Thursday, August 26, 2010

ಚುಟುಕು,ಕವನಗಳಿಗೆ ಹೆಚ್ಚಿನ ಆಯಾಮಗಳಿರಬೇಕು




ಕೊಪ್ಪಳ : ಚುಟುಕು, ಕವನಗಳಲ್ಲಿ ಪ್ರಾಸವು ಸಹಜವಾಗಿ ಬರುವಂತಿರಬೇಕು. ಹಾಗಾದಾಗ ಅವುಗಳ ಮಹತ್ವ ಹೆಚ್ಚಾಗುತ್ತದೆ. ಪ್ರಾಸಕ್ಕೆ ಗಂಟು ಬಿದ್ದು ಕವನ ರಚಿಸುವುದು ಸಲ್ಲದು ಇದರಿಂದಾಗಿ ಕವನ ತನ್ನ ಇತರೆ ಆಯಾಮಗಳನ್ನು ಕಳೆದುಕೊಳ್ಳುತ್ತದೆ ಎಂದು ಹಿರಿಯ ವಿಮರ್ಶಕ ಎ.ಎಂ.ಮದರಿ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ೧೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಶಿವಪ್ರಸಾದ ಹಾದಿಮನಿಯವರ ಸಿಂಚನ ಚುಟುಕು ಕವನಸಂಕಲನದ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್‍ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಲೋಹಿಯಾವಾದಿ ವಿರುಪಾಕ್ಷಪ್ಪ ಅಬ್ಬಿಗೇರಿಯವರಿಗೆ ಗೌರವಸೂಚಕವಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು. ನಂತರ ಮೃತರ ಬಗ್ಗೆ ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟ್ಟದೂರ ಮತ್ತು ಎ.ಎಂ.ಮದರಿಯವರು ಮಾತನಾಡಿದರು. ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಅಬ್ಬಿಗೇರಿಯವರು ಸಾರ್ಥಕ ಬದುಕು ನಡೆಸಿದವರು , ಅವರ ರಾಜಕೀಯ ಆದರ್ಶಗಳು ಉದಾತ್ತವಾಗಿದ್ದವು ಎಂದು ಹೇಳಿದರು.
ಇದಕ್ಕೂ ಮೊದಲು ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ೧೫ ಕವಿಗಳು ಕವನ ವಾಚನ ಮಾಡಿದರು. ಜಿ.ಎಸ್.ಬಾರಕೇರ- ನಮ್ಮೂರಿನ ಮಂದಿರ, ಲಕ್ಷ್ಮೀ- ಬೆಳದಿಂಗಳಾಗಿ ಬಾ, ಪುಷ್ಪಲತಾ ಏಳುಬಾವಿ - ನಕ್ಷತ್ರ, ಎಂ.ಡಿ.ಹುಸೇನ-ತಂದೆಯ ಕೊರಗು, ವಿಠ್ಠಪ್ಪ ಗೋರಂಟ್ಲಿ- ಅಗಲಿದ ಅಬ್ಬಿಗೇರಿ ನೆನದು, ಮಹೇಶ ಬಳ್ಳಾರಿ- ಮತ್ತೊಂದು ಕಗ್ಗತ್ತಲು, ಸಿರಾಜ್ ಬಿಸರಳ್ಳಿ- ಹಸಿವು, ಹನುಮಪ್ಪ ಬಾರಕೇರ-ಜಲಧಾರೆ, ಎ.ಪಿ.ಅಂಗಡಿ- ವಾಚಿನ ಮಗ್ಗಿ, ವೀರಣ್ಣ ಹುರಕಡ್ಲಿ- ಆರ್ತನಾದ, ಶಿವಪ್ರಸಾದ ಹಾದಿಮನಿ- ಕಟ್ಟೊಣ, ಬಸವರಾಜ ಸಂಕನಗೌಡರ- ಬದನೆಕಾಯಿ ಪುರಾಣ, ಪ್ರಭು- ಕರೆಂಟ್,ಅರುಣಕುಮಾರ-ವಾರೆಂಟ್, ಶಿ.ಕಾ.ಬಡಿಗೇರ- ಕ್ಷಮಯಾಧರಿತ್ರಿ ಕವನಗಳನ್ನು ವಾಚನ ಮಾಡಿದರು.
ಕವನಗಳನ್ನು ಅಲ್ಲಮಪ್ರಭು ಬೆಟ್ಟದೂರರು ವಿಮರ್ಶೆ ಮಾಡಿದರು. ನಂತರ ಸಂವಾದ ಕಾರ್‍ಯಕ್ರಮ ನಡೆಯಿತು. ಸಂವಾದದಲ್ಲಿ ಒಮ್ಮಿದ ಅಭಿಪ್ರಾಯಗಳ ಬಗ್ಗೆ ಮಾತನಾಡಿದ ಶಿವಪ್ರಸಾದ ಹಾದಿಮನಿ ಎಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಸಲಹೆ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಕವಿಸಮಯದಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ನಿರ್ಧರಿಸಲಾಯಿತು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment