Monday, November 29, 2010

ಪ್ರಾಸಬದ್ದವಾಗಿರುವ,ಸರಳ ಕವನಗಳು ಅರುಣಾ ನರೇಂದ್ರರ ವೈಶಿಷ್ಟ್ಯ



ಕೊಪ್ಪಳ :ಪ್ರಾಸಬದ್ದವಾಗಿರುವ,ಸರಳ ಕವನಗಳು ಮಕ್ಕಳನ್ನು ತಲುಪುತ್ತವೆ. ಅವರಿಗೆ ಇಷ್ಟವಾಗುವಂತೆ ಶಿಶುಕವಿತೆಗಳು, ಶಿಶುಸಾಹಿತ್ಯ ರಚನೆಯಾಗಬೇಕು. ಮಕ್ಕಳ ಕವನಗಳಲ್ಲಿ ರೂಪಕ, ಉಪಮೆಗಳ ಭಾರಬೇಕಿಲ್ಲ. ಅವರ ಮನಸ್ಥಿತಿಗೆ ತಕ್ಕಂತಹ ಕವನಗಳಿದ್ದಾಗ ಮಾತ್ರ ಮಕ್ಕಳು ಅವನ್ನು ಇಷ್ಟಪಡುತ್ತಾರೆ. ಮಕ್ಕಳ ಜೊತೆಗಿನ ಸತತ ಒಡನಾಟ, ಅವರ ಆಸಕ್ತಿಗಳನ್ನು, ಬೇಕು ಬೇಡಗಳನ್ನು ಗಮನಿಸುತ್ತಿರಬೇಕು. ಆಗ ಶಿಶು ಕವಿತೆಗಳನ್ನು ರಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಶಿಶು ಸಾಹಿತಿಗಳು ಒಳ್ಳೆಯ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಅರುಣಾ ನರೇಂದ್ರರ ಕವನಗಳು ಮಕ್ಕಳನ್ನು ತಟ್ಟನೆ ಸೆಳೆಯುವಂತಿವೆ. ಮಕ್ಕಳ ಸಾಹಿತ್ಯ ಕೃಷಿಯಲ್ಲಿ ಹೆಸರು ಮಾಡಿರುವ ಕವಿಯತ್ರಿ ಅವರು ಎಂದು ಕವಿಸಮಯದ ಸಂವಾದದಲ್ಲಿ ಭಾಗವಹಿಸಿದ ಕವಿಗಳು ಹೇಳಿದರು.
ಮಕ್ಕಳ ಮನಸ್ಸು ಶುಭ್ರ ಹಾಳೆಯ ರೀತಿ. ಹೀಗಾಗಿ ಮಕ್ಕಳ ಸಾಹಿತ್ಯದಲ್ಲಿ ನೈತಿಕತೆ ಮುಖ್ಯ ಅಂಶವಾಗಿರಬೇಕು ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಕ್ಕಳ ಕವಿಯತ್ರಿ ಅರುಣಾ ನರೇಂದ್ರ ತಮ್ಮ ಆಯ್ದ ಕವನಗಳನ್ನು ವಾಚನ ಮಾಡಿದರು. ಸೆರಗಲ್ಲಿ ಬಚ್ಚಿಡುವೆ,ಮೊಬೈಲ್, ಮೌನದ ಹಕ್ಕಿ, ಹೋಗಬೇಡ ಅಮ್ಮ,ಮುದ್ದಿನ ಗಿಣಿ,ಹಕ್ಕು, ದೇವರ ಪಾತ್ರ, ನಾಯಿ ಮರಿ, ಅಮ್ಮನ ಸೆರಗು ಕವನಗಳ ವಾಚನ ಮಾಡಿದರು. ನಂತರ ಆ ಕವನಗಳ ಕುರಿತು ಚರ್ಚೆ ಮತ್ತು ಸಂವಾದ ನಡೆಯಿತು. ಸಂವಾದದಲ್ಲಿ ಡಾ.ವಿ.ಬಿ.ರಡ್ಡೇರ್, ಡಾ.ಮಹಾಂತೇಶ ಮಲ್ಲನಗೌಡರ, ಈಶ್ವರ ಹತ್ತಿ, ಶಿವಪ್ರಸಾದ ಹಾದಿಮನಿ,ಎನ್.ಜಡೆಯಪ್ಪ ,ಎ.ಪಿ.ಅಂಗಡಿ, ಪುಷ್ಪಲತಾ ಏಳುಬಾವಿ, ಜಿ.ಎಸ್.ಗೋನಾಳ, ಬಡಿಗೇರ ಇನ್ನಿತರರು ಭಾಗವಹಿಸಿದ್ದರು. ಅರುಣಾ ನರೇಂದ್ರರ ಪರಿಚಯ ಸಾಧನೆ ಕುರಿತು ಶಿವಪ್ರಸಾದ ಹಾದಿಮನಿ ಮಾತನಾಡಿದರು. ಎನ್.ಜಡೆಯಪ್ಪ ಸ್ವಾಗತಿಸಿದರು. ಬಸಪ್ಪ ಬಾರಕೇರ, ವೀರಣ್ಣ ಹುರಕಡ್ಲಿ, ರಾಕೇಶ್, ಬಸವರಾಜ ಶೀಲವಂತರ, ಮಲ್ಲಿಕಾರ್ಜುನ ಪಾಟೀಲ್,ಶಿವಾನಂದ ಹೊದ್ಲೂರ ಸೇರಿದಂತೆ ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Saturday, November 27, 2010

ಕವಿಸಮಯ -೩೧: ವಾರದ ಅತಿಥಿಯಾಗಿ ಶ್ರೀಮತಿ ಅರುಣಾ ನರೇಂದ್ರ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರತಿ ರವಿವಾರ ಸಂಜೆ ಜರುಗುವ ಕಾರ್‍ಯಕ್ರಮದಲ್ಲಿ ಕವಿಗಳು ತಮ್ಮ ಸ್ವಂತ ಕವಿತೆ/ಚುಟುಕು/ಶಾಯಿರಿ/ಗಜಲ್ ಗಳನ್ನು ವಾಚಿಸುವರು ,ಓದಿದ ಕವಿತೆಗಳ ಕುರಿತು ಉಪಸ್ಥಿತರಿರುವ ಹಿರಿಯ ಕವಿಗಳು ವಿಮರ್ಶಿಸುವರು.
ಶ್ರೀಮತಿ ಅರುಣಾ ನರೇಂದ್ರ ವಾರದ ಅತಿಥಿಯಾಗಿ ಆಗಮಿಸಲಿದ್ದಾರೆ.
ಕವಿಸಮೂಹದಲ್ಲಿ ಈ ವಾರ ಶ್ರೀಮತಿ ಅರುಣಾ ನರೇಂದ್ರ ಕಾವ್ಯ,ಸಾಹಿತ್ಯ ಕುರಿತು ಚರ್ಚೆ ಮತ್ತು ಸಂವಾದ ನಡೆಯಲಿದೆ.
ಈ ಕವಿ ಸಮಯ ಕಾರ್‍ಯಕ್ರಮ ರವಿವಾರ ೨೮-೧೧-೨೦೧೦ ರಂದು ನಗರದ ಪ್ರವಾಸಿ ಮಂದಿರದಲ್ಲಿ ಕವಿ ಸಮಯ ಸಂಜೆ ೪-೩೦ ಗಂಟೆಗೆ ಜರುಗಲಿದೆ. ಆಸಕ್ತರು ಮತ್ತು ಕವಿಗಳು ಭಾಗವಹಿಸಲು ಕವಿಸಮೂಹ ವಿನಂತಿಸಿದೆ. ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಶಿ.ಕಾ.ಬಡಿಗೇರ ೯೦೩೬೨೬೫೦೩೭ ಸಂಪರ್ಕಿಸಿ

Monday, November 22, 2010

ಶ್ರೀಮತಿ ವಿಮಲಾ ಇನಾಂದಾರ್ ಜಿಲ್ಲೆಯ ಯುವಕವಿಯತ್ರಿಯರಿಗೆ ಮಾದರಿ



ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತನ್ನ ೩೦ನೇ ಕಾರ್‍ಯಕ್ರಮದಲ್ಲಿ ಶ್ರೀಮತಿ ವಿಮಲಾ ಇನಾಂದಾರ್ ಅತಿಥಿಯಾಗಿ ಭಾಗವಹಿಸಿದ್ದರು. ೩೦ನೇ ಕವಿಸಮಯದಲ್ಲಿ ಹೊಸ ಪ್ರಯೋಗ ಮಾಡಲಾಗಿತ್ತು. ಶ್ರೀಮತಿ ವಿಮಲಾ ಇನಾಂದಾರ್ ರ ಕವಿತೆಗಳ ಕುರಿತು ಸಂವಾದ ಮತ್ತು ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ವಿಮಲಾ ಇನಾಂದಾರ್ ತಮ್ಮ ಮೆಚ್ಚಿನ ೬ ಕವನಗಳನ್ನು ವಾಚಿಸಿದರು. ನಂತರ ಸೇರಿದ್ದ ಹಿರಿಯ,ಕಿರಿಯ ಕವಿಗಳು ಸಂವಾದದಲ್ಲಿ ಭಾಗವಹಿಸಿದರು.
ಶ್ರೀಮತಿ ವಿಮಲಾ ಇನಾಂದಾರ್ ನಮ್ಮ ಮಕ್ಕಳು, ಗಟ್ಟಿತನ, ಕಡಲ ಮೊರೆತ, ತಾಯಿಯ ಋಣ, ಇದು ನನ್ನ ಆಸೆ,ಹಕ್ಕು ಎಂಬ ಕವನಗಳನ್ನು ವಾಚನ ಮಾಡಿ, ಕವಿತೆ ಹುಟ್ಟಿದ ಸಮಯದ ಬಗ್ಗೆ,ಕಾವ್ಯ ಸೃಷ್ಟಿಯ ಪ್ರೇರಣೆಯ ಬಗ್ಗೆ ಹೇಳಿದರು. ಇವರ ಕುರಿತು ಕವಿಯತ್ರಿ ಅರುಣಾ ನರೇಂದ್ರ ಮಾತನಾಡಿದರು.
ಕವನ ವಾಚನದ ನಂತರ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿ ವಿಮಲಾ ಇನಾಂದಾರ್ ಕವನಗಳು ಬಹಳ ಸರಳವಾಗಿ ಮನಮುಟ್ಟುವಂತಿವೆ ಎಂದರು. ಸುಮತಿ ಹಿರೇಮಠ ಕವಿಯ ಕಾಲಘಟ್ಟದ ಮೇಲೆ ಕಾವ್ಯವನ್ನು ಅಳೆಯಬೇಕು, ವಿಮಲಾ ಇನಾಂದಾರ್ ರ ಕವನಗಳಲ್ಲಿ ಇನ್ನಷ್ಟು ಗಟ್ಟಿತನ ಬೇಕು ಎಂದರು. ಕಾವ್ಯದಲ್ಲಿ ಗಟ್ಟಿತನದ ಬಗ್ಗೆ ಚರ್ಚೆ ನಡೆಯಿತು. ಪುಷ್ಪಲತಾ ಏಳುಬಾವಿ- ನಮ್ಮ ಮಕ್ಕಳು ಕವಿತೆಯಲ್ಲಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆನ್ನುವ ಆಶಯ ಇದೆ ಎಂದರು. ಕವನಗಳ ಕುರಿತು ರೇಣುಕಾ ಕರಿಗಾರ, ಶಾಂತಾದೇವಿ ಹಿರೇಮಠ, ಎಸ್.ಎಂ.ಕಂಬಾಳಿಮಠ,ಬಸವರಾಜ ಶೀಲವಂತರ ಮಾತನಾಡಿದರು.
ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ನಮ್ಮ ಮಕ್ಕಳು ಶಿಶು ಗೀತೆಗೆ ಉತ್ತಮ ಉದಾಹರನೆ, ಗಟ್ಟಿತನ ಕವನದಲ್ಲಿ ವಾಚ್ಯತೆ ಕಂಡುಬರುತ್ತದೆ. ಮಾತುಗಳಲ್ಲಿ ಹೇಳಲಾಗದ್ದನ್ನು ಕಾವ್ಯದ ಮೂಲಕ ಹೇಳಬೇಕು. ಆ ರೀತಿಯ ಕಾವ್ಯದ ಲಕ್ಷಣಗಳನ್ನು ಅವರ ಕಡಲ ಮೊರೆತ ಕವನದಲ್ಲಿ ಸಹಜವಾಗಿ ಮೂಡಿಬಂದಿದೆ. ಹೆಸರಿನ ಹಂಬಲ ಮೀರಿ ಕಾಲಾತೀತವಾದ ದಾರ್ಶನಿಕ ಭಾವ ಕವಿಯಲ್ಲಿ ಒಳಗೊಂಡಿದ್ದಾಗ ಹೆಚ್ಚು ಮಹತ್ವದ ಕಾವ್ಯ ಮೂಡಿ ಬರಲು ಸಾಧ್ಯ, ಕೊಪ್ಪಳ ಜಿಲ್ಲೆಯಲ್ಲಿ ವಿಮಲಾ ಇನಾಂದಾರ್ ರಂತಹ ಹಿರಿಯ ಕವಿಯತ್ರಿಯರು ಅನೇಕ ಕಿರಿಯರಿಗೆ ಮಾದರಿಯಾಗಿದ್ದಾರೆ. ಕವಿಯತ್ರಿಯರು ಕವಿಸಮಯದ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಹೊರ ಬರುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್‍ಯಕ್ರಮದಲ್ಲಿ ಭುಜಂಗಸ್ವಾಮಿ ಇನಾಂದಾರ್, ವೀರಣ್ಣ ಹುರಕಡ್ಲಿ, ಹನುಮಂತಪ್ಪ ಅಂಡಗಿ,ತಿಪ್ಪೆಸ್ವಾಮಿ ಬೋಧಾ,ಕನಕಪ್ಪ ತಳವಾರ,ಮೆಹಮೂದಮಿಯಾ, ಲಕ್ಷ್ಮಿ ಶೆಟ್ಟರ್,ಸವಡಿ ಶಿವಪ್ರಸಾದ ಹಾದಿಮನಿ, ಶಾಂತೇಶ,ಜಡೆಯಪ್ಪ ಎನ್. ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ ಕೋರಿದರೆ, ಕಾರ್‍ಯಕ್ರಮವನ್ನು ಶಿ.ಕಾ.ಬಡಿಗೇರ ನಡೆಸಿಕೊಟ್ಟರು.

Wednesday, November 17, 2010

ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳು ರಚನೆಯಾಗಲಿ




ಕೊಪ್ಪಳ : ಕವಿತೆ ಎನ್ನುವುದು ಒಳಾರ್ಥದೊಂದಿಗೆ ಮೂಡಿಬಂದಾಗ ಒಳ್ಳೆಯ ಪರಿಣಾಮ ಬೀರುತ್ತದೆ. ಕವಿತೆ ಗಧ್ಯದಷ್ಟು ಸುಲಭವಲ್ಲ . ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳು , ಸಾರ್‍ವಕಾಲಿಕ ಕವನಗಳ ರಚನೆಯಾಗಬೇಕು ಎಂದು ಯುವ ಬರಹಗಾರ ಬಸವರಾಜ ಮೂಲಿಮನಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಜಡೆಯಪ್ಪ ಎನ್- ಕನಸು ಕಂಡಿದ್ದೀಯಾ ನೀನು?, ಶಿ.ಕಾ.ಬಡಿಗೇರ- ಬಾಲ್ಯದ ಬಣ್ಣದೊಳಗೆ ಮಿಂದು, ವಿಮಲಾ ಇನಾಂದಾರ್- ನಾಡಗೀತೆ, ಶಾಂತಾದೇವಿ ಹಿರೇಮಠ- ಬಣ್ಣದ ಕಾರಂಜಿ, ಪುಷ್ಪಲತಾ ಏಳುಬಾವಿ- ಪಾರಿವಾಳ, ಶಿವಾನಂದ ಹೊದ್ಲೂರ- ಅಬುರವರ ಕವನ, ಡಾ.ಮಹಾಂತೇಶ ಮಲ್ಲನಗೌಡರ- ಕಾಮನಬಿಲ್ಲು, ಅಲ್ಲಮಪ್ರಭು ಬೆಟ್ಟದೂರ- ಮಹಾಸ್ವಾಮಿಗಳು ಬರುತ್ತಿದ್ದಾರೆ ಎಚ್ಚರಿಕೆ, ವಾಸುದೇವ ಕುಲಕರ್ಣಿ- ಬಸ್ಸಿನಲ್ಲಿ ಹಿಂದುಳಿದವರು, ಸಿರಾಜ್ ಬಿಸರಳ್ಳಿ- ಚುಟುಕು, ಶಾಯಿರಿಗಳು, ಎ.ಪಿ.ಅಂಗಡಿ- ಸೊಳ್ಳೆಗಳು ಸಾರ್ ಸೊಳ್ಳೆಗಳು, ಶಾಂತೇಶ ಬಡಿಗೇರ-ಹೃದಯ ಮಿಡಿತ, ಅರುಣಾ ನರೇಂದ್ರ- ಕೊಡೆ ಚುಟುಕು, ವಿಠ್ಠಪ್ಪ ಗೋರಂಟ್ಲಿ, ಕನಸು ಬಿತ್ತಿ ಕಣ್ಮರೆಯಾದ ವಿಭಾ, ವೀರಣ್ಣ ಹುರಕಡ್ಲಿ- ಮಾತು, ಕನಕಪ್ಪ ತಳವಾರ- ಚೆನ್ನವೀರ ಕಣವಿ, ಎಸ್.ಎಂ.ಕಂಬಾಳಿಮಠ- ಅಸ್ತು, ಅಮ್ಮಾ-ಅಪ್ಪ, ತಿಪ್ಪೆಸ್ವಾಮಿ ಬೋಧಾ- ಅಕ್ಕಮಹಾದೇವಿ, ಜಿ.ಎಸ್.ಬಾರಕೇರ- ಚಾಚಾ ನೆಹರು ಕವನಗಳನ್ನು ವಾಚನ ಮಾಡಿದರು.
ಮುಂದಿನ ವಾರ ಶ್ರೀಮತಿ ವಿಮಲಾ ಇನಾಂದಾರ್ ರ ಕಾವ್ಯ ಕುರಿತು ವಿಮರ್ಶೆ ಹಾಗೂ ಚರ್ಚೆ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜಶೇಖರ ಅಂಗಡಿ,ಭುಜಂಗಸ್ವಾಮಿ ಹಿರೇಮಠ ,ಮಾನಪ್ಪ ಬೆಲ್ಲದ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಿಠ್ಠಪ್ಪ ಗೋರಂಟ್ಲಿಯವರು ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Saturday, November 13, 2010

ಕವಿಸಮಯ ಕಾರ್‍ಯಕ್ರಮ-೨೯: ವಾರದ ಅತಿಥಿಯಾಗಿ ಯುವ ಬರಹಗಾರ ಬಸವರಾಜ್ ಮೂಲಿಮನಿ


ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್‍ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರತಿ ರವಿವಾರ ಸಂಜೆ ಜರುಗುವ ಕಾರ್‍ಯಕ್ರಮದಲ್ಲಿ ಕವಿಗಳು ತಮ್ಮ ಸ್ವಂತ ಕವಿತೆ/ಚುಟುಕು/ಶಾಯಿರಿ/ಗಜಲ್ ಗಳನ್ನು ವಾಚಿಸುವರು ,ಓದಿದ ಕವಿತೆಗಳ ಕುರಿತು ಉಪಸ್ಥಿತರಿರುವ ಹಿರಿಯ ಕವಿಗಳು ವಿಮರ್ಶಿಸುವರು.
ಯುವ ಬರಹಗಾರ ಬಸವರಾಜ್ ಮೂಲಿಮನಿ ವಾರದ ಅತಿಥಿಯಾಗಿ ಆಗಮಿಸಿ ಕವನಗಳ ವಿಮರ್ಶೆ ಮಾಡಲಿದ್ದಾರೆ.
ಈ ಕವಿ ಸಮಯ ಕಾರ್‍ಯಕ್ರಮ ರವಿವಾರ ೧೪-೧೧-೨೦೧೦ ರಂದು ನಗರದ ಪ್ರವಾಸಿ ಮಂದಿರದಲ್ಲಿ ಕವಿ ಸಮಯ ಸಂಜೆ ೪-೩೦ ಗಂಟೆಗೆ ಜರುಗಲಿದೆ. ಆಸಕ್ತರು ಮತ್ತು ಕವಿಗಳು ಭಾಗವಹಿಸಲು ಕವಿಸಮೂಹ ವಿನಂತಿಸಿದೆ. ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಶಿ.ಕಾ.ಬಡಿಗೇರ ೯೦೩೬೨೬೫೦೩೭ ಸಂಪರ್ಕಿಸಿ

Tuesday, November 9, 2010

ಹಿರಿಯ ಕವಿಗಳ ಮಾರ್ಗದರ್ಶನ ಅವಶ್ಯಕ- ಶಿವಪ್ರಸಾದ ಹಾದಿಮನಿ



ಕೊಪ್ಪಳ : ಎಲ್ಲರೂ ಹೇಳಿದ ಮಾತುಗಳನ್ನೇ ಹೇಳುವುದರಲ್ಲಿ ಅರ್ಥವಿಲ್ಲ. ಹಿರಿಯ ಕವಿಗಳ ಮಾರ್ಗದರ್ಶನ ಯುವಕವಿಗಳಿಗೆ ಅವಶ್ಯಕ ಮತ್ತು ಅವರು ಹೇಳಿದ ಮಾತುಗಳನ್ನು ಕಾವ್ಯ ರಚನೆಯಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಗಟ್ಟಿ ಕಾವ್ಯ ಸಾಧ್ಯ ಎಂದು ಯುವ ಕವಿ ಶಿವಪ್ರಸಾದ ಹಾದಿಮನಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ಕವಿಸಮಯ 28ನೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಸಮಾನ ಮನಸ್ಕರ ಬೆರೆಯುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ ಅವರು ಮುಕ್ತವಾಗಿ ಕವನಗಳ ವಿಮರ್ಶೆಮಾಡಿ ನಾನು ಮಾಡುತ್ತಿರುವುದು ವಿಮರ್ಶೆ ಅಲ್ಲ ಅವಲೋಕನ ಎಂದು ಹೇಳಿ ಸರಳವಾಗಿ ಕವನಗಳ ಕುರಿತು ಮಾತನಾಡಿದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ 20 ಕವಿಗಳು ತಮ್ಮ ಕವನ ವಾಚನ ಮಾಡಿದರು.

ಎ.ಪಿ.ಅಂಗಡಿ- ಪಟಾಕಿ, ಡಾ.ಮಹಾಂತೇಶ ಮಲ್ಲನಗೌಡರ- ಹಾಡು ಬಾರೆಲೆ ಕೋಗಿಲೆ, ಪುಷ್ಪಲತಾ ಏಳುಬಾವಿ- ಪಾಪದ ಹೂಗಳು, ಸುಮತಿ- ಪ್ರೀತಿಗೆ ಶ್ರದ್ದಾಂಜಲಿ, ಭಾವಬಿಂಬ,ಶಾಂತಾದೇವಿ ಹಿರೇಮಠ-ಚುಟುಕುಗಳು, ಲಕ್ಷ್ಮೀ ನಾಯಕ್-ಪ್ರೀತಿ, ಶಿ.ಕಾ.ಬಡಿಗೇರ-ಸಹಬಾಳ್ಬೆ,ಜಡೆಯಪ್ಪ-ದೀಪಾವಳಿ, ನೀ ಬದುಕಬಲ್ಲೆ, ವಿಠ್ಠಪ್ಪ ಗೋರಂಟ್ಲಿ- ಬರಾಕೋಗ್ಬೆಡಮಾ, ಎಸ್.ಎಂ.ಕಂಬಾಳಿಮಠ-ಇದ್ರ ಹೇಳ್ರಿ, ನಟರಾಜ ಸವಡಿ- ನೆರೆಹಾವಳಿ, ಸಿರಾಜ್ ಬಿಸರಳ್ಳಿ- ಸಿಕ್ಕುಗಳು, ಪ್ರೋ.ಅಲ್ಲಮಪ್ರಭು ಬೆಟ್ಟದೂರು-ಕವಿತೆ ಚುಟುಕುಗಳು,ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್- ಕವಿತೆ, ಡಾ.ಮಾರ್ಕಂಡಯ್ಯ ಹಂದ್ರಾಳ -ಚುಟುಕು, ಭರತೇಶ್ -ಯಾರಿವಳು, ಶಿವಾನಂದ ಹೊದ್ಲೂರ-ಕನ್ನಡಾಂಭೆ, ತುಳಸಿಪ್ರಿಯ- ನೀರಜೆ ಚುಟುಕು, ತಿಪ್ಪೇಸ್ವಾಮಿ ಭೋದಾ- ಕಾಯಕ ದಾಸೋಹ, ವಾಗೀಶ ಪಾಟೀಲ್-ನೆನಪುಗಳು ಕವನಗಳನ್ನು ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ ಶಿವಪ್ರಸಾದ ಹಾದಿಮನಿ ಕುರಿತು ಮಾತನಾಡಿದರು. ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.

Monday, November 1, 2010

ಕೋಮುವಾದವನ್ನು ಹತ್ತಿಕ್ಕಲು ಸಾಹಿತಿಗಳು ಮನುಷ್ಯ ಪ್ರೇಮ ಬೆಳೆಸಬೇಕು- ಮಕಾನದಾರ


ಕೊಪ್ಪಳ : ಜೀವನವನ್ನೇ ನರಕ ಮಾಡುತ್ತಿರುವ ,ಮನುಷ್ಯ ಮನುಷ್ಯರ ನಡುವೆ ಕಂದಕ ನಿರ್ಮಿಸಿ ಕೋಮುಸೌಹಾರ್ಧಕ್ಕೆ ದಕ್ಕೆ ತಂದು ಮಾರಣಹೋಮ ಮಾಡುತ್ತಿರುವವರಲ್ಲಿ ಮನುಷ್ಯ ಪ್ರೇಮ ಬೆಳೆಸಬೇಕು. ಇದು ಸಾಹಿತ್ಯದಿಂದ, ಕಾವ್ಯದಿಂದ ಸಾಧ್ಯ, ಸಾಹಿತಿಗಳು ಮನುಷ್ಯ ಪ್ರೇಮ ಬೆಳೆಸಬೇಕು ಎಂದು ಬಂಡಾಯ ಸಾಹಿತಿ ಗದಗಿನ ಎ.ಎಸ್.ಮಕಾನದಾರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸೂಫಿ ಸಂತರು ನಡೆದಾಡಿದಂತಹ ಸ್ಥಳಗಳಲ್ಲಿ ಕೋಮುವಾದದ ಬೀಜ ಬಿತ್ತಿ ಕೋಮು ಗಲಭೆ ನಡೆಸಲಾಗುತ್ತಿದೆ. ಜಾತಿ,ಜನಾಂಗ.ಭಾಷೆಯ ಎಲ್ಲ ಕಟ್ಟು ಪಾಡುಗಳನ್ನು ಮೀರಿ ಮನುಷ್ಯತ್ವದೆಡೆಗೆ, ಸೌಹರ್ಧತೆಯೆಡೆಗೆ,ಸಾಮರಸ್ಯದೆಡೆಗೆ ಸಾಗಿದ ಸೂಫಿ ಸಂತರ ವಿಚಾರಗಳ ಪ್ರಚಾರವಾಗಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದರು.

ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವಾಗೀಶ ಪಾಟೀಲ-ಕ್ರಾಂತಿ, ಬಸಪ್ಪ ಬಾರಕೇರ-ಆಧುನೀಕ ವಚನಗಳು, ಮಹಾಂತೇಶ ಮಲ್ಲನಗೌಡರ-ಕನ್ನಡ ಜ್ಯೋತಿ, ಮಹೇಶ ಬಳ್ಳಾರಿ-ಕಟ್ಟುತ್ತೇವೆ, ಶಿವಪ್ರಸಾದ ಹಾದಿಮನಿ-ಚುಟುಕು, ಎ.ಪಿ.ಅಂಗಡಿ-ಶಿಶುಗೀತೆ, ಜಡೆಯಪ್ಪ- ಗಲ್ಲ, ಹಂದಿಗಳು, ಎ.ಎಸ್.ಮಕಾನದಾರ - ಅಣ್ಣಪ್ಪನಿಗೊಂದು ಮನವಿ, ಸಿರಾಜ್ ಬಿಸರಳ್ಳಿ-ಕನ್ನಡತಿ, ಬಿ.ಎಸ್.ಪಾಟೀಲ್-ಮಧ್ಯಮರು, ಗೋವಿಂದರಾಜ್ ಸಿದ್ದಾಂತಿ -ದೇಶಭಕ್ತಿಗೀತೆ, ಶಾಂತಾದೇವಿ ಹಿರೇಮಠ- ರಾಜ್ಯೋತ್ಸವ ನಾಡಹಬ್ಬ,ಮಹೆಬೂಬ ಮಕಾನದಾರ- ಹನಿಗವನ, ವಿಠ್ಠಪ್ಪ ಗೋರಂಟ್ಲಿ- ಚುಟುಕುಗಳ ವಾಚನ ಮಾಡಿದರು. ಕವಿಗೋಷ್ಠಿಯ ನಂತರ ಎ.ಎಸ್.ಮಕಾನದಾರರ ಸಾಹಿತ್ಯ ಕುರಿತ ಸಂವಾದ ನಡೆಯಿತು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಎ.ಎಸ್.ಮಕಾನದಾರರ ವಿಶ್ವ ಭ್ರಾತೃತ್ವದ ಸೂಫಿ ದೂದಪೀರಾಂ ಕೃತಿಯ ಬಗ್ಗೆ ಮಾತನಾಡಿ ಸೂಪಿ ಸಂತರ ವಿಚಾರಗಳನ್ನು ತಿಳಿಸಿದರು. ಶಿವಪ್ರಸಾದ ಹಾದಿಮನಿ- ಎದೆ ಸುಡುವ ನೆನಪುಗಳು ಕವನ ಸಂಕಲನದ ಬಗ್ಗೆ, ಎ.ಪಿ.ಅಂಗಡಿ-ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ ಕುರಿತು ಮಾತನಾಡಿದರು., ಜಡೆಯಪ್ಪ ನಾವೇ ಅಲ್ಲವೇ ಕವನವನ್ನು ಉಲ್ಲೇಖಿಸಿ ಮಾತನಾಡಿದರು. ಎ.ಎಸ್.ಮಕಾನದಾರ ಕೊಪ್ಪಳ ಜಿಲ್ಲೆಯ ಸಾಹಿತಿಗಳು ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.