Monday, September 27, 2010

ಕವಿತೆಯಲ್ಲಿ ಬರೀ ವರ್ಣನೆ ಅಲ್ಲ ಧ್ವನಿಯೂ ಇರಬೇಕು- ಎಚ್.ಎಸ್.ಪಾಟೀಲ್



ಕಾವ್ಯ ಎಲ್ಲಕಾಲದಲ್ಲೂ ತನ್ನ ಉಷ್ಣತೆಯನ್ನು ಕಾಪಾಡಿಕೊಂಡು ಬಂದಾಗ ಸಾರ್ವಕಾಲಿಕವಾಗುತ್ತದೆ. ಕವಿತೆ ಎನ್ನುವುದು ಬರಿಯ ವರ್ಣನೆ ಅಲ್ಲ ಅದರಲ್ಲಿ ಧ್ವನಿ ಇರುತ್ತದೆ. ಅರ್ಥಪೂರ್ಣ ಸಾಲುಗಳನ್ನು ಕವನದಲ್ಲಿ ಬಳಸಬೇಕು.ಪದಗಳಿಗೆ, ಶಬ್ದಗಳಿಗೆ ಕಾವ್ಯಾತ್ಮಕ ಸ್ಪರ್ಶ ಇರಬೇಕು ಎಂದು ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೨ನೇ ಕವಿಸಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಕಾವ್ಯ ಯಾವ ಸ್ತರದಲ್ಲಿ ಎನ್ನುವದನ್ನು ಗಮನಿಸಬೇಕು, ವಿವಿಧ ಕವಿಗಳ ಕವನಗಳನ್ನು, ವಿವಿಧ ಸಾಪ್ತಾಹಿಕ,ವಾರಪತ್ರಿಕೆಗಳನ್ನು ಓದಬೇಕು ಎಂದರು. ನಾವು ರಚಿಸಿದ ಕವನಗಳು ಪ್ರಸ್ತುತ ಸಂದರ್ಭದ ಕವನಗಳ ಜೊತೆ ಸ್ಪರ್ಧಿಸಬೇಕು, ನಿಲ್ಲುವಂತಾಗಬೇಕು. ಇದಕ್ಕಾಗಿ ಸತತ ಅಧ್ಯಯನದಲ್ಲಿ ತೊಡಗಬೇಕು. ಹೊಸ ಪ್ರಯೋಗಗಳಿಗೆ ಒಳಗಾಗಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವನವಾಚನದಲ್ಲಿ ೨೦ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅಲಿ ನವಾಜ್ -ನಾಡಿನ ಸಂಸ್ಕೃತಿ, ವಾಗೀಶ ಪಾಟೀಲ್- ನನ್ನೂರು, ಶಾಂತಾದೇವಿ ಹಿರೇಮಠ- ತಿರುವು, ಲಕ್ಷ್ಮೀ- ಕತ್ತಲು, ಶಾಂತು ಬಡಿಗೇರ-ದೃವತಾರೆ,ಶಿವಪ್ರಸಾದ ಹಾದಿಮನಿ-ಕಟ್ಟೋಣ, ಹಾಲಪ್ಪ, ವಾಲ್ಮಿಕಿ ಎಕರನಾಳ- ಪುಣ್ಯಕೋಟಿ ಗುರುರಾಜ, ಡಾ.ಮಹಾಂತೇಶ ಮಲ್ಲನಗೌಡರ- ಹಾರಾಡಿ ಶಾಂತಿ ದೂತರೆ, ಎಸ್. ಕಂಬಾಳಿಮಠ- ಯೋಗಿ ಪುಂಗವ ಮರಿಶಾಂತವೀರ,ಡಾ.ವಿ.ಬಿ.ರಡ್ಡೇರ್-ಅಂದು ಗದುಗಿನಲಿ, ಶಿ.ಕಾ.ಬಡಿಗೇರ- ಹಾಯ್ಕುಗಳು, ಎನ್.ಜಡೆಯಪ್ಪ- ಗುರು ಪುಟ್ಟರಾಜ, ವಾಸುದೇವ ಕುಲಕರ್ಣಿ- ಜ್ಞಾನಜ್ಯೋತಿ, ವೀರಣ್ಣ ವಾಲಿ-ಕಪ್ಪು ಗೆಳೆಯನ ಕುರಿತು, ಸಿರಾಜ್ ಬಿಸರಳ್ಳಿ- ಕ್ರಾಂತಿ ಸೂರ್‍ಯನ ಕಂದೀಲು, ಪುಷ್ಪಾ ಏಳುಬಾವಿ-ಯಾರು ನೀನು? , ಮೌನೇಶ- ಮಿನುಗು, ನಾಗರಾಜ್ ಬೆಣಕಲ್- ಸ್ನೇಹ ಕವನಗಳನ್ನು ವಾಚನಮಾಡಿದರು.
ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಹುಸೇನಪಾಷಾ, ಕರಿಸಿದ್ದನಗೌಡ, ಮಲ್ಲಿಕಾರ್ಜುನ, ಹನುಮಂತಪ್ಪ ಅಂಡಗಿ, ಈಶ್ವರ ಹತ್ತಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Wednesday, September 22, 2010

ಭಾವೋಪಯೋಗಿ ಭಾಷೆಯಲ್ಲಿ ಕವನಗಳು ಬರಬೇಕು - ಮುನಿಯಪ್ಪ ಹುಬ್ಬಳ್ಳಿ




ಕೊಪ್ಪಳ : ಕವಿತೆ ಬುದ್ದಿ , ಭಾವ, ಭಾಷೆಯಲ್ಲಿ ಮಿಂದು ಬರಬೇಕು, ಆಗ ಕವನಗಳಿಗೆ ಮೆರಗು ಬರುತ್ತದೆ. ಸಶಕ್ತ ಶಬ್ದಗಳನ್ನು ಉಪಯೋಗಿಸಿಕೊಂಡು ಕಾವ್ಯ ರಚನೆ ಮಾಡಬೇಕು. ಶಬ್ದಗಳು ನೇರವಾಗಿ ಹೃದಯಕ್ಕೆ ತಟ್ಟುವಂತಿರಬೇಕು. ಕವನ ರಚನೆಗೆ ಬೇಕಾದ ಶಬ್ದ ಸಂಪತ್ತು ಸತತ ಓದಿನಿಂದ ಬರುತ್ತದೆ. ಹೀಗಾಗಿ ಕವಿಗಳು ಅಧ್ಯಯನ ಶೀಲರಾಗಬೇಕು. ಭಾಷೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು. ಅವರ ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮನಸ್ಸು ಮುಟ್ಟುವ, ಮನಸ್ಸಿನ ಕದತಟ್ಟುವ ಭಾಷೆಯೇ ಕಾವ್ಯ . ಇದನ್ನು ಸಶಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಕಾವ್ಯ ಎಂದರೇನು, ಸಾಹಿತ್ಯ ಎಂದರೇನು ಎನ್ನುವಂತಹ ನೂರಾರು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಮಾಜವನ್ನು ತೆರೆದಿಡುವ , ಸರಿದಾಗಿ ಯಾವುದೆಂದು ತೋರುವುದು ಕಾವ್ಯದ ಕೆಲಸವಾಗಬೇಕು. ತಿದ್ದುವದು ಸಾಧ್ಯವಾಗದಿದ್ದರೂ, ಸರಿದಾರಿ ತೋರುವ ಕೆಲಸ ಸಾಹಿತ್ಯ ಮಾಡಬೇಕು ಎಂದರು.
ಕವಿಸಮಯದಲ್ಲಿ ಇತ್ತೀಚಿಗೆ ನಿಧನರಾದ ಪಂಡಿತ ಪುಟ್ಟರಾಜ ಗವಾಯಿಗಳ ಆತ್ಮಕ್ಕೆ ಶಾಂತಿಯನ್ನು ಕೋರಿ ೧ ನಿಮಿಷ ಮೌನ ಆಚರಿಸಲಾಯಿತು. ನಂತರ ಅವರ ಬಗ್ಗೆ ಮುನಿಯಪ್ಪ ಹುಬ್ಬಳ್ಳಿ, ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಶಿ.ಕಾ.ಬಡಿಗೇರ- ಹಾಯ್ಕುಗಳನ್ನು, ವೀರಣ್ಣ ಹುರಕಡ್ಲಿ- ಗದುಗಿನ ಗಂದರ್ವ, ಶಿವಪ್ರಸಾದ ಹಾದಿಮನಿ- ನಾವೆಂಥ ಜನ, ಮಹೇಶ ಬಳ್ಳಾರಿ= ಭವತಿ ಭಿಕ್ಷಾಂದೇಹಿ, ಡಾ.ಮಹಾಂತೇಶ ಮಲ್ಲನಗೌಡರ- ಗುರು ಪುಟ್ಟರಾಜ, ಪುಷ್ಪಲತಾ ಏಳುಬಾವಿ- ಹುಡುಕಾಟ, ಜಡೆಯಪ್ಪ ಎನ್.- ಬಡತನ, ಎ.ಪಿ.ಅಂಗಡಿ- ನಾವು ಸೈನಿಕರು, ಜಿ.ಎಸ್.ಬಾರಕೇರ- ಡಾ.ಪುಟ್ಟರಾಜ ಗವಾಯಿ, ಸಿರಾಜ್ ಬಿಸರಳ್ಳಿ- ಸಾಕಿಯ ಪದ್ಯ, ಲಕ್ಷ್ಮೀ- ಶಿಕ್ಷಕಿ, ಅನ್ನದ ಬೆಲೆ, ವಿಠ್ಠಪ್ಪ ಗೋರಂಟ್ಲಿ- ಪುಟ್ಟನಾದವನೇ ದೊಡ್ಡವನಾಗುವನು, ಮೆಹಮೂದಮಿಯಾ-ಚಲನಶೀಲತ್ವ, ಕೆಂಚಪ್ಪ ಹಾಲವರ್ತಿ- ಯಾರಿಗಾಗಿ, ಮುನಿಯಪ್ಪ ಹುಬ್ಬಳ್ಳಿ- ಮಹಾತ್ಯಾಗಿ ಕವನಗಳನ್ನು ವಾಚನ ಮಾಡಿದರು.
ಮುನಿಯಪ್ಪ ಹುಬ್ಬಳ್ಳಿ ಕವನಗಳ ಕುರಿತು ಮಾತನಾಡಿದರು. ನಂತರ ಮಹಾಕಾವ್ಯಗಳಲ್ಲಿನ ಬಂಡಾಯದ ಬಗ್ಗೆ ಮಾತನಾಡಿದರು. ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ನಾಗರಾಜ ಬೆಣಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿ.ಕಾ.ಬಡಿಗೇರ ಸ್ವಾಗತಿಸಿ ಮಹೇಶ ಬಳ್ಳಾರಿ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, September 13, 2010

ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ




ಕೊಪ್ಪಳ : ಕವಿತೆಯನ್ನು ಬರೆದು ನಂತರ ಇದು ಪ್ರಕಟವಾಗಲೇಬೇಕು, ಇದೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕವಿಯಾದವನು ವಿಮರ್ಶೆಗೆ, ಅದರಲ್ಲೂ ಸ್ವ ವಿಮರ್ಶೆಗೆ ಒಳಗಾಗಬೇಕು, ಕವಿತೆ ಮೊದಲು ಬರೆದ ಕವಿಗೆ ಇಷ್ಟವಾಗಬೇಕು ನಂತರವೇ ಇತರರು ಮೆಚ್ಚಲು ಸಾಧ್ಯ ಎಂದು ಕವಿ, ಲೇಖಕ 'ಎತ್ತಣ ಮಾಮರ ಎತ್ತಣ ಕೋಗಿಲೆ'ಖ್ಯಾತಿಯ ಸಿದ್ದು ಯಾಪಲಪರವಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೦ನೇ ಕವಿಸಮಯದ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಾಚ್ಯತೆ ಮೀರಿದ ಕವನಗಳು ಹುಟ್ಟಬೇಕು ಇದು ಬೇರೆ ಬೇರೆ ಕವಿಗಳನ್ನು ಓದುವದರಿಂದ ವಚನ ಸಾಹಿತ್ಯದಂತವುಗಳನ್ನು ಅಧ್ಯಯನ ಮಾಡುವುದರಿಂದ ಸಾಧ್ಯ. ಕಾವ್ಯದಲ್ಲಿ ಸೂಕ್ಷ್ಮ ನೇಯುವಿಕೆ ಅಗತ್ಯ. ಗೇಯತೆ, ರೂಪಕ, ಪ್ರತಿಮೆಗಳಿರುವ ಕಾವ್ಯ ದ ಸೃಷ್ಟಿಯಾಗಬೇಕು ಎಂದರು. ಇಡೀ ವಿಶ್ವದಲ್ಲಿ ಸುಂದರ ಸೃಷ್ಟಿ ಎಂದರೆ ಕವಿತೆ, ಅದು ಎಲ್ಲವನ್ನೂ ಒಳಗೊಂಡಿರುವಂತಹದ್ದು , ಯುವ ಕವಿಗಳ ಕವಿತೆಗಳನ್ನು ಹಿರಿಯ ಕವಿಗಳು ತಿದ್ದಿ ಅವರಿಗೆ ಮಾರ್ಗದರ್ಶನ ನೀಡಬೇಕು ಕವಿಗೋಷ್ಠಿ ಎಂದರೇ ಹಿಂದೆ ಮುಂದೆ ನೋಡುವಂಥಹ ಪ್ರಸ್ತುತ ಸಂದರ್ಭದಲ್ಲಿ ಕವಿಸಮಯದಂತಹ ಕಾರ್‍ಯಕ್ರಮಗಳು ಹೆಚ್ಚಾಗಬೇಕು, ಲೇಖಕ ಕವಿಯಾದವನು ಹಮ್ಮನ್ನು ಬಿಟ್ಟು ಎಲ್ಲರೊಡನೆ ಬೆರೆತು ಚರ್ಚೆಗೆ ತೊಡಗುವಂತಾಬೇಕು ಇದರಿಂದ ಸುಂದರ ಕಾವ್ಯ ರಚನೆ ಸಾಧ್ಯ ಎಂದರು.
ಇದಕ್ಕೂ ಮೊದಲು ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ-ವಿಪರ್‍ಯಾಸ, ಶಿ.ಕಾ.ಬಡಿಗೇರ- ಜನಪ್ರತಿನಿಧಿ, ಎನ್.ಜಡೆಯಪ್ಪ- ಇವರ್‍ಯಾರು?, ಶಿವಪ್ರಸಾದ ಹಾದಿಮನಿ-ರಾಜಕೀಯವಯ್ಯ, ಎ.ಪಿ.ಅಂಗಡಿ- ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ, ಶ್ರೀನಿವಾಸ ಚಿತ್ರಗಾರ- ರಾಜಕೀಯ, ಡಾ.ಮಹಾಂತೇಶ ಮಲ್ಲನಗೌಡರ- ಕರ್ನಾಟಕ ರತ್ನ ಕುವೆಂಪು, ಅರುಣಾ ನರೇಂದ್ರ- ವಾಸ್ತವ, ಶಾಂತಾದೇವಿ ಹಿರೇಮಠ- ನಮ್ಮ ನಾಯಕರು, ವೀರಣ್ಣ ಹುರಕಡ್ಲಿ- ಸುತ್ತೋಣ ಬಾರಾ, ಸಿರಾಜ್ ಬಿಸರಳ್ಳಿ- ಮಾರುತ್ತೇವೆ ನಾವು, ಪುಷ್ಪಲತಾ ಏಳುಬಾವಿ-ಆಲಾಪನೆ, ವಾಸುದೇವ ಕುಲಕರ್ಣಿ- ಹಾರುವ ಹಕ್ಕಿಯ ಸಾಲು, ಶಾಂತು ಬಡಿಗೇರ-ಬಣ್ಣ, ಜಿ.ಎಸ್.ಬಾರಕೇರ-ಕನ್ನಡ ಕಂದನ ಆಸೆ, ಬಸವರಾಜ- ಅಮ್ಮನ ಮಡಿಲು, ಡಾ.ವಿ.ಬಿ.ರಡ್ಡೇರ- ಕದಡಬೇಡಿ ತಿಳಿನೀರ ಕೊಳವ, ವಿಠ್ಠಪ್ಪ ಗೋರಂಟ್ಲಿ- ಚುಟುಕು, ಸಿದ್ದು ಯಾಪಲಪರವಿ- ಯಾರಿವರು ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಸಿದ್ದು ಯಾಪಲಪರವಿಯವರ ನೆಲದ ಮರೆಯ ನಿದಾನ ಕುರಿತು ಸಂವಾದ ಏರ್ಪಡಿಸಲಾಗಿತ್ತು.ಸಂವಾದಲ್ಲಿ ಮಾತನಾಡಿದ ಶಿ.ಕಾ.ಬಡಿಗೇರ- ಈ ಕವನಸಂಕಲನದ ಕವನಗಳಿಗೆ ಯಾವತ್ತೂ ಮುಪ್ಪಿಲ್ಲ, ಸಾವಿಲ್ಲ, ಸಾಮಾಜಿಕ ಪ್ರಜ್ಞೆಯುಳ್ಳ, ಬದ್ದತೆಯುಳ್ಳ ಕವನಗಳು ಇವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಪ್ರಸಾದ ಹಾದಿಮನಿ- ಕವಿಯನ್ನು ನವ್ಯ ಎನ್ನಬೇಕೋ, ಸಾಮಾಜಿಕ ಕವಿ ಎನ್ನಬೇಕೋ ತಿಳಿಯದಾಗಿದೆ. ಅವರ ಕವನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ ಮಾತನಾಡಿದರು. ಡಾ.ವಿ.ಬಿ.ರಡ್ಡೇರ ಮಾತನಾಡಿ ಸಿದ್ದು ಯಾಪಲಪರವಿಯವ ಮೇಲೆ ವಚನ ಸಾಹಿತ್ಯ ಹೆಚ್ಚಿನ ಪ್ರಭಾವ ಬೀರಿದೆ ಎಂದರು. ಬೂಟು ಪಾಲೀಸು ಮಾಡುವ ಹುಡುಗನ ಕುರಿತ ಕವನದ ಕುರಿತು ಅತೀ ಮೆಚ್ಚುಗೆ ವ್ಯಕ್ತಪಡಿಸಿದರು. ವಿಠ್ಠಪ್ಪ ಗೋರಂಟ್ಲಿಯವರೂ ಸಹ ಸಿದ್ದು ಯಾಪಲಪರವಿ ಬಹುಮುಖ ಪ್ರತಿಭೆಯ ವ್ಯಕ್ತಿ , ಅವರ ಕವನಗಳಲ್ಲಿ ವಚನಗಳ ಪ್ರಭಾವ ಎದ್ದು ಕಾಣುವಂತಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಕೊನೆಯಲ್ಲಿ ಮಾತನಾಡಿದ ಕವಿ ಸಿದ್ದು ಯಾಪಲಪರವಿ ತಮ್ಮ ಕವನಗಳ ಹುಟ್ಟಿನ ಕುರಿತು ಮಾತನಾಡಿದರು. ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್‍ಯಕ್ರಮ ನಡೆಸಿಕೊಟ್ಟ ಸಿರಾಜ್ ಬಿಸರಳ್ಳಿ ಸಿದ್ದು ಯಾಪಲಪರವಿಯವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ, ಜಿಲ್ಲೆಯ ಯುವ ಕವಿಗಳಿಗೆ, ಲೇಖಕರಿಗೆ ಅವರ ಮಾರ್ಗದರ್ಶನ ನೀಡುವಂತಾಗಲಿ ಎಂದರು.

Tuesday, September 7, 2010

ಸತತ ಅಧ್ಯಯನವೇ ಗಟ್ಟಿ ಕವಿತೆಗೆ ಕಾರಣ -ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್




ಕವಿಗಳು ಸತತ ಅಧ್ಯಯನಶೀಲರಾಗಬೇಕು, ಹಿರಿಯ ಕವಿಗಳ ಕವನಗಳನ್ನು ಓದುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಇದರಿಂದ ನಮ್ಮ ರಚನೆಗಳು ಇನ್ನೂ ಗಟ್ಟಿಗೊಳ್ಳುತ್ತಾ ಸಾಗುತ್ತವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಬಯಸುವ ಕವಿತೆ ಶಕ್ತಿಯುತವಾದಾಗ ಅದು ಎಲ್ಲರನ್ನೂ ತಲುಪುತ್ತದೆ ಎಂದ ಸಂಶೋದಕ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ಹೇಳಿದರು. ಅವರು ನಗರ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೯ನೇ ಕವಿಸಮಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಠೋರ ಸತ್ಯಗಳನ್ನು ಹೇಳುವ ಶಕ್ತಿ ಮತ್ತು ಮನಸ್ಸಿನ ಕತ್ತಲನ್ನು ಹೊಡೆದೊಡಿಸುವ ಶಕ್ತಿ ಸಾಹಿತ್ಯಕ್ಕಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಲವೂ ಕವಿಸಮಯದಲ್ಲಿ ಅಶುಕವಿತೆ ರಚನೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಾಗರಾಜ ಬೆಲ್ಲದ-ಗೆಳತಿ, ಜಿ.ಎಸ್.ಬಾರಕೇರ- ಪುಸ್ತಕ, ಎನ್.ಜಡೆಯಪ್ಪ-ನಾಯಿ,ಗುರು, ಶಾಂತಾದೇವಿ ಹಿರೇಮಠ- ಶಿಕ್ಷಕ, ವಾಗೀಶ ಪಾಟೀಲ -ಸಾಹಿತ್ಯ, ಮಹಾಂತೇಶ ಮಲ್ಲನಗೌಡರ- ಬೆತ್ತಲೆಯವರ ನಾಡಿನಲ್ಲಿ, ವಿಠ್ಠಪ್ಪ ಗೋರಂಟ್ಲಿ- ರಸ್ತೆಗಳು, ಗುರು, ಎ.ಪಿ.ಅಂಗಡಿ- ಚುಟುಕು, ಶಿ.ಕಾ.ಬಡಿಗೇರ- ಗುರು ಶಿಷ್ಯ, ಸಿರಾಜ್ ಬಿಸರಳ್ಳಿ- ಗುರು, ವೀರಣ್ಣ ಹುರಕಡ್ಲಿ- ಅಕ್ಷರ, ಸಿದ್ದಲಿಂಗಪ್ಪ ಕೊಟ್ನೇಕಲ್- ಕಾಲ, ಸತ್ಯ ಮತ್ತು ದೈವ, ಪುಷ್ಪಲತಾ ಏಳುಬಾವಿ- ಸಾಲುಮರದ ತಿಮ್ಮಕ್ಕ ,ಚುಟುಕುಗಳನ್ನು ವಾಚಿಸಿದರು.
ಕವಿಗೋಷ್ಠಿಯ ನಂತರ ಎ.ಪಿ.ಅಂಗಡಿಯವರ ಮಗ್ಗಿಮಾಮನ ಹಾಡುಗಳು ಕುರಿತು ಸಂವಾದ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಶಿವಪ್ರಸಾದ ಹಾದಿಮನಿ, ಪುಷ್ಪಲತಾ ಏಳುಬಾವಿ, ಎನ್.ಜಡೆಯಪ್ಪ ಮತ್ತಿತರರು ಭಾಗವಹಿಸಿ ಮಾತನಾಡಿದರು. ಸಂವಾದಕ್ಕೆ ಪ್ರತಿಯಾಗಿ ಮಾತನಾಡಿದ ಕವಿ ಎ.ಪಿ.ಅಂಗಡಿ ವಿಮರ್ಶೆ ಮಾಡಿದ ಎಲ್ಲರಿಗು ಧನ್ಯವಾದ ಅರ್ಪಿಸಿ, ಸಲಹೆ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವುದಾಗಿ ಹೇಳಿದರು. ಶಿ.ಕಾ.ಬಡಿಗೇರ ಸ್ವಾಗತಿಸಿದರು, ಕಾರ್‍ಯಕ್ರಮವನ್ನು ಕವಿಸಮೂಹದ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.