Monday, October 11, 2010

ಸಮಾಜ ಮುಖಿ ಕಾವ್ಯ ಸೃಷ್ಟಿಯಾಗಲಿ- ಈಶ್ವರ ಹತ್ತಿ




ಕೊಪ್ಪಳ : ಇಂದಿನ ಬದುಕು ಅಸ್ತಿರತೆ,ತಳಮಳದಿಂದ ಕೂಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕವಿ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜಮುಖಿ ಕಾವ್ಯ ರಚಿಸಬೇಕು ಎಂದು ವಿಮರ್ಶಕ,ಕವಿ ಈಶ್ವರ ಹತ್ತಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾವ್ಯ ಎನ್ನುವುದು ಜೀವನಾನುಭವವಾಗಿರಬೇಕು, ಕಿರಿದಾದ ಶಬ್ದಗಳಲ್ಲಿ ದೊಡ್ಡ ಅರ್ಥವನ್ನು ನೀಡುವಂತಾಗಬೇಕು. ಇದಕ್ಕಾಗಿ ಯುವಕವಿಗಳು ಹಿರಿಯ ಕವಿಗಳ ಕಾವ್ಯವನ್ನು ಓದಬೇಕು, ಭಾಷೆಯನ್ನು ಸರಿಯಾಗಿ ದುಡಿಸಿಕೊಳ್ಳಬೇಕು. ಮೊದಲು ಕಾವ್ಯ ಕವಿಗೆ ಆನಂದ ನೀಡಿದರೆ ಅದು ಎಲ್ಲರಿಗೂ ತಲುಪುತ್ತದೆ. ಕಾಟಾಚಾರಕ್ಕೆ ಎಂಬಂತೆ ಬರೆದರೆ ಅದು ಕಾವ್ಯವಾಗಲಾರದು,ಕಾವ್ಯದ ಲಕ್ಷಣಗಳ ಬಗ್ಗೆ ಅರಿವಿಟ್ಟುಕೊಂಡು ಕಲಾತ್ಮಕವಾಗಿ ಬರೆದಾಗ ಕಾವ್ಯ ನಿಲ್ಲುತ್ತದೆ ಎಂದು ಹೇಳಿದರು.
ಕವಿಸಮಯದಲ್ಲಿ ಶಿವಪ್ಪ ಶೆಟ್ಟರ್-ನೀನೇ ನೀನು, ಎನ್.ಜಡೆಯಪ್ಪ-ಗಾಂಧಿ ಕನಸು,ಮಲ್ಲಿಕಾರ್ಜುನ- ಅಂಧಕಾರ, ಶಾಂತಾದೇವಿ ಹಿರೇಮಠ- ಒಲಿದರೆ ನಾರಿ ಮುನಿದರೆ ಮಾರಿ, ಎಸ್.ಎಂ.ಕಂಬಾಳಿಮಠ- ಕೇಳಿ, ಹರಿಯಲು ಬಿಡಿ, ನಾಗೇಂದ್ರ ಪ್ರಸಾದ ಕಾಮನೂರ-ಇನ್ನಾದರೂ ನೆಟ್ಟಗಾಗಿರಿ, ಶಿ.ಕಾ.ಬಡಿಗೇರ- ಒಡಲ ದನಿ, ವೀರಣ್ಣ ಹುರಕಡ್ಲಿ- ಇಂದಿನ ಆದರ್ಶ ಜೀವಿಗಳು, ಸಿರಾಜ್ ಬಿಸರಳ್ಳಿ-ಭರವಸೆ,ಸುಮತಿ-ಮುಖ ಮುಖವಾಡಗಳು, ಪುಷ್ಪಲತಾ ಏಳುಬಾವಿ- ಮರಳು, ಗಜಲ್, ರಮೇಶ ಬನ್ನಿಕೊಪ್ಪ- ಈ ಸ್ವಾಮಿಯರೇ ಹೀಗೆ, ಈಶ್ವರ ಹತ್ತಿ- ತ್ರಿಪದಿಗಳು, ಬಸವರಾಜ್ ಸೂಳಿಬಾವಿ- ಹಾಯ್ಕುಗಳು, ಅರೀಪ್ ರಾಜಾರ ಕವನಗಳನ್ನು ವಾಚನ ಮಾಡಿದರು.
ತಿಪ್ಪೆಸ್ವಾಮಿ ಬೋದಾ,ಹಿರಿಯ ಪತ್ರಕರ್ತರಾದ ಬಸವರಾಜ ಶೀಲವಂತರ, ಬಸವರಾಜ ಸೂಳಿಬಾವಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ಸ್ವಾಗತಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment