೊಂದು ಪ್ರಯೋಗ :ಅಶುಕವಿತೆ ರಚನೆ




ಕೊಪ್ಪಳ : ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯದಲ್ಲಿ ಹೊಸದೊಂದು ಪ್ರಯೋಗ ಮಾಡಲಾಯಿತು. ಸ್ಥಳದಲ್ಲಿಯೇ ಕವನ ರಚನೆ ಮಾಡುವಂತಹ ಅಶುಕವಿತೆ ರಚನೆ ಕಾರ್‍ಯಕ್ರಮ. ವಿವಿದ ವಿಷಯಗಳ ಬಗ್ಗೆ ಚೀಟಿಯಲ್ಲಿ ಬರೆದು ನಂತರ ಆಯಾ ಕವಿಗಳಿಗೆ ಹಂಚಲಾಯಿತು. ಚೀಟಿಯಲ್ಲಿ ಬಂದಂತಹ ವಿಷಯದ ಬಗ್ಗೆ ಕವನ ರಚಿಸಲು ಕವಿಗಳಿಗೆ ಸೂಚಿಸಲಾಯಿತು. ಸುಮಾರು ೨೦ ನಿಮಿಷ ಸಮಯಾವಕಾಶ ನೀಡಲಾಗಿತ್ತು. ಅತ್ಯುತ್ತಮ ಎನ್ನಬಹುದಾದಂತಹ ಕವನಗಳ ರಚನೆಯಾಯಿತು. ಈ ಪ್ರಯೋಗ ಎಲ್ಲ ಕವಿಗಳಿಗೂ ಖುಷಿ ನೀಡುವುದರ ಜೊತೆ ರಚಿತವಾದ ಕವನಗಳನ್ನು ವಿಮರ್ಶಕರಾಗಿದ್ದ ವಿ.ಬಿ.ರಡ್ಡೇರ್ ಬಹಳ ಮೆಚ್ಚಿಕೊಂಡು ವಿಮರ್ಶೆ ಮಾಡಿದರು.

ಸಾಹಿತ್ಯ ಯಾವತ್ತೂ ಜೀವನ ಪ್ರೀತಿ ಬೆಳೆಸುತ್ತದೆ, ಕವನದಲ್ಲಿ ಎಷ್ಟೇ ರೋಷ, ಆವೇಶ , ನಿರಾಸೆ ಇದ್ದರೂ ಕೊನೆಯಲ್ಲಿ ಬದುಕಿನ ಬಗ್ಗೆ ಆಶಾಭಾವನೆ ಬಿತ್ತುವುದು ಕವಿತೆಯ ಜೀವನ ಪ್ರೀತಿಗೆ ಉದಾಹರಣೆ. ಹಲವಾರು ವಿಷಯಗಳ ಬಗ್ಗೆ ಕವನ ರಚಿಸಿದ ಕವಿಗಳು ತಮಗೆ ಕೊಟ್ಟಂತಹ ವಿಷಯದ ಬಗ್ಗೆ ಸಮರ್ಥವಾಗಿ ಕವನ ರಚಿಸಿದ್ದಾರೆ. ಕೆಲವು ಕವನಗಳಲ್ಲಿ ವಾಚ್ಯ ಎನಿಸುವಂತಹ ರಚನೆ ಇದ್ದರೂ ಸಹ ಸ್ಥಳದಲ್ಲಿಯೇ ಕವನ ರಚಿಸುವುದು ನಿಜಕ್ಕೂ ಪ್ರಶಂಸನೀಯ ಎಂದು ಕವನಗಳ ಕುರಿತು ಮಾತನಾಡಿದ ಸಾಹಿತಿ ವಿ.ಬಿ.ರಡ್ಡೇರ್ ಹೇಳಿದರು. ಕವಿಸಮಯದಲ್ಲಿ ಈ ರೀತಿಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರಲಿ ಇದರಿಂದ ಬರೆಯುವವರಿಗೆ ಹೊಸ ಸ್ಪೂರ್ತಿ ಸಿಗುವಂತಾಗಲಿ ಎಂದು ಆಶಿಸಿದರು.

ಅಶುಕವಿತೆಯಲ್ಲಿ ಈ ಕೆಳಗಿನ ಕವಿಗಳು ಕವನ ವಾಚನ ಮಾಡಿದರು. ವೀರಣ್ಣ ಹುರಕಡ್ಲಿ- ಹುಟ್ಟು,ಸಾವು, ಜಿ.ಎಸ್.ಬಾರಕೇರ- ರಾಜಕೀಯ, ಗಂಗಾಧರ ಖಾನಾಪೂರ- ಜಿಲ್ಲಾ ಸಮಸ್ಯೆ,ನನ್ನದಲ್ಲ ತಪ್ಪು, ಎ.ಪಿ.ಅಂಗಡಿ- ಪ್ರೇಮ, ಮಹೇಶ ಬಳ್ಳಾರಿ - ನಗರ ಸಮಸ್ಯೆ, ಅಲಿ ನವಾಜ್ - ಸಮಕಾಲೀನ ಸಮಸ್ಯೆ, ಶಿವಪ್ರಸಾದ ಹಾದಿಮನಿ- ಬಡತನದ ಬದುಕು, ಶ್ರೀನಿವಾಸ ಚಿತ್ರಗಾರ- ಗರಿಕೆ ನಿಸರ್ಗ, ಮೆಹಮುದಮಿಯ- ಹಸಿರು ನಿಸರ್ಗ, ರಂಗನಾಥ- ದಲಿತರು, ಡಾ.ಮಹಾಂತೇಶ ಮಲ್ಲನಗೌಡರ- ಅಸ್ಪೃಶ್ಯರು, ಲಕ್ಷ್ಮೀ -ದೇಶಾಭಿಮಾನ, ಶಾಂತಾದೇವಿ ಹಿರೇಮಠ- ನೆನಪು, ಪುಷ್ಪಲತಾ ಏಳುಬಾವಿ- ಬಂಡಾಯ, ಸಿರಾಜ್ ಬಿಸರಳ್ಳಿ- ನಾಡು ನುಡಿ, ಹನುಮಪ್ಪ ಬಾರಕೇರ-ಸ್ತ್ರೀ, ಬಿ.ಸಿ.ಪಾಟೀಲ- ಎತ್ತಿಕೊಳ್ಳಿರಿ ಹೂವ ಎಂಬ ಕವಿತೆಗಳನ್ನು ವಾಚಿಸಿದರು.

ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ಮುಂದಿನ ವಾರ ಎ.ಪಿ.ಅಂಗಡಿಯವರ ಮಗ್ಗಿಮಾಮನ ಹಾಡುಗಳು ಕುರಿತು ಸಂವಾದ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ಕವಿಸಮಯದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ ಮತ್ತಿತರರು ಉಪಸ್ಥಿತರಿದ್ದರು.

Thursday, August 26, 2010

ಚುಟುಕು,ಕವನಗಳಿಗೆ ಹೆಚ್ಚಿನ ಆಯಾಮಗಳಿರಬೇಕು




ಕೊಪ್ಪಳ : ಚುಟುಕು, ಕವನಗಳಲ್ಲಿ ಪ್ರಾಸವು ಸಹಜವಾಗಿ ಬರುವಂತಿರಬೇಕು. ಹಾಗಾದಾಗ ಅವುಗಳ ಮಹತ್ವ ಹೆಚ್ಚಾಗುತ್ತದೆ. ಪ್ರಾಸಕ್ಕೆ ಗಂಟು ಬಿದ್ದು ಕವನ ರಚಿಸುವುದು ಸಲ್ಲದು ಇದರಿಂದಾಗಿ ಕವನ ತನ್ನ ಇತರೆ ಆಯಾಮಗಳನ್ನು ಕಳೆದುಕೊಳ್ಳುತ್ತದೆ ಎಂದು ಹಿರಿಯ ವಿಮರ್ಶಕ ಎ.ಎಂ.ಮದರಿ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ೧೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಶಿವಪ್ರಸಾದ ಹಾದಿಮನಿಯವರ ಸಿಂಚನ ಚುಟುಕು ಕವನಸಂಕಲನದ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್‍ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಲೋಹಿಯಾವಾದಿ ವಿರುಪಾಕ್ಷಪ್ಪ ಅಬ್ಬಿಗೇರಿಯವರಿಗೆ ಗೌರವಸೂಚಕವಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು. ನಂತರ ಮೃತರ ಬಗ್ಗೆ ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟ್ಟದೂರ ಮತ್ತು ಎ.ಎಂ.ಮದರಿಯವರು ಮಾತನಾಡಿದರು. ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಅಬ್ಬಿಗೇರಿಯವರು ಸಾರ್ಥಕ ಬದುಕು ನಡೆಸಿದವರು , ಅವರ ರಾಜಕೀಯ ಆದರ್ಶಗಳು ಉದಾತ್ತವಾಗಿದ್ದವು ಎಂದು ಹೇಳಿದರು.
ಇದಕ್ಕೂ ಮೊದಲು ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ೧೫ ಕವಿಗಳು ಕವನ ವಾಚನ ಮಾಡಿದರು. ಜಿ.ಎಸ್.ಬಾರಕೇರ- ನಮ್ಮೂರಿನ ಮಂದಿರ, ಲಕ್ಷ್ಮೀ- ಬೆಳದಿಂಗಳಾಗಿ ಬಾ, ಪುಷ್ಪಲತಾ ಏಳುಬಾವಿ - ನಕ್ಷತ್ರ, ಎಂ.ಡಿ.ಹುಸೇನ-ತಂದೆಯ ಕೊರಗು, ವಿಠ್ಠಪ್ಪ ಗೋರಂಟ್ಲಿ- ಅಗಲಿದ ಅಬ್ಬಿಗೇರಿ ನೆನದು, ಮಹೇಶ ಬಳ್ಳಾರಿ- ಮತ್ತೊಂದು ಕಗ್ಗತ್ತಲು, ಸಿರಾಜ್ ಬಿಸರಳ್ಳಿ- ಹಸಿವು, ಹನುಮಪ್ಪ ಬಾರಕೇರ-ಜಲಧಾರೆ, ಎ.ಪಿ.ಅಂಗಡಿ- ವಾಚಿನ ಮಗ್ಗಿ, ವೀರಣ್ಣ ಹುರಕಡ್ಲಿ- ಆರ್ತನಾದ, ಶಿವಪ್ರಸಾದ ಹಾದಿಮನಿ- ಕಟ್ಟೊಣ, ಬಸವರಾಜ ಸಂಕನಗೌಡರ- ಬದನೆಕಾಯಿ ಪುರಾಣ, ಪ್ರಭು- ಕರೆಂಟ್,ಅರುಣಕುಮಾರ-ವಾರೆಂಟ್, ಶಿ.ಕಾ.ಬಡಿಗೇರ- ಕ್ಷಮಯಾಧರಿತ್ರಿ ಕವನಗಳನ್ನು ವಾಚನ ಮಾಡಿದರು.
ಕವನಗಳನ್ನು ಅಲ್ಲಮಪ್ರಭು ಬೆಟ್ಟದೂರರು ವಿಮರ್ಶೆ ಮಾಡಿದರು. ನಂತರ ಸಂವಾದ ಕಾರ್‍ಯಕ್ರಮ ನಡೆಯಿತು. ಸಂವಾದದಲ್ಲಿ ಒಮ್ಮಿದ ಅಭಿಪ್ರಾಯಗಳ ಬಗ್ಗೆ ಮಾತನಾಡಿದ ಶಿವಪ್ರಸಾದ ಹಾದಿಮನಿ ಎಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಸಲಹೆ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಕವಿಸಮಯದಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ನಿರ್ಧರಿಸಲಾಯಿತು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Tuesday, August 17, 2010

ಒಳ್ಳೆಯ ಮನುಷ್ಯನನ್ನು ಸೃಷ್ಟಿಸುವ ಸಾಹಿತ್ಯ ಬೇಕು -ಬಸವರಾಜ್ ಸೂಳಿಬಾವಿ



ಕೊಪ್ಪಳ : ಒಳ್ಳೆಯ ಸಾಹಿತ್ಯ ಸೃಷ್ಟಿಗಿಂತ ಒಳ್ಳೆಯ ಮನುಷ್ಯರನ್ನು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವಾದದ್ದು. ಕವಿ,ಲೇಖಕನಾದವನು ನಮ್ಮ ನಡುವಿನ ತಲ್ಲಣಗಳಿಗೆ ಸ್ಪಂದಿಸುವ ಮನಸ್ಸು ಹೊಂದಿರಬೇಕು. ಕೇವಲ ಬಹುಪರಾಕು ಹೇಳುವವನು ಕವಿಯಾಗಲಾರ ಎಂದು ಖ್ಯಾತ ಹೋರಾಟಗಾರ ಹಾಗೂ ಲೇಖಕ ಬಸವರಾಜ ಸೂಳಿಬಾವಿ ಹೇಳಿದರು. ಅವರಿಂದು ಕನ್ನಡನೆಟ್.ಕಾಂ ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೧೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು ಪ್ರಸ್ತುತೆಗೆ ಸ್ಪಂದಿಸದೇ ಕೇವಲ ಅಲಂಕಾರಿವಾಗಿ ಬರೆಯುತ್ತಾ ಹೋಗುವುದು ಸಾಹಿತ್ಯವಲ್ಲ, ತಲ್ಲಣಗಳಿಗೆ ಸ್ಪಂದಿಸಿ ಒಳ್ಳೆಯತನಕ್ಕಾಗಿ ಮಿಡಿಯುವುದು ಮನುಷ್ಯತ್ವ ಇದೇ ಕವಿಯ ಮನಸ್ಸು ಎಂದರು. ಈಗ ಎಲ್ಲೆಡೆ ದ್ವೇಷ ಹಂಚುವ ಕೆಲಸ ನಡೆಯುತ್ತಿದೆ ಇದನ್ನು ಮೀರಿ ನಿಲ್ಲಬೇಕು , ಒಳ್ಳೆಯ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಕವಿಸಮೂಹ ಒಳ್ಳೆಯ ವೇದಿಕೆಯಾಗಿದೆ. ವಿಮರ್ಶೆ ಎನ್ನುವುದು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರುವಂತದ್ದು ಆದ್ದರಿಂದ ಮುಕ್ತವಾಗಿ ವಿಮರ್ಶೆ ನಡೆಯಬೇಕು ಎಂದರು. ಸ್ವಾತಂತ್ರೋತ್ಸವದ ನಿಮಿತ್ತ ಕವಿಸಮೂಹ ಕಾರ್‍ಯಕ್ರಮವನ್ನು ಮಧ್ಯಾಹ್ನ ೩ ಕ್ಕೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ೧೫ ಕವಿಗಳು ತಮ್ಮ ಕವನ ವಾಚನ ಮಾಡಿದರು. ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್‍ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಕೊಪ್ಪಳ ಜಿಲ್ಲೆಯ ಖ್ಯಾತ ಕವಿ ಡಾ.ಮಹಾಂತೇಶ ಮಲ್ಲನಗೌಡರಿಗೆ ಅಕಾಡೆಮಿ ಆಪ್ ಬೆಂಗಾಲಿ ಪೋಯಟ್ರಿ, ಕಲ್ಕತ್ತಾ ಇವರು ಆಚಾರ್‍ಯ ಪ್ರಫುಲ್ಲಾ ಚಂದ್ರರಾಯ್ ಸ್ಮಾರಕ ಸಮ್ಮಾನ -೨೦೧೦ ಪ್ರಶಸ್ತಿಯನ್ನು ನೀಡಿದೆ. ಇದಕ್ಕಾಗಿ ಕವಿಸಮೂಹದ ಎಲ್ಲ ಕವಿಗಳು ಮಹಾಂತೇಶ ಮಲ್ಲನಗೌಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳು : ಬಸವರಾಜ ಮಾರನಬಸರಿ ಗಜೇಂದ್ರಗಡ- ಬನ್ನಿ ಭಾರತೀಯರೇ, ಬಸವರಾಜ ಸೂಳಿಬಾವಿ- ಎರಡು ಕವಿತೆಗಳು, ಮಹೇಶ ಬಳ್ಳಾರಿ- ಬದುಕು, ಪುಷ್ಪಲತಾ ಏಳುಬಾವಿ- ಏನೆಂದು ಬರೆಯಲಿ, ಮಹಾಂತೇಶ ಮಲ್ಲನಗೌಡರ- ಹೆಣ್ಣಿನ ಸ್ವಗತ, ಸಿರಾಜ್ ಬಿಸರಳ್ಳಿ - ಗಾಡಬಣ್ಣಗಳು, ಶಿವಪ್ರಸಾದ ಹಾದಿಮನಿ- ಬುದ್ದಿಜೀವಿಗಳೇ ಹೀಗೆ, ಶಿ.ಕಾ.ಬಡಿಗೇರ- ಬೆಳಕು ನೋಡದವರು, ಹನುಮಂತಪ್ಪ ಬಾರಕೇರ- ಹಕ್ಕಿ, ಎನ್.ಜಡೆಯಪ್ಪ- ಆಧುನಿಕ ವಚನ, ಆಲಿ ನವಾಜ್ : ನಾನೊಬ್ಬ ಬಾಲಕಾರ್ಮಿಕ, ವೀರಣ್ಣ ಹುರಕಡ್ಲಿ- ಅತ್ತೆ ಮನೆಗೆ ಅಳಿಯ ಬಂದಾಗ, ಎ.ಪಿ.ಅಂಗಡಿ- ಬಸ್ಸಿನಲ್ಲಿ ಹೆರಿಗೆ ಕವನಗಳನ್ನು ವಾಚಿಸಿದರು. ಜಡೆಯಪ್ಪ ಕಾರ್‍ಯಕ್ರಮ ನಡೆಸಿಕೊಟ್ಟರು. ಶಿ.ಕಾ.ಬಡಿಗೇರ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ವಂದನಾರ್ಪಣೆ ಮಾಡಿದರು

Monday, August 9, 2010

ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ

ಕವಿಸಮಯದ ಆರಂಭದಲ್ಲಿ ಮೊನ್ನೆ ನಿಧನರಾದ ಹಿರಿಯ ವಿಮರ್ಶಕ ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಎ.ಎಂ.ಮದರಿಯವರು ಕಿ.ರಂ.ನಾಗರಾಜ್ ರ ಬಗ್ಗೆ ಮಾತನಾಡಿದರು. ಧಾರವಾಡದಲ್ಲಿ ಬೇಂದ್ರ ಸ್ಮರಣೆಯ ಕಾರ್‍ಯಕ್ರಮದಲ್ಲಿ ಕಿ.ರಂ.ರವರ ಭಾಷಣವನ್ನು ನೆನಪಿಸಿಕೊಂಡ ಮದರಿಯವರು ಕನ್ನಡ ಸಾಹಿತ್ಯ ಬಹುದೊಡ್ಡ ವಿಮರ್ಶಕನನ್ನು ಕಳೆದುಕೊಂಡಿದೆ ಎಂದರು.

ಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇಕು - ಎ.ಎಂ.ಮದರಿ




ಕಾವ್ಯದ ಸಮಯ ಮುಗಿದು ಹೋಯಿತು ಇನ್ನು ಕಾವ್ಯ ರಚನೆಯಾಗುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತದೆ. ಆದರೆ ಸೃಜನಶೀಲತೆಗೆ ಯಾವುದು ಮುಗಿದು ಹೋಗುವುದಿಲ್ಲ. ಕಾವ್ಯದ ನಿರಂತರತೆ ಯಾವತ್ತೂ ಬತ್ತುವುದಿಲ್ಲ. ಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇಕು ಎಂದು ಕೊಪ್ಪಳದ ಹಿರಿಯ ಕವಿ, ಹೃದಯವಂತ ವಿಮರ್ಶಕ ಎ.ಎಂ.ಮದರಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬರೆಯುವವನಿಗೆ ಕಾವ್ಯದ ಕನಿಷ್ಠ ಅರಿವಿರಬೇಕು. ಅದು ಸತತ ಅಧ್ಯಯನದ ಮೂಲಕ ಸಾಧ್ಯ ಅದನ್ನು ರೂಡಿಸಿಕೊಳ್ಳಬೇಕು ಎಂದರು. ಕಾವ್ಯ ಯಾವತ್ತೂ ಒಂದೇ ಸೂತ್ರಕ್ಕೆ ಗಂಟು ಬೀಳದೇ ಸೂತ್ರವನ್ನೂ ಮೀರುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಕವಿಸಮಯದ ಆರಂಭದಲ್ಲಿ ಮೊನ್ನೆ ನಿಧನರಾದ ಹಿರಿಯ ವಿಮರ್ಶಕ ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಎ.ಎಂ.ಮದರಿಯವರು ಕಿ.ರಂ.ನಾಗರಾಜ್ ರ ಬಗ್ಗೆ ಮಾತನಾಡಿದರು. ಧಾರವಾಡದಲ್ಲಿ ಬೇಂದ್ರ ಸ್ಮರಣೆಯ ಕಾರ್‍ಯಕ್ರಮದಲ್ಲಿ ಕಿ.ರಂ.ರವರ ಭಾಷಣವನ್ನು ನೆನಪಿಸಿಕೊಂಡ ಮದರಿಯವರು ಕನ್ನಡ ಸಾಹಿತ್ಯ ಬಹುದೊಡ್ಡ ವಿಮರ್ಶಕನನ್ನು ಕಳೆದುಕೊಂಡಿದೆ ಎಂದರು. ತಮ್ಮ ಎಂದಿನ ಪಂಚಿಂಗ್ ವಿಮರ್ಶೆ ಮಾಡುತ್ತ್ತ ಮದರಿಯವರು ಹಿಂದಿನ ಕೊಪ್ಪಳದ ಸಾಹಿತ್ಯಿಕ ವಾತಾವರಣವನ್ನು ನೆನಪಿಸಿಕೊಂಡರು.ಕಿರಿಯ ಕವಿಗಳು ಹೆಚ್ಚಿನ ಓದಿನ ಮೂಲಕ ವಾಚ್ಯವಾಗುವಂತಹ ಕವನಗಳನ್ನು ಕಾವ್ಯಾತ್ಮಕಗೊಳಿಸುವ ಕಲೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕವಿಗೋಷ್ಠಿಯಲ್ಲಿ ೧೮ ಕವಿಗಳು ಕವನ ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ-ಸಪಾಯಿ ಕರ್ಮಚಾರಿಯ ಬದುಕು, ಹನುಮಪ್ಪ ಬಾರಕೇರ- -ಇಟಗಿ ದೇವಾಲಯ, ಎ.ಪಿ.ಅಂಗಡಿ- ಪಾದಯಾತ್ರೆ ನಡಿಗೆ, ಶಿವಪ್ರಸಾದ ಹಾದಿಮನಿ- ಚುಟುಕು, ಎಂ.ಡಿ.ಹುಸೇನ್ -ಕೋಮುವಾದಿಗಳು, ಜಡೆಯಪ್ಪ ಎನ್-ಮಡಿವಂತ, ವಿರೇಶ ಹುಲ್ಲೂರ-ಸ್ವಾರ್ಥದ ಕತ್ತಲೆಯಿಂದ, ಶಾಂತಾದೇವಿ ಹಿರೇಮಠ- ನಾವು ಸ್ವತಂತ್ರರು, ಲಕ್ಷ್ಮೀ- ಸ್ನೇಹ, ಶ್ರೀನಿವಾಸ ಚಿತ್ರಗಾರ- ಶಿಶುಪ್ರಾಸಗಳು, ಜಿ.ಎಸ್.ಬಾರಕೇರ- ಕಾರ್ಗಿಲ್ ಕವಿತೆ, ಶಿ.ಕಾ.ಬ- ಮಗುವಾಗುತ್ತೇನೆ, ಮೆಹಮುದಮಿಯಾ- ಚಿತ್ತ, ಶಿವಾನಂದ ಹೊದ್ಲೂ- ಕನ್ನಡ, ಮಹೇಶ ಬಳ್ಳಾರಿ-ಅಗಷ್ಟ್ ೯ರ ಹಾಡು, ಶಾಂತೇಶ ಬಡಿಗೇರ- ನನ್ನ ಜನ, ಸಿರಾಜ್ ಬಿಸರಳ್ಳಿ- ಕಟ್ಟಬೇಕಿದೆ ಕವನಗಳನ್ನು ವಾಚನ ಮಾಡಿದರು. ನಂತರ ಶ್ರೀನಿವಾಸ ಚಿತ್ರಗಾರರ ಸಾಹಿತ್ಯ ಕುರಿತ ಸಂವಾದ ನಡೆಯಿತು.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Saturday, August 7, 2010

ನಾಳೆಯದು 15ನೇ ಕವಿಸಮಯ ಎಲ್ಲರಿಗೂ ಸುಸ್ವಾಗತ

ಈ ವಾರದ ಮುಕ್ತಕವಿಗೋಷ್ಠಿ ಯಲ್ಲಿ ಹಿರಿಯ ವಿಮರ್ಶಕ ಎ.ಎಂ.ಮದರಿ ಕವಿಗಳಿಗೆ ಮಾರ್ಗದರ್ಶನ ಮತ್ತು ಕವನಗಳ ವಿಮರ್ಶೆ ಮಾಡಲಿದ್ದಾರೆ. ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರರ ಸಾಹಿತ್ಯ ಕುರಿತು ಸಂವಾದ ನಡೆಯಲಿದೆ.

Tuesday, August 3, 2010

ಬದುಕಿನ ಅರಿವು ಮತ್ತು ಪರಿಸರ ಪ್ರಜ್ಞೆಯೇ ಸಾಹಿತ್ಯಕ್ಕೆ ಕಾರಣ- ಅಕ್ಬರ್ ಕಾಲಿಮಿರ್ಚಿ



ಕೊಪ್ಪಳ : ಬದುಕಿನ ಅನುಭವ,ಅರಿವು,ಪರಿಸರ ,ಪ್ರಕೃತಿಯೆಡೆಗಿನ ಪ್ರಜ್ಞೆಯೇ ಸಾಹಿತ್ಯಕ್ಕೆ ಕಾರಣವಾಗುತ್ತದೆ ಎಂದು ಕವಿ ಅಕ್ಬರ್ ಕಾಲಿಮಿರ್ಚಿ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಾಹಿತಿಗಳಿಗೆ ಕಳಂಕವಿದೆಯೇ ಹೊರತು ಸಾಹಿತ್ಯಕ್ಕೆ ಯಾವತ್ತೂ ಕಳಂಕವಿಲ್ಲ. ಬದುಕಿಗೆ ದಾರಿ ದೀಪವಾಗುವ ಕಾವ್ಯ ರಚನೆಯಾಗಬೇಕು ಎಂದರು. ಕವಿಸಮಯದಲ್ಲಿ ಭಾಗವಹಿಸಿದ್ದ ಕವಿಗಳ ದಂಡನ್ನು ಕಂಡು ಹರ್ಷ ವ್ಯಕ್ತಪಡಿಸಿದ ಕಾಲಿಮಿರ್ಚಿ ೨೮ ಕವಿಗಳು ಇಂದು ಕವನ ವಾಚನ ಮಾಡಿದ್ದಾರೆ. ಎಲ್ಲಾ ಕವಿಗಳನ್ನು ನೋಡುವ ಭಾಗ್ಯ ನೀಡಿದ ಕವಿಸಮಯ ನಿಜವಾಗಿಯೂ ಕವಿದರ್ಶನ ಕಾರ್‍ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಕವಿಸಮಯ ಕಾರ್‍ಯಕ್ರಮದಲ್ಲಿ ದಾಖಲೆ ಸಂಖ್ಯೆಯಲ್ಲಿ ಕವಿಗಳು ಮತ್ತು ಆಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ೨೮ ಕವಿಗಳು ತಮ್ಮ ಕವನ ವಾಚನ ಮಾಡಿದರು. ಪ್ರತಿಕವಿಯೂ ತಮ್ಮ ಕವಿತೆಯ ಹುಟ್ಟಿನ ಬಗ್ಗೆ ಹೇಳಿ ತಮ್ಮ ಕವನ ವಾಚನ ಮಾಡಿದರು. ಶಾಂತಾದೇವಿ ಹಿರೇಮಠ-ಮರಕೋತಿಯಾಟ,ವಿಮಲಾ ಇನಾಂದಾರ ಅಳವಂಡಿ- ಪ್ರತಿಭಟನೆ, ವಾಗೀಶ ಪಾಟೀಲ್- ಮೌನ್, ಶಿ.ಕಾ.ಬಡಿಗೇರ- ಚುಟುಕುಗಳು, ಮಹಾಂತೇಶ ಮಲ್ಲನಗೌಡರ -ನಾಕ ನರಕ, ಅಕ್ಬರ್ ಕಾಲಿಮಿರ್ಚಿ- ಸೂರ್‍ಯನಿಗೆ, ಎ.ಪಿ.ಅಂಗಡಿ-ಇರಬೇಕು, ವಿರೇಶ ಹುಲ್ಲೂರ- ಪ್ರಕೃತಿಯ ಮುದ್ದಿನ ಕೂಸು, ಹನ್ಮಂತಪ್ಪ ಬಾರಕೇರ- ಅಮ್ಮ, ಜಿ.ಎಸ್.ಬಾರಕೇರ- ಹೆಂಡತಿ ತವರಿಗೆ ಹೋದಾಗ, ಜಡೆಯಪ್ಪ ಎನ್.-ನಾವೇ ಇಲ್ಲದ ನೆಲದಲ್ಲಿ, ವೀರಣ್ಣ ಹುರಕಡ್ಲಿ-ಸುತ್ತೋಣ ಬಾರಾ, ಶ್ರೀನಿವಾಸ ಚಿತ್ರಗಾರ- ಚುಟುಕುಗಳು, ಶಿವಪ್ಪ ಶೆಟ್ಟರ್- ದೇಶಭಕ್ತಿಗೀತೆ, ಮಹೇಶ್ ಬಳ್ಳಾರಿ- ಆಕ್ಟೋಪಸ್, ಲಕ್ಷ್ಮೀ- ಪ್ರಕೃತಿ ಇಲ್ಲದಿದ್ದರೆ, ಆರ್.ಎಂ.ಪಾಟೀಲ್- ಸಿದ್ದ, ಪುಷ್ಪಲತಾ ಏಳುಬಾವಿ- ಆಧುನಿಕ ವಚನಗಳು, ಅಲಿನವಾಜ್-ಶಾಯರಿ, ಶಿವಪ್ರಸಾದ ಹಾದಿಮನಿ-ನಾವೆಂಥ ಜನ, ಎಂ.ಡಿ.ಹುಸೇನ್ - ಸ್ಪೋಟ, ರಂಗನಾಥ ಕೋಳೂರು- ಕರ್ನಾಟಕ ಮಾತೆ, ವೀರಣ್ಣ ರಡ್ಡೇರ- ಟಿ.ಎನ್.ಶೇಷನ್, ಸಾಧನೆಯ ಕೊರತೆ, ಮಾನಪ್ಪ ಬೆಲ್ಲದ- ಧರೆಯ ಸೇಡು, ಶಾಂತೇಶ ಬಡಿಗೇರ- ಗವಿಸಿದ್ದೇಶ್ವರ, ಆಧುನಿಕ ಮನು, ಅರುಣಾ ನರೇಂದ್ರ-ಸುರಿಸದಿರು ಗೆಳತಿ, ಸಿರಾಜ್ ಬಿಸರಳ್ಳಿ -ನಾವು ಬದುಕುವುದೇ ಹೀಗೆ - ಕವನಗಳನ್ನು ವಾಚನ ಮಾಡಿದರು.

ಕವನವಾಚನದ ನಂತರ ಹಿರಿಯ ಕವಿಯತ್ರಿ ಶ್ರೀಮತಿ ಶಾಂತಾದೇವಿ ಹಿರೇಮಠರ ಕವನ ಸಂಕಲನಗಳ ಬಗ್ಗೆ ಸಂವಾದ , ಚರ್ಚೆ, ವಿಮರ್ಶೆ ಹಮ್ಮಿಕೊಳ್ಳಲಾಗಿತ್ತು. ಕವನಗಳ ಬಗ್ಗೆ ಮಾತನಾಡಿದ ಶಿವಪ್ರಸಾದ ಹಾದಿಮನಿ ದಂಪತಿಗಳಿಬ್ಬರು ಸೇರಿ ಸೃಷ್ಟಿಸಿದ ಕವನ ಸಂಕಲನ ನೀನೇ ನಾನು ನಾನೇ ನೀನು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಹಾದಿಯನ್ನೇ ಸೃಷ್ಟಿಸಿತು ಎಂದರು. ಪುಷ್ಪಲತಾ ಏಳುಬಾವಿ, ಮಹೇಶ ಬಳ್ಳಾರಿ, ವಿರೇಶ ಹುಲ್ಲೂರ, ಶ್ರೀನಿವಾಸ ಚಿತ್ರಗಾರ, ಜಿ.ಎಸ್ ಬಾರಕೇರ,ರಂಗನಾಥ ಮತ್ತು ಮಹಾಂತೇಶ ಮಲ್ಲನಗೌಡರ , ವಿ.ಬಿ.ರಡ್ಡೇರ ಕೃತಿಗಳ ಕುರಿತು ಮಾತನಾಡಿದರು. ಬರೆಯುವ ಮಹಿಳೆಯೇ ಒಂದು ಕ್ರಾಂತಿ, ಹೆಣ್ಣಿನ ಶೋಷಣೆಯ ಬಗ್ಗೆ ಚೆನ್ನಾಗಿ ಬರೆದಿದ್ದಾರೆ ಎಂದು ವಿ.ಬಿ.ರಡ್ಡೇರ,ಮಹಾಂತೇಶ ಮಲ್ಲನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕವಿಯತ್ರಿ ಶಾಂತಾದೇವಿ ಹಿರೇಮಠ ತಮ್ಮ ಕೃತಿ ಬಗ್ಗೆ ಮಾತನಾಡಿದ ಎಲ್ಲರಿಗೆ ಧನ್ಯವಾದ ಅರ್ಪಿಸಿದರು. ದಾಂಪತ್ಯ ಜೀವನದ ಕುರಿತ ಅವರ ಕವಿತೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಕವನಗಳಿಗೆ ಶಬ್ದಕ್ಕಿಂತ ಭಾವಪ್ರಾಮುಖ್ಯತೆ ಮುಖ್ಯ - ಡಾ.ವಿ.ಬಿ.ರಡ್ಡೇರ್


ಅಂತರಂಗದ ಧ್ವನಿಯಿಲ್ಲದ ಕವನಗಳಿಗೆ ಒಣ ಆಡಂಭರದಿಂದ ಪ್ರಯೋಜನವಿಲ್ಲ ಎಂದು ಸಾಹಿತಿ,ವಿಮರ್ಶಕ ಡಾ.ವಿ.ಬಿ.ರಡ್ಡೇರ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಶ್ಲೇಷಣೆ ಮಾಡುತ್ತ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕವಿಯು ಎಲ್ಲ ಬಗೆಯ ಬೇಧಗಳನ್ನು ಹೊಡೆದೋಡಿಸಲು ನಿರಂತರ ಹೋರಾಟ ಮಾಡುತ್ತಲೇ ಇರುತ್ತಾನೆ ಈ ಹೋರಾಟ ಯಾವತ್ತೂ ಸಾಗಿಯೇ ಇರುತ್ತದೆ. ಕವಿಯು ಯಾವಾಗಲೂ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುತ್ತಾನೆ. ತನ್ನ ಭಾವನೆಗಳಿಗೆ ರೂಪು ಕೊಡುವ ಕಲೆಗಾರಿಕೆಯಿಂದ ಮತ್ತು ಸತತ ಅಧ್ಯಯನದಿಂದ ಕಾವ್ಯ ಶಕ್ತಿಯುತವಾಗುತ್ತದೆ. ಸಮಾಜವನ್ನು ಜೊತೆಯಲ್ಲಿಟ್ಟುಕೊಂಡು ಹೋಗುವ ಕಾವ್ಯ,ಸಾಹಿತ್ಯ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು. ನಮ್ಮ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಭೋರ್ಗರೆದ ಭೂಮಿ . ಇಲ್ಲಿ ದಾಸ ಮತ್ತು ವಚನ ಸಾಹಿತ್ಯ ವಿಫುಲವಾಗಿ ರಚಿತಗೊಂಡಿವೆ. ಆದರೆ ಈಗ ನಮ್ಮ ಭಾಗದ ಕವಿ, ಸಾಹಿತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವಿಷಾಧಿಸಿದರು. ಈ ಭಾಗದ ಸಾಹಿತ್ಯ ಕಾರ್‍ಯಕ್ರಮಗಳಿಗೆ, ಸಾಹಿತಿಗಳಿಗೆ ಕವಿಸಮೂಹದ ಈ ಕವಿಸಮಯ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.

ಈ ವಾರದ ಕವಿಸಮಯದಲ್ಲಿ ೨೧ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅರುಣಾ ನರೇಂದ್ರ-ಪುಟ್ಟನ ಊಟ, ಶಾಂತಾದೇವಿ ಹಿರೇಮಠ-ಬರ ವರ ಚುಟುಕು, ಪುಷ್ಪಾಲತಾ ಏಳುಭಾವಿ- ಮುತ್ತು ಬಂದಾವ ಕೇರಿಗೆ, ವಾಗೀಶ್‌ಪಾಟೀಲ್- ನೆನೆದು, ಶ್ರೀನಿವಾಸ ಚಿತ್ರಗಾರ- ಅವ್ವಿ, ಶಿವಪ್ರಸಾದ ಹಾದಿಮನಿ- ಆತ್ಮಹತ್ಯೆ, ಜಿ.ಎಸ್.ಬಾರಕೇರ-ಚೆಂದುಳ್ಳಿ ಚೆಲುವೆ, ಮಹಾಂತೇಶ ಮಲ್ಲನಗೌಡರ- ಹೈ.ಕ.ವಿಮೋಚನೆ, ಶಿ.ಕಾ.ಬಡಿಗೇರ-ಭಂಗಿಗಳ ಸ್ವಗತ, ವಿಠ್ಠಪ್ಪ ಗೋರಂಟ್ಲಿಇ- ಅಂದು ಗೋದ್ರಾದಲ್ಲಿ ಮೂಡಿದ ಸೂರ್‍ಯ, ವಿ.ಬಿ.ರಡ್ಡೇರ- ನಾಗರಿಕತೆ, ಎಂ.ಡಿ.ನಂಜುಂಡಸ್ವಾಮಿ, ರಂಗನಾಥ ಕೋಳೂರು-ಪ್ರತಿಭಟನೆ, ಜಡೆಯಪ್ಪ ಇಟಗಿ- ಪ್ರೇಮ ಪಟಾಕಿ, ಶರಣಪ್ಪ ಕೊಪ್ಪದ- ಸೂರ್‍ಯಕಾಂತಿ, ಮಹೇಶ ಬಳ್ಳಾರಿ- ಒಂದು ರಾಜಕೀಯ ಕವಿತೆ, ವಿರೇಶ ಹುಲ್ಲೂರ-ಪ್ರೀತಿ, ವೀರಣ್ಣ ಹುರಕಡ್ಲಿ- ಮನಸ್ಸು, ಬೆಳಕು, ಎಂ.ಡಿ.ಹುಸೇನ್- ಭ್ರಷ್ಟ ರಾಜಕಾರಣಿ, ಶಿವಾನಂದ ಹೊದ್ಲೂರ- ಸಂಪತ್ತು ಚುಟುಕು, ಬಿ.ಸಿ.ಪಾಟೀಲ- ಚುಟುಕು ಸತಿ, ಸಿರಾಜ್ ಬಿಸರಳ್ಳಿ- ಸಾವು ಎಂಬ ಕವನಗಳನ್ನು ವಾಚನ ಮಾಡಿದರು.

ಕಸಾಪದ ರಾಜಶೇಖರ್ ಅಂಗಡಿ ಸೇರಿದಂತೆ ಇತರ ಆಸಕ್ತರು ಭಾಗವಹಿಸಿದ್ದ ಕಾರ್‍ಯಕ್ರಮವನ್ನು ಕವಿಸಮೂಹದ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. ಜುಲೈ 24,2010

ಕವಿಗಳು ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು-ಪ್ರಮೋದ ತುರ್ವಿಹಾಳ


ಕೊಪ್ಪಳ : ಸಮಕಾಲೀನ ಸಮಾಜದ ವಿಕಾರಗಳ ನಡುವೆ ಸೃಜನಶೀಲ ಮನಸ್ಸುಗಳು ಒಂದುಗೂಡಿರುವುದು ಬಹುಮುಖ್ಯ. ಇದು ಆರೋಗ್ಯಪೂರ್ಣ ಬೆಳವಣಿಗೆ, ಸಾಮಾಜಿಕ ಬೆಳವಣಿಗೆಗೆ ಆಶಾದಾಯಕವಾದುದು ಎಂದು ಯುವಕವಿ ಪ್ರಮೋದ ತುರ್ವಿಹಾಳ ಹೇಳಿದರು ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕವಿಗಳು ಮನುಷ್ಯ ಪ್ರೀತಿಯ ಜೊತೆಗೆ ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು,ಅಧ್ಯಯನದ ಶಿಸ್ತನ್ನು ರೂಡಿಸಿಕೊಳ್ಳಬೇಕು ಇದರಿಂದ ಹೊಸ ಶೈಲಿಯನ್ನು ರೂಡಿಸಿಕೊಳ್ಳಲು ಸಾಧ್ಯ. ಓದುಗರು ಕುತೂಹಲದಿಂದ ಕಾಯುವಂತಹ ರಚನೆ ಕವಿಗಳಿಂದ ಬರಬೇಕು ಎಂದರು. ಸಮಾಜ ಮತ್ತು ಲೇಖಕನ ನಡುವೆ ಅನುಸಂದಾನವೆರ್ಪಟ್ಟು ಒಳ್ಳೆಯ ವಿಚಾರಗಳು ಎಲ್ಲೆಡೆ ಹರಡಬೇಕು ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕವಿಸಮಯದಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ಕವನಗಳ ಮಟ್ಟ ಏನೇ ಇರಲಿ ಬರೆಯಬೇಕು ಎನ್ನುವ ಕುತೂಹಲದ ಮನಸ್ಥಿತಿ ಇಟ್ಟುಕೊಂಡು ಬರೆಯುತ್ತಿರುವ ಕವಿಗಳಿಗೆ ಅಭಿನಂದನೆಗಳು ಎಂದರು.

ಈ ಸಲದ ಕವಿಸಮಯ ಮುಕ್ತ ಕವನಗಳದಾಗಿತ್ತು. ಲಕ್ಷ್ಮೀ ಓತಗೇರಿ -ಹೆಣ್ಣು, ಅಲಿನವಾಜ್-ರಾಜಕೀಯ, ಕರೆಂಟ್, ಪುಷ್ಪಲತಾ ಏಳುಬಾವಿ -ಚುಟುಕು, ಕೋಳೂರು ರಂಗನಾಥ-ಟಾಲ್‌ಸ್ಟಾಯ್ , ಪ್ರಮೋದ ತುರ್ವಿಹಾಳ- ಮಗುವಿಗೊಂದು,ಮಾನಪ್ಪ ಬೆಲ್ಲದ-ನೊಂದಮನ ಕೈಚಾಚಿದಾಗ, ಮಹೇಶ್ ಬಳ್ಳಾರಿ-ಕ್ಯಾಸ್ ಬ್ಲಾಂಕ್,ಜಡೆಯಪ್ಪ - ದಲಿತರು,ಶಿವಪ್ರಸಾದ ಹಾದಿಮನಿ-ಭಾವೈಕ್ಯತೆ,ವೀರಣ್ಣ ಹುರಕಡ್ಲಿ- ಮಾತು, ವಿಠ್ಠಪ್ಪ ಗೋರಂಟ್ಲಿ- ಕವನ, ಜಿ.ಎಸ್.ಬಾರಕೇರ- ತುಂಗಭದ್ರೆ,ಸಿರಾಜ್ ಬಿಸರಳ್ಳಿ- ದ್ವೇಷ ಕವನಗಳನ್ನು ವಾಚನ ಮಾಡಿದರು. ವೀರಕನ್ನಡಿಗ ಸಂಘದ ಶಿವಾನಂದ ಹೊದ್ಲೂರ, ಪತ್ರಕರ್ತ ಮಹೇಶ ಬಾಬು ಉಪಸ್ಥಿತರಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

ಶಬ್ದ ಶಕ್ತಿ ಸುಂದರ ಕವಿತೆಗೆ ಮುಖ್ಯ - ಡಾ.ಕೆ.ಬಿ.ಬ್ಯಾಳಿ



ನಾವು ಬಳಸುವ ಶಬ್ದಗಳು ಕವಿತೆಗೆ ಶಕ್ತಿಯನ್ನು ನೀಡುತ್ತವೆ. ಶಬ್ದ ಶಕ್ತಿಯಿಂದ ಕವಿತೆಗಳು ಸುಂದರ ರೂಪ ಪಡೆಯುತ್ತವೆ. ಕವಿತೆಗಳ ಅರ್ಥ ಇನ್ನೂ ಹೆಚ್ಚಾಗುತ್ತದೆ ಎಂದು ಹಿರಿಯ ಕವಿ ಡಾ.ಕೆ.ಬಿ.ಬ್ಯಾಳಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕವಿಸಮೂಹ,ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕವಿತೆಯನ್ನು ವಿಮರ್ಶೆ ಮಾಡಬಾರದು ಅದನ್ನು ಕವಿಯು ತನ್ನ ಭಾವನೆಗಳಿಗೆ ತಕ್ಕಂತೆ ಬರೆದಿರುತ್ತಾನೆ. ಕವಿತೆ ಹುಟ್ಟಿದ ಸಮಯ, ಸಂದರ್ಭ ಮತ್ತು ಕವಿಯ ಮನಸ್ಥಿತಿಗೆ ಅನುಗುಣವಾಗಿ ಕವನವಿರುತ್ತದೆ. ಅದನ್ನೆಲ್ಲಾ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಬಹುದಷ್ಟೆ ಎಂದರು. ಕೆಲವು ಸಲ ಈ ಕವನಗಳನ್ನು ವಿಮರ್ಶೆ ಮಾಡುವಲ್ಲಿ ವಿಮರ್ಶಕ ಸೋಲುತ್ತಾನೆ. ಕವಿತೆ ಯಾವಾಗ ಎಲ್ಲಿ ಹುಟ್ಟುತ್ತದೋ ಗೊತ್ತಿಲ್ಲ, ಹುಟ್ಟಿದ ತಕ್ಷಣ ಬರೆಯಿರಿ , ಹಿರಿಯ ಕವಿಗಳ , ಅನುಭವಿಗಳ ಸಲಹೆ ಸೂಚನೆಗಳನ್ನು ಪಾಲಿಸಿದರೆ ಸುಂದರ ಕವಿತೆ ರಚನೆ ಸಾಧ್ಯ ಎಂದರು.
ವಿಮರ್ಶೆಗೂ ಮೊದಲು ಡಾ.ಕೆ.ಬಿ.ಬ್ಯಾಳಿಯವರು ಹಾಯ್ಕುಗಳು ಮತ್ತು ರುಬಾಯಿಗಳನ್ನು ಕುರಿತು ಮಾತನಾಡಿದರು. ಹಾಯಕುಗಳ ಮೂಲ ಮತ್ತು ಅದು ಈಗ ನಡೆದು ಬರುತ್ತಿರುವ ದಾರಿಯನ್ನು ತಿಳಿಸಿದ ಅವರು, ರುಬಾಯಿಗಳ ಬಗ್ಗೆಯೂ ಮಾತನಾಡಿ ಅದರ ರಚನೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಮಾತನಾಡಿದರು.
ಈ ಸಲದ ಕವಿಸಮೂಹ ಕಾರ್‍ಯಕ್ರಮದಲ್ಲಿ ೨೦ ಕವಿಗಳು ತಮ್ಮ ಕವನ ವಾಚನ ಮಾಡಿದ್ದು ವಿಶೇಷವಾಗಿತ್ತು.
ಎನ್.ಜಡೆಯಪ್ಪ- ಜೀವನವಲ್ಲ, ಎ.ಪಿ.ಅಂಗಡಿ-ಇಂತವರು ಇರ್ತಾರ, ವಿರೇಶ ಹುಲ್ಲೂರ-ಅಂಕಿತ, ಶಾಂತಾದೇವಿ ಹಿರೇಮಠ- ಎಲ್ಲಿಗೆ ಹೋದೆ?, ಲಕ್ಷ್ಮೀ- ಕವಿಯ ಆಸೆ, ಪುಷ್ಪಲತಾ ಏಳುಭಾವಿ- ಹಾಯ್ಕುಗಳು, ವಾಗೀಶ ಪಾಟೀಲ್-ಬೇಡಿಕೆ, ಮಹಾಂತೇಶ ಮಲ್ಲನಗೌಡರ- ಬದುಕು, ಶರಣಬಸಪ್ಪ ಅಳ್ಳಳ್ಳಿ-ಮಾಯ,ನಾಶ, ಶಿ.ಕಾ.ಬಡಿಗೇರ-ನಿರಾಸೆ, ಕಾರಣ, ಮಹೇಶ ಬಳ್ಳಾರಿ- ಬದುಕು ಜಟಕಾ ಬಂಡಿ, ಶ್ರೀನಿವಾಸ ಚಿತ್ರಗಾರ- ಕವಿ, ಕಿವಿ, ಜಿ.ಎಸ್.ಬಾರಕೇರ- ಇಟಗಿ ದೇವಾಲಯ, ಎಸ್.ಚೌಡೇಶ್- ಪೋಸ್ಟಮ್ಯಾನ್, ವೀರಣ್ಣ ಹುರಕಡ್ಲಿ- ಕೇಳುವರಾರು?, ಅಲ್ಲಮಪ್ರಭು ಬೆಟ್ಟದೂರು-ಮಠ,ಸಾರು ಚುಟುಕುಗಳು, ವೀರಣ್ಣ ವಾಲಿ- ಜೆಡ್ ಗುಡಿ, ವಿಠ್ಠಪ್ಪ ಗೋರಂಟ್ಲಿ-ಮೌನ ಮಾತಾದಾಗ, ಸಿರಾಜ್ ಬಿಸರಳ್ಳಿ- ಕನಸುಗಳು ಕವನ ವಾಚನ ಮಾಡಿದರು. ಈ ಎಲ್ಲ ಕವನಗಳ ಕುರಿತು ಡಾ.ಕೆ.ಬಿ.ಬ್ಯಾಳಿಯವರು ಮಾತನಾಡಿದರು.
ಮುಂದಿನ ವಾರದ ಕವಿಸಮಯದಲ್ಲಿ ಜಿಲ್ಲೆಯ ಪ್ರತಿಭಾವಂತ ಯುವಕವಿ ಮಹೇಶ ಬಳ್ಳಾರಿಯವರ ಕಗ್ಗತ್ತಲು ಕವನ ಸಂಕಲನ ಕುರಿತು ಸಂವಾದ ನಡೆಸಲು ತೀರ್‍ಮಾನಿಸಲಾಗಿದೆ.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.