Tuesday, January 25, 2011

ನಮ್ಮ ಜನಜೀವನದ ನೈಜ ಚಿತ್ರಣ ನೀಡುವ ಭೋಜರಾಜರ ಕಥೆಗಳು


ಕೊಪ್ಪಳ : ಕಥೆಗಾರ,ಕವಿ,ಲೇಖಕರಾಗಿ ಹೆಸರು ಮಾಡಿರುವ ಭೋಜರಾಜ ಸೊಪ್ಪಿಮಠರ ಕಥೆಗಳು ನಮ್ಮ ಜನಜೀವನಕ್ಕೆ ಹತ್ತಿರವಾಗಿರುವಂತಹವು. ನೆಲದ ಗುಣ ಅವರ ಕತೆಗಳಲ್ಲಿವೆ. ಪಾತ್ರಗಳ ಪೋಷಣೆ,ವಿಶ್ಲೇಷಣೆ ಹಾಗೂ ಭಾಷೆಯ ಬಳಕೆ ಅತ್ಯುತ್ತಮವಾಗಿದೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹದ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭೋಜರಾಜ ಕಥೆಗಳ ಕುರಿತು ಮಾತನಾಡಿದರು. ಇದುವರೆಗೆ ೩೦ಕ್ಕೂ ಹೆಚ್ಚು ಕಥೆಗಳನ್ನು ಪ್ರಕಟಿಸಿರುವ , ಹತ್ತಾರು ಲೇಖನ,ಕವನಗಳನ್ನು ಪ್ರಕಟಿಸಿರುವ ಭೋಜರಾಜ ಸೊಪ್ಪಿಮಠರ ಕಥೆಗಳಲ್ಲಿ ನಮ್ಮ ಜನರ ಭವಣೆಗಳನ್ನು, ತಮ್ಮ ಸುತ್ತಮುತ್ತಲ ಜನಜೀವನದ ಬಗೆಗಿನ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು.
ಇದಕ್ಕೂ ಮೊದಲು ಸಿರಾಜ್ ಬಿಸರಳ್ಳಿ- ಲಹರಿ, ವಿರಣ್ಣ ಹುರಕಡ್ಲಿ-ಆಶಯ,ಡಾ.ಮಹಾಂತೇಶ ಮಲ್ಲನಗೌಡರ- ಹಂಪಿ,ಶಿವಪ್ರಸಾದ ಹಾದಿಮನಿ-ಗವಿಮಠ, ವಾಗೀಶ ಪಾಟೀಲ್- ನಿರೀಕ್ಷೆ,ವಿಠ್ಠಪ್ಪ ಗೋರಂಟ್ಲಿ- ಹುಟ್ಟಲಾರದ ಕವಿತೆ ಕವನಗಳನ್ನು ವಾಚನ ಮಾಡಿದರು. ನಂತರ ಕತೆಗಾರ ಭೋಜರಾಜ ಸೊಪ್ಪಿಮಠ ತಮ್ಮ "ವರ್ಷ ಗರ್ಭ" ಕಥೆಯನ್ನು ವಾಚನ ಮಾಡಿದರು. ಅತ್ಯುತ್ತಮ ಎನ್ನಬಹುದಾದ ರೀತಿಯಲ್ಲಿ ಧ್ವನಿಯ ಏರಿಳಿತಗಳೊಂದಿಗೆ ಕಥಾ ವಾಚನ ಮಾಡಿದ ರೀತಿ ಗಮನ ಸೆಳೆಯುವಂತಿತ್ತು. ನಂತರ ತಮಗೆ ಕಥೆ ಬರೆಯಲು ಪ್ರೇರಣೆ ಸಿಕ್ಕ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಮತ್ತು ವಾಚನ ಮಾಡುವ ರೀತಿ ಕಲಿಸಿಕೊಟ್ಟ ಶಾಸ್ತ್ರಿಗಳ ಬಗ್ಗೆ ಸೊಪ್ಪಿಮಠ ಮಾತನಾಡಿದರು.
ಕಾರ್‍ಯಕ್ರಮದಲ್ಲಿ ಸಣ್ಣಪ್ಪ ಭಾವಿಹುಡೇದ,ಹನುಮಂತಪ್ಪ ಅಂಡಗಿ, ಯಶವಂತ್ ಮತ್ತಿತರರು ಭಾಗವಹಿಸಿದ್ದರು. ವಂದನಾರ್ಪಣೆಯನ್ನು ಶಿವಪ್ರಸಾದ ಹಾದಿಮನಿ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Saturday, January 22, 2011

ಕವಿಸಮಯ ೩೯: ಅತಿಥಿಯಾಗಿ ಭೋಜರಾಜ ಸೊಪ್ಪಿಮಠ

ಈ ವಾರದ ಕವಿಸಮಯದ ಅತಿಥಿಯಾಗಿ ಭೋಜರಾಜ ಸೊಪ್ಪಿಮಠ ಆಗಮಿಸಲಿದ್ದಾರೆ. ಈ ವಾರ ಎನ್ ಜಿ ಓಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.

Wednesday, January 19, 2011

ಕನ್ನಡನೆಟ್.ಕಾಂ ಕವಿಸಮೂಹದ ಕೆಲಸ ಪ್ರಶಂಸನೀಯ-ಶೇಖರಗೌಡ ಮಾಲಿಪಾಟೀಲ





ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಈ ವೇದಿಕೆಯು ಎಲ್ಲರಿಗೂ ಮಾದರಿಯಾಗಿದೆ. ಕವಿಸಮಯ ಕೆಲಸ ಪ್ರಶಂಸನೀಯ, ಯಾವುದೇ ಆಡಂಭರವಿಲ್ಲದೇ ಸರಳವಾಗಿ ಎಲ್ಲರೂ ಕಲೆತು ಸಾಹಿತ್ಯಿಕ ಚರ್ಚೆ ನಡೆಸುವುದು, ಕವಿಗೋಷ್ಠಿ,ಕಥಾವಾಚನ ಹಮ್ಮಿಕೊಳ್ಳುತ್ತಿರುವುದರ ಕುರಿತು ಬೇರೆ ಜಿಲ್ಲೆಗಳವರು ಸಹ ಕವಿಸಮಯದ ಬಗ್ಗೆ ಪ್ರಶಂಸೆಯ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು. ಅವರು ಭಾಗ್ಯನಗರದ ಯೋಗಾಶ್ರಮದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೮ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಕಾವ್ಯ ಕಮ್ಮಟ ಹಮ್ಮಿಕೊಂಡು ಯುವ ಕವಿಗಳಿಗೆ, ಕವಿಯತ್ರಿಯರಿಗೆ ಹೆಚ್ಚಿನ ಮಾರ್ಗದರ್ಶನ ನೀಡಲಾಗುವುದು. ಇಂತಹ ಸಾಹಿತ್ಯಿಕ ಚಟುವಟಿಕೆಗಳಿಗೆ ಕಸಾಪ ಯಾವತ್ತೂ ಬೆಂಬಲಿಸುತ್ತದೆ ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ-ಕಾಯಿಲೆ, ಎನ್.ಜಡೆಯಪ್ಪ- ಒಳ ಬರಬೇಡ, ಸರೋಜಾ ಬಾಕಳೆ- ಹಿಂಗ್ಯಾಕೈತಿ, ಡಾ.ಮಹಾಂತೇಶ ಮಲ್ಲನಗೌಡರ-ನಶ್ವರ ನಿಲಯ, ಜಿ.ಎಸ್.ಗೋನಾಳ-ನೆಲೆ,ಬೆಲೆ, ವಿಠ್ಠಪ್ಪ ಗೋರಂಟ್ಲಿ-ಇಂಥವನ್ನೊಬ್ಬ, ನನ್ನವ್ವ, ವೀರಣ್ಣ ಹುರಕಡ್ಲಿ- ಜವರಾಯನ ಅಟ್ಟಹಾಸ,ಹೆಚ.ಎಸ್.ವಾಲ್ಮೀಕಿ- ಬರಲಿರುವ ವರ್ಷಗಳು,ಪ್ರಮೋದ ತುರ್ವಿಹಾಳ- ಮಗು, ಡಾ.ವಿ.ಬಿ.ರಡ್ಡೇರ-ಇವಳು ಪ್ರತಿಭಾ, ಸುಮತಿ ಹಿರೇಮಠ- ಭಾಬ ಬಿಂಬ,ಸಿರಾಜ್ ಬಿಸರಳ್ಳಿ - ಬಿಕ್ಕಳಿಕೆ, ನಟರಾಜ್ ಸವಡಿ-ಬಾಲ್ಯ ಕವನಗಳನ್ನು ವಾಚನ ಮಾಡಿದರು. ನಂತರ ಕಾವ್ಯದ ಕುರಿತು ಚರ್ಚೆ ನಡೆಯಿತು. ಸಿರಾಜ್ ಬಿಸರಳ್ಳಿ ಮಾತನಾಡಿ ಕವಿಸಮೂಹ ತನ್ನ ಮಿತಿಯಲ್ಲಿ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಸಾಪದಂತಹ ಅಧಿಕೃತ ಸಂಸ್ಥೆಗಳು ಸಾಹಿತ್ಯಿಕ ಚರ್ಚೆಗಳನ್ನು, ಕಥೆ,ಕಾವ್ಯಗಳ ಬಗ್ಗೆ ಕಮ್ಮಟಗಳನ್ನು ಹಮ್ಮಿಕೊಳ್ಳಲಿ ಯುವ ಸಾಹಿತಿಗಳಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.
ಕಾರ್‍ಯಕ್ರಮದಲ್ಲಿ ಮಹೇಶ ಬಳ್ಳಾರಿ, ಹನುಮಂತಪ್ಪ ಅಂಡಗಿ, ಶ್ರೀನಿವಾಸ ಚಿತ್ರಗಾರ,ಎಚ್.ಎಸ್.ಉಮರಿ, ಎಂ.ಎಚ್.ವಾಲ್ಮಿಕಿ, ಅನಸೂಯಮ್ಮ ವಾಲ್ಮಿಕಿ, ಕೆ.ಎಂ.ಹುನಗುಂದ , ಮುನೀರ್ ಸಿದ್ದಿಕಿ ಹಾಗೂ ಯೋಗಾಶ್ರಮದ ಸದಸ್ಯರು ಸೇರಿದಂತೆ ಇತರರು ಉಪಸ್ಥಿರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, January 10, 2011

ಹಿಂದಿನ ನಾಟಕಕಾರರ ಸಾಹಿತ್ಯ ಎಂದೆಂದಿಗೂ ಸ್ಮರಣೀಯ: ವೀರಣ್ಣ ಹುರಕಡ್ಲಿ



ಕೊಪ್ಪಳ : ಹಳೆಯ ನಾಟಕಗಳಲ್ಲಿ ಬರುತ್ತಿದ್ದ ಸಾಹಿತ್ಯ ಎಂದೆಂದಿಗೂ ಸ್ಮರಣೀಯವಾದದ್ದು. ಆ ನಾಟಕಗಳನ್ನು ಈಗಲೂ ಜನ ಮೆಲುಕು ಹಾಕುವಂತಹ ಪರಿಸ್ಥಿತಿ ಇದೆ ಎಂದು ಕವಿ ವೀರಣ್ಣ ಹುರಕಡ್ಲಿ ಹೇಳಿದರು. ಅವರು ನಗರದ ಎನ್‌ಜಿಓ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಾಚನ ಮಾಡಿದ ಕವನಗಳ ಕುರಿತು ಮಾತನಾಡಿ ಅವರು ತಮ್ಮ ನಾಟಕದ ದಿನಗಳನ್ನು ನೆನಪಿಸಿ ಕಂದಗಲ್ ಹನುಮಂತರಾಯ, ಪಿ.ಬಿದುತ್ತರಗಿ, ಹೆಚ್.ಎನ್.ಹೂಗಾರ್ ರನ್ನು ನೆನಪಿಸಿಕೊಂಡು ಅವರ ನಾಟಕಗಳ ಕುರಿತು ಮಾತನಾಡಿದರು. ನಾಟಕದ ಅನುಭವಗಳನ್ನು ಮೆಲಕು ಹಾಕಿದ ಅವರು ತಮ್ಮ ಸಾಹಿತ್ಯಕ್ಕೆ ಪ್ರೇರಣೆ ನೀಡಿದವರನ್ನು ಸ್ಮರಿಸಿದರು.
ಕವಿಸಮಯದಲ್ಲಿ ಮುಕ್ತ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಕವಿಗೋಷ್ಠಿಯಲ್ಲಿ ಎಸ್.ಎಂ.ಕಂಬಾಳಿಮಠ-೨ಜಿ ಸ್ಪೆಕ್ಟ್ರಂ, ರಮೇಶ ಬನ್ನಿಕೊಪ್ಪ- ಭಾನುಮತಿಯ ನಿಟ್ಟುಸಿರು, ತಿಪ್ಪೆಸ್ವಾಮಿ ಬೋದಾ- ೨೦೧೦, ಶಾಂತಪ್ಪ ಬಡಿಗೇರ- ಭಾರತಾಂಭೆ, ಎ.ಪಿ.ಅಂಗಡಿ-ನದಿಗಳಮ್ಮ ನದಿಗಳು, ವೀರಣ್ಣ ಹುರಕಡ್ಲಿ- ಭೂಪತಿಯ ಭೂಪರು , ಪುಷ್ಪಲತಾ ಏಳುಭಾವಿ-ರೈತ, ಸುಮತಿ ಹಿರೇಮಠ- ನಿನ್ನ ಪ್ರೀತಿ, ಶಿವಪ್ರಸಾದ ಹಾದಿಮನಿ- ಬುದ್ದಿಜೀವಿಗಳೇ ಇವರು, ವಾಗೀಶ ಪಾಟೀಲ- ಪ್ರೀತಿಯ ಜಲ, ಸಿರಾಜ್ ಬಿಸರಳ್ಳಿ- ಜ್ವಾಲಾಮುಖಿ ಕಣ್ಣೀರು, ಮಲ್ಲಿಕಾರ್ಜುನ ಹೆಚ್.ಯಲಬುರ್‍ಗಾ- ನನ್ನ ಪ್ರೀತಿ, ಮೆಹಮೂದ ಮಿಯಾ- ಆಳ ಆತ್ಮ, ಅಲ್ಲಮಪ್ರಭು ಬೆಟ್ಟದೂರ- ದೆಹಲಿ ಒಂದಷ್ಟು ನೋಡು ಕವನಗಳನ್ನು ವಾಚನ ಮಾಡಿದರು.
ಇತ್ತೀಚೆಗೆ ತಮ್ಮ ಒಡಲದನಿ ಕವನಸಂಕಲನ ಬಿಡುಗಡೆಗೊಳಿಸಿದ ವೀರಣ್ಣ ಹುರಕಡ್ಲಿಯವರಿಗೆ ಕವಿಸಮೂಹವು ಅಭಿನಂದನೆಗಳನ್ನು ಸಲ್ಲಿಸಿ ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
ಶಿವಪ್ರಸಾದ ಹಾದಿಮನಿ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, January 3, 2011

ಸ್ವವಿಮರ್ಶೆಯಿಂದ ಕವಿ ಬೆಳೆಯುತ್ತಾನೆ - ಸೂರ್ಯಕಾಂತ ಗುಣಕಿಮಠ





ಕೊಪ್ಪಳ : ಉತ್ತಮ ಬರವಣಿಗೆಯ ತುಡಿತದಿಂದ ಕಾವ್ಯ ಸರ್ವಕಾಲಕ್ಕೂ ನಿಲ್ಲುತ್ತದೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುತ್ತಾ ಸಾಗಿದಾಗ ಉತ್ತಮ ಕಾವ್ಯ ರಚನೆ ಸಾಧ್ಯ ಎಂದು ಹಿರಿಯ ಕವಿ ಸೂರ್‍ಯಕಾಂತ ಗುಣಕಿಮಠ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೬ನೇ ಕವಿಸಮಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ಕವಿತೆಗಳನ್ನು ನಾವೇ ಮೆಲುಕು ಹಾಕಬೇಕು ಹಾಗಾದಾಗ ಉತ್ತಮ ರಚನೆ ಸಾಧ್ಯವಿದೆ.ಉತ್ತಮ ಬರಹಗಳ ಪುಸ್ತಕಕ್ಕೆ ಹಿಂಬದಿ ಪುಟದ ಅವಶ್ಯಕತೆ ಇಲ್ಲ.
ತಮ್ಮ ಅನುವಾದಿತ ರುಬಾಯಿಗಳನ್ನು, ಕವನಗಳನ್ನು ವಾಚನ ಮಾಡಿದ ಗುಣಕಿಮಠರು, ಕವಿಸಮಯದಲ್ಲಿ ವಾಚನ ಮಾಡಲಾದ ಕತೆಗಳ ಕುರಿತು , ಕವನಗಳ ಕುರಿತು ಮಾತನಾಡಿದರು. ಕೊಪ್ಪಳದಲ್ಲಿ ತಾವು ಕಳೆದ ದಿನಗಳನ್ನು ನೆನಪು ಮಾಡಿಕೊಂಡು ಕನ್ನಡನೆಟ್.ಕಾಂ ಕವಿಸಮೂಹದ ಪ್ರಯತ್ನವನ್ನು ಶ್ಲಾಘಿಸಿದ ಅವರು ಈ ಕೆಲಸ ನಿರಂತರವಾಗಿರಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರ ಕಥಾವಾಚನ ಹಮ್ಮಿಕೊಳ್ಳಲಾಗಿತ್ತು. ವಿಠ್ಠಪ್ಪ ಗೋರಂಟ್ಲಿಯವರ "ಸಾವು" ಕತೆಯನ್ನು ಎನ್.ಜಡೆಯಪ್ಪ ವಾಚನ ಮಾಡಿದರು. ನಂತರ ಸಿರಾಜ್ ಬಿಸರಳ್ಳಿ " ಗರಿಕೆ ಮೇಲಿನ ಮಂಜು ಹನಿ" ಕತೆಯನ್ನು ವಾಚನ ಮಾಡಿದರು.
ನಂತರ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿಯಲ್ಲಿ ನಟರಾಜ ಸವಡಿ- ಆಹ್ವಾನ, ಗಾಯಿತ್ರಿ ಭಾವಿಕಟ್ಟಿ- ಬಿಸ್ಲೇರಿ ಬಾಟಲುಗಳು, ಮಲ್ಲಿಕಾರ್ಜುನ ಹೆಚ್. ಯಲಬುರ್ಗಾ-ಬಾಟಲಿ ಚುಟುಕು, ವಾಗೀಶ ಪಾಟೀಲ- ಶೀರ್ಷಿಕೆಯಿಲ್ಲದ ಕವಿತೆ, ಶಿವಪ್ರಸಾದ ಹಾದಿಮನಿ- ಬಸವಣ್ಣ, ಜಡೆಯಪ್ಪ- ಮುತ್ತು, ಚುಟುಕು, ಅಲ್ಲಮಪ್ರಭು ಬೆಟ್ಟದೂರ- ವಿಜಯನಗರ ವೈಭವ ಸೃಷ್ಟಿಸುತ್ತಿರುವವರಿಗೆ, ಮಹೇಶ ಬಳ್ಳಾರಿ- ಬಿಂಬ, ಎಸ್.ಎಂ.ಕಂಬಾಳಿಮಠ- ವಂದನೆ ಅಭಿನಂದನೆ, ಪುಷ್ಪಲತಾ ಏಳುಬಾವಿ- ಬಡತನದ ರಾಗ, ಜಿ.ಎಸ್.ಬಾರಕೇರ- ಮೌನ ಮಡಿಲಿನ ಇಟಗಿ, ಜಯಸುತೆ- ನನ್ನಾಕೆ ಮುನಿದಾಗ, ಡಾ.ರೇಣುಕಾ ಕರಿಗಾರ-ಕಂಪು ಬೀರದ ಹೂ,ಡಾ.ವಿ.ಬಿ.ರಡ್ಡೇರ- ಒರತೆಗಳು, ಚುನಾವಣೆ ಕವನಗಳನ್ನು ವಾಚನ ಮಾಡಿದರು.
ಸೂರ್ಯಕಾಂತ ಗುಣಕಿಮಠರ ಕುರಿತು ಪ್ರೋ.ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ಹಳೆಯ ದಿನಗಳನ್ನು ನೆನಪಿಸಿಕೊಂಡು ಕನ್ನಡದಲ್ಲಿ ವಿಜ್ಞಾನದ ಮರುಸೃಷ್ಟಿ ಕಾರ್‍ಯ ಸೂರ್ಯಕಾಂತ ಗುಣಕಿಮಠರಿಂದ ನಡೆಯಲಿ ಎಂದರು.
ಕಾರ್‍ಯಕ್ರಮದಲ್ಲಿ ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಪ್ರಿಯಾಂಕ ಪತ್ರಿಕೆಯ ಟಿ.ಟಿ.ಕಸ್ತೂರಿ, ಬಸವರಾಜ ಶೀಲವಂತರ,ಎಸ್.ಎಲ್.ಪಾಟೀಲ್, ಸುದೀಂದ್ರ, ವೀರಣ್ಣ ಹುರಕಡ್ಲಿ, ಶಿವಾನಂದ ಹೊದ್ಲೂರ ಮುಂತಾದವರು ಭಾಗವಹಿಸಿದ್ದರು. ಮಹಾಂತೇಶ ಮಲ್ಲನಗೌಡರ ಸ್ವಾಗತ ಕೋರಿದರು. ಎಸ್.ಎಂ.ಕಂಬಾಳಿಮಠ - ವಂದನಾರ್ಪಣೆ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.