Monday, November 29, 2010

ಪ್ರಾಸಬದ್ದವಾಗಿರುವ,ಸರಳ ಕವನಗಳು ಅರುಣಾ ನರೇಂದ್ರರ ವೈಶಿಷ್ಟ್ಯ



ಕೊಪ್ಪಳ :ಪ್ರಾಸಬದ್ದವಾಗಿರುವ,ಸರಳ ಕವನಗಳು ಮಕ್ಕಳನ್ನು ತಲುಪುತ್ತವೆ. ಅವರಿಗೆ ಇಷ್ಟವಾಗುವಂತೆ ಶಿಶುಕವಿತೆಗಳು, ಶಿಶುಸಾಹಿತ್ಯ ರಚನೆಯಾಗಬೇಕು. ಮಕ್ಕಳ ಕವನಗಳಲ್ಲಿ ರೂಪಕ, ಉಪಮೆಗಳ ಭಾರಬೇಕಿಲ್ಲ. ಅವರ ಮನಸ್ಥಿತಿಗೆ ತಕ್ಕಂತಹ ಕವನಗಳಿದ್ದಾಗ ಮಾತ್ರ ಮಕ್ಕಳು ಅವನ್ನು ಇಷ್ಟಪಡುತ್ತಾರೆ. ಮಕ್ಕಳ ಜೊತೆಗಿನ ಸತತ ಒಡನಾಟ, ಅವರ ಆಸಕ್ತಿಗಳನ್ನು, ಬೇಕು ಬೇಡಗಳನ್ನು ಗಮನಿಸುತ್ತಿರಬೇಕು. ಆಗ ಶಿಶು ಕವಿತೆಗಳನ್ನು ರಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಶಿಶು ಸಾಹಿತಿಗಳು ಒಳ್ಳೆಯ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಅರುಣಾ ನರೇಂದ್ರರ ಕವನಗಳು ಮಕ್ಕಳನ್ನು ತಟ್ಟನೆ ಸೆಳೆಯುವಂತಿವೆ. ಮಕ್ಕಳ ಸಾಹಿತ್ಯ ಕೃಷಿಯಲ್ಲಿ ಹೆಸರು ಮಾಡಿರುವ ಕವಿಯತ್ರಿ ಅವರು ಎಂದು ಕವಿಸಮಯದ ಸಂವಾದದಲ್ಲಿ ಭಾಗವಹಿಸಿದ ಕವಿಗಳು ಹೇಳಿದರು.
ಮಕ್ಕಳ ಮನಸ್ಸು ಶುಭ್ರ ಹಾಳೆಯ ರೀತಿ. ಹೀಗಾಗಿ ಮಕ್ಕಳ ಸಾಹಿತ್ಯದಲ್ಲಿ ನೈತಿಕತೆ ಮುಖ್ಯ ಅಂಶವಾಗಿರಬೇಕು ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಕ್ಕಳ ಕವಿಯತ್ರಿ ಅರುಣಾ ನರೇಂದ್ರ ತಮ್ಮ ಆಯ್ದ ಕವನಗಳನ್ನು ವಾಚನ ಮಾಡಿದರು. ಸೆರಗಲ್ಲಿ ಬಚ್ಚಿಡುವೆ,ಮೊಬೈಲ್, ಮೌನದ ಹಕ್ಕಿ, ಹೋಗಬೇಡ ಅಮ್ಮ,ಮುದ್ದಿನ ಗಿಣಿ,ಹಕ್ಕು, ದೇವರ ಪಾತ್ರ, ನಾಯಿ ಮರಿ, ಅಮ್ಮನ ಸೆರಗು ಕವನಗಳ ವಾಚನ ಮಾಡಿದರು. ನಂತರ ಆ ಕವನಗಳ ಕುರಿತು ಚರ್ಚೆ ಮತ್ತು ಸಂವಾದ ನಡೆಯಿತು. ಸಂವಾದದಲ್ಲಿ ಡಾ.ವಿ.ಬಿ.ರಡ್ಡೇರ್, ಡಾ.ಮಹಾಂತೇಶ ಮಲ್ಲನಗೌಡರ, ಈಶ್ವರ ಹತ್ತಿ, ಶಿವಪ್ರಸಾದ ಹಾದಿಮನಿ,ಎನ್.ಜಡೆಯಪ್ಪ ,ಎ.ಪಿ.ಅಂಗಡಿ, ಪುಷ್ಪಲತಾ ಏಳುಬಾವಿ, ಜಿ.ಎಸ್.ಗೋನಾಳ, ಬಡಿಗೇರ ಇನ್ನಿತರರು ಭಾಗವಹಿಸಿದ್ದರು. ಅರುಣಾ ನರೇಂದ್ರರ ಪರಿಚಯ ಸಾಧನೆ ಕುರಿತು ಶಿವಪ್ರಸಾದ ಹಾದಿಮನಿ ಮಾತನಾಡಿದರು. ಎನ್.ಜಡೆಯಪ್ಪ ಸ್ವಾಗತಿಸಿದರು. ಬಸಪ್ಪ ಬಾರಕೇರ, ವೀರಣ್ಣ ಹುರಕಡ್ಲಿ, ರಾಕೇಶ್, ಬಸವರಾಜ ಶೀಲವಂತರ, ಮಲ್ಲಿಕಾರ್ಜುನ ಪಾಟೀಲ್,ಶಿವಾನಂದ ಹೊದ್ಲೂರ ಸೇರಿದಂತೆ ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment