Monday, October 18, 2010

ಕವಿಗೆ ಬದ್ದತೆ ಇರಬೇಕು - ಡಾ.ಮಹಾಂತೇಶ ಮಲ್ಲನಗೌಡರ



ಕೊಪ್ಪಳ : ಕವಿ ಸ್ವಸಂತೊಷಕ್ಕಾಗಿ ರಚಿಸಿದ ಕವಿತೆ ಎಲ್ಲರಿಗೂ ತಲುಪಬೇಕು. ಓದುಗರು ಅವರವರ ಭಾವನೆಗಳಿಗೆ ತಕ್ಕಂತೆ ಕವನವನ್ನು ಅರ್ಥೈಸಿಕೊಳ್ಳುತ್ತಾರೆ. ಹೀಗಾಗಿ ಕವನಗಳು ನಾನಾ ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಹಾಡುವುದು ಅನಿವಾರ್‍ಯ ಕರ್ಮ ನನಗೆ ಎನ್ನುವಂತೆ ವಿಮರ್ಶೆಗಳಿಗೆ ಅಂಜದೇ ಕವಿ ಬರೆಯುತ್ತಾ ಹೋಗಬೇಕು . ಕವಿಯಾದವನು ಸಮಾಜದೊಂದಿಗೆ ಹೋರಾಟಕ್ಕಿಳಿಯುತ್ತಾನೆ. ಸ್ವಂತ ಬದುಕು ಮತ್ತು ಸಾಮಾಜಿಕ ಬದುಕುಗಳ ನಡುವೆ ಹೋರಾಡುತ್ತ ಕವಿತೆ ಬರೆಯುವ ಕವಿಗೆ ಬದ್ದತೆ ಇರಬೇಕು ಎಂದು ಹಿರಿಯ ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಕಾವ್ಯದ ವಿಮರ್ಶೆ ಮಾಡಿ ಮಾತನಾಡುತ್ತಿದ್ದರು. ಇತ್ತೀಚಿಗೆ ಬದ್ದತೆ ಇರುವ ಕವಿಗಳು, ಸಾಹಿತಿಗಳು ಕಡಿಮೆಯಾಗುತ್ತಿದ್ದಾರೆ ಸಾಮಾಜಿಕ ಜೀವನದಲ್ಲಿ ಹೋರಾಟದ ಬದಲು ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಿದ್ದಾರೆ ಎಂದು ಅವರು ವಿಷಾಧಿಸಿದರು.
ಡಾ.ಮಹಾಂತೇಶ ಮಲ್ಲನಗೌಡರು ಭಾವಪೂರ್ಣವಾಗಿ ತಮ್ಮ ಭಾವಗೀತೆಯನ್ನು ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದಕ್ಕೂ ಮೊದಲು ನಡೆದ ಕವನ ವಾಚನದಲ್ಲಿ ಶಿವಪ್ರಸಾದ ಹಾದಿಮನಿ- ರಸ ಋಷಿಗೆ ನಮನ, ಎನ್.ಜಡೆಯಪ್ಪ- ಚುಟುಕುಗಳು, ರಮೇಶ ಬನ್ನಿಕೊಪ್ಪ-ವಿಮೋಚನೆ, ಶಿ.ಕಾ.ಬಡಿಗೇರ-ಒಡಲ ದನಿ, ಮಹೇಶ ಬಳ್ಳಾರಿ-ನಿತ್ಯಾನಂದ, ಸಿರಾಜ್ ಬಿಸರಳ್ಳಿ- ತೇರು ಎಳೆಯೋಣ, ಎ.ಪಿ.ಅಂಗಡಿ- ಕಿನ್ನಾಳದ ಗೊಂಬೆಗಳು, ಬಸಪ್ಪ ಬಾರಕೇರ- ವಚನಗಳು, ಪುಷ್ಪಲತಾ ಏಳುಬಾವಿ- ಹೈಕುಗಳು, ಶಾಂತೇಶ ಬಡಿಗೇರ- ಅಂಬೆ ಕವನಗಳನ್ನು ವಾಚನ ಮಾಡಿದರು. ಮಹೇಶ ಬಳ್ಳಾರಿ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment