Monday, November 22, 2010

ಶ್ರೀಮತಿ ವಿಮಲಾ ಇನಾಂದಾರ್ ಜಿಲ್ಲೆಯ ಯುವಕವಿಯತ್ರಿಯರಿಗೆ ಮಾದರಿ



ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತನ್ನ ೩೦ನೇ ಕಾರ್‍ಯಕ್ರಮದಲ್ಲಿ ಶ್ರೀಮತಿ ವಿಮಲಾ ಇನಾಂದಾರ್ ಅತಿಥಿಯಾಗಿ ಭಾಗವಹಿಸಿದ್ದರು. ೩೦ನೇ ಕವಿಸಮಯದಲ್ಲಿ ಹೊಸ ಪ್ರಯೋಗ ಮಾಡಲಾಗಿತ್ತು. ಶ್ರೀಮತಿ ವಿಮಲಾ ಇನಾಂದಾರ್ ರ ಕವಿತೆಗಳ ಕುರಿತು ಸಂವಾದ ಮತ್ತು ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ವಿಮಲಾ ಇನಾಂದಾರ್ ತಮ್ಮ ಮೆಚ್ಚಿನ ೬ ಕವನಗಳನ್ನು ವಾಚಿಸಿದರು. ನಂತರ ಸೇರಿದ್ದ ಹಿರಿಯ,ಕಿರಿಯ ಕವಿಗಳು ಸಂವಾದದಲ್ಲಿ ಭಾಗವಹಿಸಿದರು.
ಶ್ರೀಮತಿ ವಿಮಲಾ ಇನಾಂದಾರ್ ನಮ್ಮ ಮಕ್ಕಳು, ಗಟ್ಟಿತನ, ಕಡಲ ಮೊರೆತ, ತಾಯಿಯ ಋಣ, ಇದು ನನ್ನ ಆಸೆ,ಹಕ್ಕು ಎಂಬ ಕವನಗಳನ್ನು ವಾಚನ ಮಾಡಿ, ಕವಿತೆ ಹುಟ್ಟಿದ ಸಮಯದ ಬಗ್ಗೆ,ಕಾವ್ಯ ಸೃಷ್ಟಿಯ ಪ್ರೇರಣೆಯ ಬಗ್ಗೆ ಹೇಳಿದರು. ಇವರ ಕುರಿತು ಕವಿಯತ್ರಿ ಅರುಣಾ ನರೇಂದ್ರ ಮಾತನಾಡಿದರು.
ಕವನ ವಾಚನದ ನಂತರ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿ ವಿಮಲಾ ಇನಾಂದಾರ್ ಕವನಗಳು ಬಹಳ ಸರಳವಾಗಿ ಮನಮುಟ್ಟುವಂತಿವೆ ಎಂದರು. ಸುಮತಿ ಹಿರೇಮಠ ಕವಿಯ ಕಾಲಘಟ್ಟದ ಮೇಲೆ ಕಾವ್ಯವನ್ನು ಅಳೆಯಬೇಕು, ವಿಮಲಾ ಇನಾಂದಾರ್ ರ ಕವನಗಳಲ್ಲಿ ಇನ್ನಷ್ಟು ಗಟ್ಟಿತನ ಬೇಕು ಎಂದರು. ಕಾವ್ಯದಲ್ಲಿ ಗಟ್ಟಿತನದ ಬಗ್ಗೆ ಚರ್ಚೆ ನಡೆಯಿತು. ಪುಷ್ಪಲತಾ ಏಳುಬಾವಿ- ನಮ್ಮ ಮಕ್ಕಳು ಕವಿತೆಯಲ್ಲಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆನ್ನುವ ಆಶಯ ಇದೆ ಎಂದರು. ಕವನಗಳ ಕುರಿತು ರೇಣುಕಾ ಕರಿಗಾರ, ಶಾಂತಾದೇವಿ ಹಿರೇಮಠ, ಎಸ್.ಎಂ.ಕಂಬಾಳಿಮಠ,ಬಸವರಾಜ ಶೀಲವಂತರ ಮಾತನಾಡಿದರು.
ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ನಮ್ಮ ಮಕ್ಕಳು ಶಿಶು ಗೀತೆಗೆ ಉತ್ತಮ ಉದಾಹರನೆ, ಗಟ್ಟಿತನ ಕವನದಲ್ಲಿ ವಾಚ್ಯತೆ ಕಂಡುಬರುತ್ತದೆ. ಮಾತುಗಳಲ್ಲಿ ಹೇಳಲಾಗದ್ದನ್ನು ಕಾವ್ಯದ ಮೂಲಕ ಹೇಳಬೇಕು. ಆ ರೀತಿಯ ಕಾವ್ಯದ ಲಕ್ಷಣಗಳನ್ನು ಅವರ ಕಡಲ ಮೊರೆತ ಕವನದಲ್ಲಿ ಸಹಜವಾಗಿ ಮೂಡಿಬಂದಿದೆ. ಹೆಸರಿನ ಹಂಬಲ ಮೀರಿ ಕಾಲಾತೀತವಾದ ದಾರ್ಶನಿಕ ಭಾವ ಕವಿಯಲ್ಲಿ ಒಳಗೊಂಡಿದ್ದಾಗ ಹೆಚ್ಚು ಮಹತ್ವದ ಕಾವ್ಯ ಮೂಡಿ ಬರಲು ಸಾಧ್ಯ, ಕೊಪ್ಪಳ ಜಿಲ್ಲೆಯಲ್ಲಿ ವಿಮಲಾ ಇನಾಂದಾರ್ ರಂತಹ ಹಿರಿಯ ಕವಿಯತ್ರಿಯರು ಅನೇಕ ಕಿರಿಯರಿಗೆ ಮಾದರಿಯಾಗಿದ್ದಾರೆ. ಕವಿಯತ್ರಿಯರು ಕವಿಸಮಯದ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಹೊರ ಬರುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್‍ಯಕ್ರಮದಲ್ಲಿ ಭುಜಂಗಸ್ವಾಮಿ ಇನಾಂದಾರ್, ವೀರಣ್ಣ ಹುರಕಡ್ಲಿ, ಹನುಮಂತಪ್ಪ ಅಂಡಗಿ,ತಿಪ್ಪೆಸ್ವಾಮಿ ಬೋಧಾ,ಕನಕಪ್ಪ ತಳವಾರ,ಮೆಹಮೂದಮಿಯಾ, ಲಕ್ಷ್ಮಿ ಶೆಟ್ಟರ್,ಸವಡಿ ಶಿವಪ್ರಸಾದ ಹಾದಿಮನಿ, ಶಾಂತೇಶ,ಜಡೆಯಪ್ಪ ಎನ್. ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ ಕೋರಿದರೆ, ಕಾರ್‍ಯಕ್ರಮವನ್ನು ಶಿ.ಕಾ.ಬಡಿಗೇರ ನಡೆಸಿಕೊಟ್ಟರು.

No comments:

Post a Comment