Monday, August 30, 2010

೧೮ನೇ ಕವಿಸಮಯದಲ್ಲೊಂದು ಪ್ರಯೋಗ :ಅಶುಕವಿತೆ ರಚನೆ




ಕೊಪ್ಪಳ : ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯದಲ್ಲಿ ಹೊಸದೊಂದು ಪ್ರಯೋಗ ಮಾಡಲಾಯಿತು. ಸ್ಥಳದಲ್ಲಿಯೇ ಕವನ ರಚನೆ ಮಾಡುವಂತಹ ಅಶುಕವಿತೆ ರಚನೆ ಕಾರ್‍ಯಕ್ರಮ. ವಿವಿದ ವಿಷಯಗಳ ಬಗ್ಗೆ ಚೀಟಿಯಲ್ಲಿ ಬರೆದು ನಂತರ ಆಯಾ ಕವಿಗಳಿಗೆ ಹಂಚಲಾಯಿತು. ಚೀಟಿಯಲ್ಲಿ ಬಂದಂತಹ ವಿಷಯದ ಬಗ್ಗೆ ಕವನ ರಚಿಸಲು ಕವಿಗಳಿಗೆ ಸೂಚಿಸಲಾಯಿತು. ಸುಮಾರು ೨೦ ನಿಮಿಷ ಸಮಯಾವಕಾಶ ನೀಡಲಾಗಿತ್ತು. ಅತ್ಯುತ್ತಮ ಎನ್ನಬಹುದಾದಂತಹ ಕವನಗಳ ರಚನೆಯಾಯಿತು. ಈ ಪ್ರಯೋಗ ಎಲ್ಲ ಕವಿಗಳಿಗೂ ಖುಷಿ ನೀಡುವುದರ ಜೊತೆ ರಚಿತವಾದ ಕವನಗಳನ್ನು ವಿಮರ್ಶಕರಾಗಿದ್ದ ವಿ.ಬಿ.ರಡ್ಡೇರ್ ಬಹಳ ಮೆಚ್ಚಿಕೊಂಡು ವಿಮರ್ಶೆ ಮಾಡಿದರು.

ಸಾಹಿತ್ಯ ಯಾವತ್ತೂ ಜೀವನ ಪ್ರೀತಿ ಬೆಳೆಸುತ್ತದೆ, ಕವನದಲ್ಲಿ ಎಷ್ಟೇ ರೋಷ, ಆವೇಶ , ನಿರಾಸೆ ಇದ್ದರೂ ಕೊನೆಯಲ್ಲಿ ಬದುಕಿನ ಬಗ್ಗೆ ಆಶಾಭಾವನೆ ಬಿತ್ತುವುದು ಕವಿತೆಯ ಜೀವನ ಪ್ರೀತಿಗೆ ಉದಾಹರಣೆ. ಹಲವಾರು ವಿಷಯಗಳ ಬಗ್ಗೆ ಕವನ ರಚಿಸಿದ ಕವಿಗಳು ತಮಗೆ ಕೊಟ್ಟಂತಹ ವಿಷಯದ ಬಗ್ಗೆ ಸಮರ್ಥವಾಗಿ ಕವನ ರಚಿಸಿದ್ದಾರೆ. ಕೆಲವು ಕವನಗಳಲ್ಲಿ ವಾಚ್ಯ ಎನಿಸುವಂತಹ ರಚನೆ ಇದ್ದರೂ ಸಹ ಸ್ಥಳದಲ್ಲಿಯೇ ಕವನ ರಚಿಸುವುದು ನಿಜಕ್ಕೂ ಪ್ರಶಂಸನೀಯ ಎಂದು ಕವನಗಳ ಕುರಿತು ಮಾತನಾಡಿದ ಸಾಹಿತಿ ವಿ.ಬಿ.ರಡ್ಡೇರ್ ಹೇಳಿದರು. ಕವಿಸಮಯದಲ್ಲಿ ಈ ರೀತಿಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರಲಿ ಇದರಿಂದ ಬರೆಯುವವರಿಗೆ ಹೊಸ ಸ್ಪೂರ್ತಿ ಸಿಗುವಂತಾಗಲಿ ಎಂದು ಆಶಿಸಿದರು.

ಅಶುಕವಿತೆಯಲ್ಲಿ ಈ ಕೆಳಗಿನ ಕವಿಗಳು ಕವನ ವಾಚನ ಮಾಡಿದರು. ವೀರಣ್ಣ ಹುರಕಡ್ಲಿ- ಹುಟ್ಟು,ಸಾವು, ಜಿ.ಎಸ್.ಬಾರಕೇರ- ರಾಜಕೀಯ, ಗಂಗಾಧರ ಖಾನಾಪೂರ- ಜಿಲ್ಲಾ ಸಮಸ್ಯೆ,ನನ್ನದಲ್ಲ ತಪ್ಪು, ಎ.ಪಿ.ಅಂಗಡಿ- ಪ್ರೇಮ, ಮಹೇಶ ಬಳ್ಳಾರಿ - ನಗರ ಸಮಸ್ಯೆ, ಅಲಿ ನವಾಜ್ - ಸಮಕಾಲೀನ ಸಮಸ್ಯೆ, ಶಿವಪ್ರಸಾದ ಹಾದಿಮನಿ- ಬಡತನದ ಬದುಕು, ಶ್ರೀನಿವಾಸ ಚಿತ್ರಗಾರ- ಗರಿಕೆ ನಿಸರ್ಗ, ಮೆಹಮುದಮಿಯ- ಹಸಿರು ನಿಸರ್ಗ, ರಂಗನಾಥ- ದಲಿತರು, ಡಾ.ಮಹಾಂತೇಶ ಮಲ್ಲನಗೌಡರ- ಅಸ್ಪೃಶ್ಯರು, ಲಕ್ಷ್ಮೀ -ದೇಶಾಭಿಮಾನ, ಶಾಂತಾದೇವಿ ಹಿರೇಮಠ- ನೆನಪು, ಪುಷ್ಪಲತಾ ಏಳುಬಾವಿ- ಬಂಡಾಯ, ಸಿರಾಜ್ ಬಿಸರಳ್ಳಿ- ನಾಡು ನುಡಿ, ಹನುಮಪ್ಪ ಬಾರಕೇರ-ಸ್ತ್ರೀ, ಬಿ.ಸಿ.ಪಾಟೀಲ- ಎತ್ತಿಕೊಳ್ಳಿರಿ ಹೂವ ಎಂಬ ಕವಿತೆಗಳನ್ನು ವಾಚಿಸಿದರು.

ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ಮುಂದಿನ ವಾರ ಎ.ಪಿ.ಅಂಗಡಿಯವರ ಮಗ್ಗಿಮಾಮನ ಹಾಡುಗಳು ಕುರಿತು ಸಂವಾದ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ಕವಿಸಮಯದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ ಮತ್ತಿತರರು ಉಪಸ್ಥಿತರಿದ್ದರು.

Thursday, August 26, 2010

ಚುಟುಕು,ಕವನಗಳಿಗೆ ಹೆಚ್ಚಿನ ಆಯಾಮಗಳಿರಬೇಕು




ಕೊಪ್ಪಳ : ಚುಟುಕು, ಕವನಗಳಲ್ಲಿ ಪ್ರಾಸವು ಸಹಜವಾಗಿ ಬರುವಂತಿರಬೇಕು. ಹಾಗಾದಾಗ ಅವುಗಳ ಮಹತ್ವ ಹೆಚ್ಚಾಗುತ್ತದೆ. ಪ್ರಾಸಕ್ಕೆ ಗಂಟು ಬಿದ್ದು ಕವನ ರಚಿಸುವುದು ಸಲ್ಲದು ಇದರಿಂದಾಗಿ ಕವನ ತನ್ನ ಇತರೆ ಆಯಾಮಗಳನ್ನು ಕಳೆದುಕೊಳ್ಳುತ್ತದೆ ಎಂದು ಹಿರಿಯ ವಿಮರ್ಶಕ ಎ.ಎಂ.ಮದರಿ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ೧೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಶಿವಪ್ರಸಾದ ಹಾದಿಮನಿಯವರ ಸಿಂಚನ ಚುಟುಕು ಕವನಸಂಕಲನದ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್‍ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಲೋಹಿಯಾವಾದಿ ವಿರುಪಾಕ್ಷಪ್ಪ ಅಬ್ಬಿಗೇರಿಯವರಿಗೆ ಗೌರವಸೂಚಕವಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು. ನಂತರ ಮೃತರ ಬಗ್ಗೆ ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟ್ಟದೂರ ಮತ್ತು ಎ.ಎಂ.ಮದರಿಯವರು ಮಾತನಾಡಿದರು. ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಅಬ್ಬಿಗೇರಿಯವರು ಸಾರ್ಥಕ ಬದುಕು ನಡೆಸಿದವರು , ಅವರ ರಾಜಕೀಯ ಆದರ್ಶಗಳು ಉದಾತ್ತವಾಗಿದ್ದವು ಎಂದು ಹೇಳಿದರು.
ಇದಕ್ಕೂ ಮೊದಲು ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ೧೫ ಕವಿಗಳು ಕವನ ವಾಚನ ಮಾಡಿದರು. ಜಿ.ಎಸ್.ಬಾರಕೇರ- ನಮ್ಮೂರಿನ ಮಂದಿರ, ಲಕ್ಷ್ಮೀ- ಬೆಳದಿಂಗಳಾಗಿ ಬಾ, ಪುಷ್ಪಲತಾ ಏಳುಬಾವಿ - ನಕ್ಷತ್ರ, ಎಂ.ಡಿ.ಹುಸೇನ-ತಂದೆಯ ಕೊರಗು, ವಿಠ್ಠಪ್ಪ ಗೋರಂಟ್ಲಿ- ಅಗಲಿದ ಅಬ್ಬಿಗೇರಿ ನೆನದು, ಮಹೇಶ ಬಳ್ಳಾರಿ- ಮತ್ತೊಂದು ಕಗ್ಗತ್ತಲು, ಸಿರಾಜ್ ಬಿಸರಳ್ಳಿ- ಹಸಿವು, ಹನುಮಪ್ಪ ಬಾರಕೇರ-ಜಲಧಾರೆ, ಎ.ಪಿ.ಅಂಗಡಿ- ವಾಚಿನ ಮಗ್ಗಿ, ವೀರಣ್ಣ ಹುರಕಡ್ಲಿ- ಆರ್ತನಾದ, ಶಿವಪ್ರಸಾದ ಹಾದಿಮನಿ- ಕಟ್ಟೊಣ, ಬಸವರಾಜ ಸಂಕನಗೌಡರ- ಬದನೆಕಾಯಿ ಪುರಾಣ, ಪ್ರಭು- ಕರೆಂಟ್,ಅರುಣಕುಮಾರ-ವಾರೆಂಟ್, ಶಿ.ಕಾ.ಬಡಿಗೇರ- ಕ್ಷಮಯಾಧರಿತ್ರಿ ಕವನಗಳನ್ನು ವಾಚನ ಮಾಡಿದರು.
ಕವನಗಳನ್ನು ಅಲ್ಲಮಪ್ರಭು ಬೆಟ್ಟದೂರರು ವಿಮರ್ಶೆ ಮಾಡಿದರು. ನಂತರ ಸಂವಾದ ಕಾರ್‍ಯಕ್ರಮ ನಡೆಯಿತು. ಸಂವಾದದಲ್ಲಿ ಒಮ್ಮಿದ ಅಭಿಪ್ರಾಯಗಳ ಬಗ್ಗೆ ಮಾತನಾಡಿದ ಶಿವಪ್ರಸಾದ ಹಾದಿಮನಿ ಎಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಸಲಹೆ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಕವಿಸಮಯದಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ನಿರ್ಧರಿಸಲಾಯಿತು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Tuesday, August 17, 2010

ಒಳ್ಳೆಯ ಮನುಷ್ಯನನ್ನು ಸೃಷ್ಟಿಸುವ ಸಾಹಿತ್ಯ ಬೇಕು -ಬಸವರಾಜ್ ಸೂಳಿಬಾವಿ



ಕೊಪ್ಪಳ : ಒಳ್ಳೆಯ ಸಾಹಿತ್ಯ ಸೃಷ್ಟಿಗಿಂತ ಒಳ್ಳೆಯ ಮನುಷ್ಯರನ್ನು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವಾದದ್ದು. ಕವಿ,ಲೇಖಕನಾದವನು ನಮ್ಮ ನಡುವಿನ ತಲ್ಲಣಗಳಿಗೆ ಸ್ಪಂದಿಸುವ ಮನಸ್ಸು ಹೊಂದಿರಬೇಕು. ಕೇವಲ ಬಹುಪರಾಕು ಹೇಳುವವನು ಕವಿಯಾಗಲಾರ ಎಂದು ಖ್ಯಾತ ಹೋರಾಟಗಾರ ಹಾಗೂ ಲೇಖಕ ಬಸವರಾಜ ಸೂಳಿಬಾವಿ ಹೇಳಿದರು. ಅವರಿಂದು ಕನ್ನಡನೆಟ್.ಕಾಂ ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೧೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು ಪ್ರಸ್ತುತೆಗೆ ಸ್ಪಂದಿಸದೇ ಕೇವಲ ಅಲಂಕಾರಿವಾಗಿ ಬರೆಯುತ್ತಾ ಹೋಗುವುದು ಸಾಹಿತ್ಯವಲ್ಲ, ತಲ್ಲಣಗಳಿಗೆ ಸ್ಪಂದಿಸಿ ಒಳ್ಳೆಯತನಕ್ಕಾಗಿ ಮಿಡಿಯುವುದು ಮನುಷ್ಯತ್ವ ಇದೇ ಕವಿಯ ಮನಸ್ಸು ಎಂದರು. ಈಗ ಎಲ್ಲೆಡೆ ದ್ವೇಷ ಹಂಚುವ ಕೆಲಸ ನಡೆಯುತ್ತಿದೆ ಇದನ್ನು ಮೀರಿ ನಿಲ್ಲಬೇಕು , ಒಳ್ಳೆಯ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಕವಿಸಮೂಹ ಒಳ್ಳೆಯ ವೇದಿಕೆಯಾಗಿದೆ. ವಿಮರ್ಶೆ ಎನ್ನುವುದು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರುವಂತದ್ದು ಆದ್ದರಿಂದ ಮುಕ್ತವಾಗಿ ವಿಮರ್ಶೆ ನಡೆಯಬೇಕು ಎಂದರು. ಸ್ವಾತಂತ್ರೋತ್ಸವದ ನಿಮಿತ್ತ ಕವಿಸಮೂಹ ಕಾರ್‍ಯಕ್ರಮವನ್ನು ಮಧ್ಯಾಹ್ನ ೩ ಕ್ಕೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ೧೫ ಕವಿಗಳು ತಮ್ಮ ಕವನ ವಾಚನ ಮಾಡಿದರು. ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್‍ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಕೊಪ್ಪಳ ಜಿಲ್ಲೆಯ ಖ್ಯಾತ ಕವಿ ಡಾ.ಮಹಾಂತೇಶ ಮಲ್ಲನಗೌಡರಿಗೆ ಅಕಾಡೆಮಿ ಆಪ್ ಬೆಂಗಾಲಿ ಪೋಯಟ್ರಿ, ಕಲ್ಕತ್ತಾ ಇವರು ಆಚಾರ್‍ಯ ಪ್ರಫುಲ್ಲಾ ಚಂದ್ರರಾಯ್ ಸ್ಮಾರಕ ಸಮ್ಮಾನ -೨೦೧೦ ಪ್ರಶಸ್ತಿಯನ್ನು ನೀಡಿದೆ. ಇದಕ್ಕಾಗಿ ಕವಿಸಮೂಹದ ಎಲ್ಲ ಕವಿಗಳು ಮಹಾಂತೇಶ ಮಲ್ಲನಗೌಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳು : ಬಸವರಾಜ ಮಾರನಬಸರಿ ಗಜೇಂದ್ರಗಡ- ಬನ್ನಿ ಭಾರತೀಯರೇ, ಬಸವರಾಜ ಸೂಳಿಬಾವಿ- ಎರಡು ಕವಿತೆಗಳು, ಮಹೇಶ ಬಳ್ಳಾರಿ- ಬದುಕು, ಪುಷ್ಪಲತಾ ಏಳುಬಾವಿ- ಏನೆಂದು ಬರೆಯಲಿ, ಮಹಾಂತೇಶ ಮಲ್ಲನಗೌಡರ- ಹೆಣ್ಣಿನ ಸ್ವಗತ, ಸಿರಾಜ್ ಬಿಸರಳ್ಳಿ - ಗಾಡಬಣ್ಣಗಳು, ಶಿವಪ್ರಸಾದ ಹಾದಿಮನಿ- ಬುದ್ದಿಜೀವಿಗಳೇ ಹೀಗೆ, ಶಿ.ಕಾ.ಬಡಿಗೇರ- ಬೆಳಕು ನೋಡದವರು, ಹನುಮಂತಪ್ಪ ಬಾರಕೇರ- ಹಕ್ಕಿ, ಎನ್.ಜಡೆಯಪ್ಪ- ಆಧುನಿಕ ವಚನ, ಆಲಿ ನವಾಜ್ : ನಾನೊಬ್ಬ ಬಾಲಕಾರ್ಮಿಕ, ವೀರಣ್ಣ ಹುರಕಡ್ಲಿ- ಅತ್ತೆ ಮನೆಗೆ ಅಳಿಯ ಬಂದಾಗ, ಎ.ಪಿ.ಅಂಗಡಿ- ಬಸ್ಸಿನಲ್ಲಿ ಹೆರಿಗೆ ಕವನಗಳನ್ನು ವಾಚಿಸಿದರು. ಜಡೆಯಪ್ಪ ಕಾರ್‍ಯಕ್ರಮ ನಡೆಸಿಕೊಟ್ಟರು. ಶಿ.ಕಾ.ಬಡಿಗೇರ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ವಂದನಾರ್ಪಣೆ ಮಾಡಿದರು

Monday, August 9, 2010

ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ

ಕವಿಸಮಯದ ಆರಂಭದಲ್ಲಿ ಮೊನ್ನೆ ನಿಧನರಾದ ಹಿರಿಯ ವಿಮರ್ಶಕ ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಎ.ಎಂ.ಮದರಿಯವರು ಕಿ.ರಂ.ನಾಗರಾಜ್ ರ ಬಗ್ಗೆ ಮಾತನಾಡಿದರು. ಧಾರವಾಡದಲ್ಲಿ ಬೇಂದ್ರ ಸ್ಮರಣೆಯ ಕಾರ್‍ಯಕ್ರಮದಲ್ಲಿ ಕಿ.ರಂ.ರವರ ಭಾಷಣವನ್ನು ನೆನಪಿಸಿಕೊಂಡ ಮದರಿಯವರು ಕನ್ನಡ ಸಾಹಿತ್ಯ ಬಹುದೊಡ್ಡ ವಿಮರ್ಶಕನನ್ನು ಕಳೆದುಕೊಂಡಿದೆ ಎಂದರು.

ಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇಕು - ಎ.ಎಂ.ಮದರಿ




ಕಾವ್ಯದ ಸಮಯ ಮುಗಿದು ಹೋಯಿತು ಇನ್ನು ಕಾವ್ಯ ರಚನೆಯಾಗುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತದೆ. ಆದರೆ ಸೃಜನಶೀಲತೆಗೆ ಯಾವುದು ಮುಗಿದು ಹೋಗುವುದಿಲ್ಲ. ಕಾವ್ಯದ ನಿರಂತರತೆ ಯಾವತ್ತೂ ಬತ್ತುವುದಿಲ್ಲ. ಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇಕು ಎಂದು ಕೊಪ್ಪಳದ ಹಿರಿಯ ಕವಿ, ಹೃದಯವಂತ ವಿಮರ್ಶಕ ಎ.ಎಂ.ಮದರಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬರೆಯುವವನಿಗೆ ಕಾವ್ಯದ ಕನಿಷ್ಠ ಅರಿವಿರಬೇಕು. ಅದು ಸತತ ಅಧ್ಯಯನದ ಮೂಲಕ ಸಾಧ್ಯ ಅದನ್ನು ರೂಡಿಸಿಕೊಳ್ಳಬೇಕು ಎಂದರು. ಕಾವ್ಯ ಯಾವತ್ತೂ ಒಂದೇ ಸೂತ್ರಕ್ಕೆ ಗಂಟು ಬೀಳದೇ ಸೂತ್ರವನ್ನೂ ಮೀರುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಕವಿಸಮಯದ ಆರಂಭದಲ್ಲಿ ಮೊನ್ನೆ ನಿಧನರಾದ ಹಿರಿಯ ವಿಮರ್ಶಕ ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಎ.ಎಂ.ಮದರಿಯವರು ಕಿ.ರಂ.ನಾಗರಾಜ್ ರ ಬಗ್ಗೆ ಮಾತನಾಡಿದರು. ಧಾರವಾಡದಲ್ಲಿ ಬೇಂದ್ರ ಸ್ಮರಣೆಯ ಕಾರ್‍ಯಕ್ರಮದಲ್ಲಿ ಕಿ.ರಂ.ರವರ ಭಾಷಣವನ್ನು ನೆನಪಿಸಿಕೊಂಡ ಮದರಿಯವರು ಕನ್ನಡ ಸಾಹಿತ್ಯ ಬಹುದೊಡ್ಡ ವಿಮರ್ಶಕನನ್ನು ಕಳೆದುಕೊಂಡಿದೆ ಎಂದರು. ತಮ್ಮ ಎಂದಿನ ಪಂಚಿಂಗ್ ವಿಮರ್ಶೆ ಮಾಡುತ್ತ್ತ ಮದರಿಯವರು ಹಿಂದಿನ ಕೊಪ್ಪಳದ ಸಾಹಿತ್ಯಿಕ ವಾತಾವರಣವನ್ನು ನೆನಪಿಸಿಕೊಂಡರು.ಕಿರಿಯ ಕವಿಗಳು ಹೆಚ್ಚಿನ ಓದಿನ ಮೂಲಕ ವಾಚ್ಯವಾಗುವಂತಹ ಕವನಗಳನ್ನು ಕಾವ್ಯಾತ್ಮಕಗೊಳಿಸುವ ಕಲೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕವಿಗೋಷ್ಠಿಯಲ್ಲಿ ೧೮ ಕವಿಗಳು ಕವನ ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ-ಸಪಾಯಿ ಕರ್ಮಚಾರಿಯ ಬದುಕು, ಹನುಮಪ್ಪ ಬಾರಕೇರ- -ಇಟಗಿ ದೇವಾಲಯ, ಎ.ಪಿ.ಅಂಗಡಿ- ಪಾದಯಾತ್ರೆ ನಡಿಗೆ, ಶಿವಪ್ರಸಾದ ಹಾದಿಮನಿ- ಚುಟುಕು, ಎಂ.ಡಿ.ಹುಸೇನ್ -ಕೋಮುವಾದಿಗಳು, ಜಡೆಯಪ್ಪ ಎನ್-ಮಡಿವಂತ, ವಿರೇಶ ಹುಲ್ಲೂರ-ಸ್ವಾರ್ಥದ ಕತ್ತಲೆಯಿಂದ, ಶಾಂತಾದೇವಿ ಹಿರೇಮಠ- ನಾವು ಸ್ವತಂತ್ರರು, ಲಕ್ಷ್ಮೀ- ಸ್ನೇಹ, ಶ್ರೀನಿವಾಸ ಚಿತ್ರಗಾರ- ಶಿಶುಪ್ರಾಸಗಳು, ಜಿ.ಎಸ್.ಬಾರಕೇರ- ಕಾರ್ಗಿಲ್ ಕವಿತೆ, ಶಿ.ಕಾ.ಬ- ಮಗುವಾಗುತ್ತೇನೆ, ಮೆಹಮುದಮಿಯಾ- ಚಿತ್ತ, ಶಿವಾನಂದ ಹೊದ್ಲೂ- ಕನ್ನಡ, ಮಹೇಶ ಬಳ್ಳಾರಿ-ಅಗಷ್ಟ್ ೯ರ ಹಾಡು, ಶಾಂತೇಶ ಬಡಿಗೇರ- ನನ್ನ ಜನ, ಸಿರಾಜ್ ಬಿಸರಳ್ಳಿ- ಕಟ್ಟಬೇಕಿದೆ ಕವನಗಳನ್ನು ವಾಚನ ಮಾಡಿದರು. ನಂತರ ಶ್ರೀನಿವಾಸ ಚಿತ್ರಗಾರರ ಸಾಹಿತ್ಯ ಕುರಿತ ಸಂವಾದ ನಡೆಯಿತು.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Saturday, August 7, 2010

ನಾಳೆಯದು 15ನೇ ಕವಿಸಮಯ ಎಲ್ಲರಿಗೂ ಸುಸ್ವಾಗತ

ಈ ವಾರದ ಮುಕ್ತಕವಿಗೋಷ್ಠಿ ಯಲ್ಲಿ ಹಿರಿಯ ವಿಮರ್ಶಕ ಎ.ಎಂ.ಮದರಿ ಕವಿಗಳಿಗೆ ಮಾರ್ಗದರ್ಶನ ಮತ್ತು ಕವನಗಳ ವಿಮರ್ಶೆ ಮಾಡಲಿದ್ದಾರೆ. ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರರ ಸಾಹಿತ್ಯ ಕುರಿತು ಸಂವಾದ ನಡೆಯಲಿದೆ.

Tuesday, August 3, 2010

ಬದುಕಿನ ಅರಿವು ಮತ್ತು ಪರಿಸರ ಪ್ರಜ್ಞೆಯೇ ಸಾಹಿತ್ಯಕ್ಕೆ ಕಾರಣ- ಅಕ್ಬರ್ ಕಾಲಿಮಿರ್ಚಿ



ಕೊಪ್ಪಳ : ಬದುಕಿನ ಅನುಭವ,ಅರಿವು,ಪರಿಸರ ,ಪ್ರಕೃತಿಯೆಡೆಗಿನ ಪ್ರಜ್ಞೆಯೇ ಸಾಹಿತ್ಯಕ್ಕೆ ಕಾರಣವಾಗುತ್ತದೆ ಎಂದು ಕವಿ ಅಕ್ಬರ್ ಕಾಲಿಮಿರ್ಚಿ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಾಹಿತಿಗಳಿಗೆ ಕಳಂಕವಿದೆಯೇ ಹೊರತು ಸಾಹಿತ್ಯಕ್ಕೆ ಯಾವತ್ತೂ ಕಳಂಕವಿಲ್ಲ. ಬದುಕಿಗೆ ದಾರಿ ದೀಪವಾಗುವ ಕಾವ್ಯ ರಚನೆಯಾಗಬೇಕು ಎಂದರು. ಕವಿಸಮಯದಲ್ಲಿ ಭಾಗವಹಿಸಿದ್ದ ಕವಿಗಳ ದಂಡನ್ನು ಕಂಡು ಹರ್ಷ ವ್ಯಕ್ತಪಡಿಸಿದ ಕಾಲಿಮಿರ್ಚಿ ೨೮ ಕವಿಗಳು ಇಂದು ಕವನ ವಾಚನ ಮಾಡಿದ್ದಾರೆ. ಎಲ್ಲಾ ಕವಿಗಳನ್ನು ನೋಡುವ ಭಾಗ್ಯ ನೀಡಿದ ಕವಿಸಮಯ ನಿಜವಾಗಿಯೂ ಕವಿದರ್ಶನ ಕಾರ್‍ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಕವಿಸಮಯ ಕಾರ್‍ಯಕ್ರಮದಲ್ಲಿ ದಾಖಲೆ ಸಂಖ್ಯೆಯಲ್ಲಿ ಕವಿಗಳು ಮತ್ತು ಆಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ೨೮ ಕವಿಗಳು ತಮ್ಮ ಕವನ ವಾಚನ ಮಾಡಿದರು. ಪ್ರತಿಕವಿಯೂ ತಮ್ಮ ಕವಿತೆಯ ಹುಟ್ಟಿನ ಬಗ್ಗೆ ಹೇಳಿ ತಮ್ಮ ಕವನ ವಾಚನ ಮಾಡಿದರು. ಶಾಂತಾದೇವಿ ಹಿರೇಮಠ-ಮರಕೋತಿಯಾಟ,ವಿಮಲಾ ಇನಾಂದಾರ ಅಳವಂಡಿ- ಪ್ರತಿಭಟನೆ, ವಾಗೀಶ ಪಾಟೀಲ್- ಮೌನ್, ಶಿ.ಕಾ.ಬಡಿಗೇರ- ಚುಟುಕುಗಳು, ಮಹಾಂತೇಶ ಮಲ್ಲನಗೌಡರ -ನಾಕ ನರಕ, ಅಕ್ಬರ್ ಕಾಲಿಮಿರ್ಚಿ- ಸೂರ್‍ಯನಿಗೆ, ಎ.ಪಿ.ಅಂಗಡಿ-ಇರಬೇಕು, ವಿರೇಶ ಹುಲ್ಲೂರ- ಪ್ರಕೃತಿಯ ಮುದ್ದಿನ ಕೂಸು, ಹನ್ಮಂತಪ್ಪ ಬಾರಕೇರ- ಅಮ್ಮ, ಜಿ.ಎಸ್.ಬಾರಕೇರ- ಹೆಂಡತಿ ತವರಿಗೆ ಹೋದಾಗ, ಜಡೆಯಪ್ಪ ಎನ್.-ನಾವೇ ಇಲ್ಲದ ನೆಲದಲ್ಲಿ, ವೀರಣ್ಣ ಹುರಕಡ್ಲಿ-ಸುತ್ತೋಣ ಬಾರಾ, ಶ್ರೀನಿವಾಸ ಚಿತ್ರಗಾರ- ಚುಟುಕುಗಳು, ಶಿವಪ್ಪ ಶೆಟ್ಟರ್- ದೇಶಭಕ್ತಿಗೀತೆ, ಮಹೇಶ್ ಬಳ್ಳಾರಿ- ಆಕ್ಟೋಪಸ್, ಲಕ್ಷ್ಮೀ- ಪ್ರಕೃತಿ ಇಲ್ಲದಿದ್ದರೆ, ಆರ್.ಎಂ.ಪಾಟೀಲ್- ಸಿದ್ದ, ಪುಷ್ಪಲತಾ ಏಳುಬಾವಿ- ಆಧುನಿಕ ವಚನಗಳು, ಅಲಿನವಾಜ್-ಶಾಯರಿ, ಶಿವಪ್ರಸಾದ ಹಾದಿಮನಿ-ನಾವೆಂಥ ಜನ, ಎಂ.ಡಿ.ಹುಸೇನ್ - ಸ್ಪೋಟ, ರಂಗನಾಥ ಕೋಳೂರು- ಕರ್ನಾಟಕ ಮಾತೆ, ವೀರಣ್ಣ ರಡ್ಡೇರ- ಟಿ.ಎನ್.ಶೇಷನ್, ಸಾಧನೆಯ ಕೊರತೆ, ಮಾನಪ್ಪ ಬೆಲ್ಲದ- ಧರೆಯ ಸೇಡು, ಶಾಂತೇಶ ಬಡಿಗೇರ- ಗವಿಸಿದ್ದೇಶ್ವರ, ಆಧುನಿಕ ಮನು, ಅರುಣಾ ನರೇಂದ್ರ-ಸುರಿಸದಿರು ಗೆಳತಿ, ಸಿರಾಜ್ ಬಿಸರಳ್ಳಿ -ನಾವು ಬದುಕುವುದೇ ಹೀಗೆ - ಕವನಗಳನ್ನು ವಾಚನ ಮಾಡಿದರು.

ಕವನವಾಚನದ ನಂತರ ಹಿರಿಯ ಕವಿಯತ್ರಿ ಶ್ರೀಮತಿ ಶಾಂತಾದೇವಿ ಹಿರೇಮಠರ ಕವನ ಸಂಕಲನಗಳ ಬಗ್ಗೆ ಸಂವಾದ , ಚರ್ಚೆ, ವಿಮರ್ಶೆ ಹಮ್ಮಿಕೊಳ್ಳಲಾಗಿತ್ತು. ಕವನಗಳ ಬಗ್ಗೆ ಮಾತನಾಡಿದ ಶಿವಪ್ರಸಾದ ಹಾದಿಮನಿ ದಂಪತಿಗಳಿಬ್ಬರು ಸೇರಿ ಸೃಷ್ಟಿಸಿದ ಕವನ ಸಂಕಲನ ನೀನೇ ನಾನು ನಾನೇ ನೀನು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಹಾದಿಯನ್ನೇ ಸೃಷ್ಟಿಸಿತು ಎಂದರು. ಪುಷ್ಪಲತಾ ಏಳುಬಾವಿ, ಮಹೇಶ ಬಳ್ಳಾರಿ, ವಿರೇಶ ಹುಲ್ಲೂರ, ಶ್ರೀನಿವಾಸ ಚಿತ್ರಗಾರ, ಜಿ.ಎಸ್ ಬಾರಕೇರ,ರಂಗನಾಥ ಮತ್ತು ಮಹಾಂತೇಶ ಮಲ್ಲನಗೌಡರ , ವಿ.ಬಿ.ರಡ್ಡೇರ ಕೃತಿಗಳ ಕುರಿತು ಮಾತನಾಡಿದರು. ಬರೆಯುವ ಮಹಿಳೆಯೇ ಒಂದು ಕ್ರಾಂತಿ, ಹೆಣ್ಣಿನ ಶೋಷಣೆಯ ಬಗ್ಗೆ ಚೆನ್ನಾಗಿ ಬರೆದಿದ್ದಾರೆ ಎಂದು ವಿ.ಬಿ.ರಡ್ಡೇರ,ಮಹಾಂತೇಶ ಮಲ್ಲನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕವಿಯತ್ರಿ ಶಾಂತಾದೇವಿ ಹಿರೇಮಠ ತಮ್ಮ ಕೃತಿ ಬಗ್ಗೆ ಮಾತನಾಡಿದ ಎಲ್ಲರಿಗೆ ಧನ್ಯವಾದ ಅರ್ಪಿಸಿದರು. ದಾಂಪತ್ಯ ಜೀವನದ ಕುರಿತ ಅವರ ಕವಿತೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಕವನಗಳಿಗೆ ಶಬ್ದಕ್ಕಿಂತ ಭಾವಪ್ರಾಮುಖ್ಯತೆ ಮುಖ್ಯ - ಡಾ.ವಿ.ಬಿ.ರಡ್ಡೇರ್


ಅಂತರಂಗದ ಧ್ವನಿಯಿಲ್ಲದ ಕವನಗಳಿಗೆ ಒಣ ಆಡಂಭರದಿಂದ ಪ್ರಯೋಜನವಿಲ್ಲ ಎಂದು ಸಾಹಿತಿ,ವಿಮರ್ಶಕ ಡಾ.ವಿ.ಬಿ.ರಡ್ಡೇರ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಶ್ಲೇಷಣೆ ಮಾಡುತ್ತ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕವಿಯು ಎಲ್ಲ ಬಗೆಯ ಬೇಧಗಳನ್ನು ಹೊಡೆದೋಡಿಸಲು ನಿರಂತರ ಹೋರಾಟ ಮಾಡುತ್ತಲೇ ಇರುತ್ತಾನೆ ಈ ಹೋರಾಟ ಯಾವತ್ತೂ ಸಾಗಿಯೇ ಇರುತ್ತದೆ. ಕವಿಯು ಯಾವಾಗಲೂ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುತ್ತಾನೆ. ತನ್ನ ಭಾವನೆಗಳಿಗೆ ರೂಪು ಕೊಡುವ ಕಲೆಗಾರಿಕೆಯಿಂದ ಮತ್ತು ಸತತ ಅಧ್ಯಯನದಿಂದ ಕಾವ್ಯ ಶಕ್ತಿಯುತವಾಗುತ್ತದೆ. ಸಮಾಜವನ್ನು ಜೊತೆಯಲ್ಲಿಟ್ಟುಕೊಂಡು ಹೋಗುವ ಕಾವ್ಯ,ಸಾಹಿತ್ಯ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು. ನಮ್ಮ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಭೋರ್ಗರೆದ ಭೂಮಿ . ಇಲ್ಲಿ ದಾಸ ಮತ್ತು ವಚನ ಸಾಹಿತ್ಯ ವಿಫುಲವಾಗಿ ರಚಿತಗೊಂಡಿವೆ. ಆದರೆ ಈಗ ನಮ್ಮ ಭಾಗದ ಕವಿ, ಸಾಹಿತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವಿಷಾಧಿಸಿದರು. ಈ ಭಾಗದ ಸಾಹಿತ್ಯ ಕಾರ್‍ಯಕ್ರಮಗಳಿಗೆ, ಸಾಹಿತಿಗಳಿಗೆ ಕವಿಸಮೂಹದ ಈ ಕವಿಸಮಯ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.

ಈ ವಾರದ ಕವಿಸಮಯದಲ್ಲಿ ೨೧ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅರುಣಾ ನರೇಂದ್ರ-ಪುಟ್ಟನ ಊಟ, ಶಾಂತಾದೇವಿ ಹಿರೇಮಠ-ಬರ ವರ ಚುಟುಕು, ಪುಷ್ಪಾಲತಾ ಏಳುಭಾವಿ- ಮುತ್ತು ಬಂದಾವ ಕೇರಿಗೆ, ವಾಗೀಶ್‌ಪಾಟೀಲ್- ನೆನೆದು, ಶ್ರೀನಿವಾಸ ಚಿತ್ರಗಾರ- ಅವ್ವಿ, ಶಿವಪ್ರಸಾದ ಹಾದಿಮನಿ- ಆತ್ಮಹತ್ಯೆ, ಜಿ.ಎಸ್.ಬಾರಕೇರ-ಚೆಂದುಳ್ಳಿ ಚೆಲುವೆ, ಮಹಾಂತೇಶ ಮಲ್ಲನಗೌಡರ- ಹೈ.ಕ.ವಿಮೋಚನೆ, ಶಿ.ಕಾ.ಬಡಿಗೇರ-ಭಂಗಿಗಳ ಸ್ವಗತ, ವಿಠ್ಠಪ್ಪ ಗೋರಂಟ್ಲಿಇ- ಅಂದು ಗೋದ್ರಾದಲ್ಲಿ ಮೂಡಿದ ಸೂರ್‍ಯ, ವಿ.ಬಿ.ರಡ್ಡೇರ- ನಾಗರಿಕತೆ, ಎಂ.ಡಿ.ನಂಜುಂಡಸ್ವಾಮಿ, ರಂಗನಾಥ ಕೋಳೂರು-ಪ್ರತಿಭಟನೆ, ಜಡೆಯಪ್ಪ ಇಟಗಿ- ಪ್ರೇಮ ಪಟಾಕಿ, ಶರಣಪ್ಪ ಕೊಪ್ಪದ- ಸೂರ್‍ಯಕಾಂತಿ, ಮಹೇಶ ಬಳ್ಳಾರಿ- ಒಂದು ರಾಜಕೀಯ ಕವಿತೆ, ವಿರೇಶ ಹುಲ್ಲೂರ-ಪ್ರೀತಿ, ವೀರಣ್ಣ ಹುರಕಡ್ಲಿ- ಮನಸ್ಸು, ಬೆಳಕು, ಎಂ.ಡಿ.ಹುಸೇನ್- ಭ್ರಷ್ಟ ರಾಜಕಾರಣಿ, ಶಿವಾನಂದ ಹೊದ್ಲೂರ- ಸಂಪತ್ತು ಚುಟುಕು, ಬಿ.ಸಿ.ಪಾಟೀಲ- ಚುಟುಕು ಸತಿ, ಸಿರಾಜ್ ಬಿಸರಳ್ಳಿ- ಸಾವು ಎಂಬ ಕವನಗಳನ್ನು ವಾಚನ ಮಾಡಿದರು.

ಕಸಾಪದ ರಾಜಶೇಖರ್ ಅಂಗಡಿ ಸೇರಿದಂತೆ ಇತರ ಆಸಕ್ತರು ಭಾಗವಹಿಸಿದ್ದ ಕಾರ್‍ಯಕ್ರಮವನ್ನು ಕವಿಸಮೂಹದ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. ಜುಲೈ 24,2010

ಕವಿಗಳು ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು-ಪ್ರಮೋದ ತುರ್ವಿಹಾಳ


ಕೊಪ್ಪಳ : ಸಮಕಾಲೀನ ಸಮಾಜದ ವಿಕಾರಗಳ ನಡುವೆ ಸೃಜನಶೀಲ ಮನಸ್ಸುಗಳು ಒಂದುಗೂಡಿರುವುದು ಬಹುಮುಖ್ಯ. ಇದು ಆರೋಗ್ಯಪೂರ್ಣ ಬೆಳವಣಿಗೆ, ಸಾಮಾಜಿಕ ಬೆಳವಣಿಗೆಗೆ ಆಶಾದಾಯಕವಾದುದು ಎಂದು ಯುವಕವಿ ಪ್ರಮೋದ ತುರ್ವಿಹಾಳ ಹೇಳಿದರು ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕವಿಗಳು ಮನುಷ್ಯ ಪ್ರೀತಿಯ ಜೊತೆಗೆ ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು,ಅಧ್ಯಯನದ ಶಿಸ್ತನ್ನು ರೂಡಿಸಿಕೊಳ್ಳಬೇಕು ಇದರಿಂದ ಹೊಸ ಶೈಲಿಯನ್ನು ರೂಡಿಸಿಕೊಳ್ಳಲು ಸಾಧ್ಯ. ಓದುಗರು ಕುತೂಹಲದಿಂದ ಕಾಯುವಂತಹ ರಚನೆ ಕವಿಗಳಿಂದ ಬರಬೇಕು ಎಂದರು. ಸಮಾಜ ಮತ್ತು ಲೇಖಕನ ನಡುವೆ ಅನುಸಂದಾನವೆರ್ಪಟ್ಟು ಒಳ್ಳೆಯ ವಿಚಾರಗಳು ಎಲ್ಲೆಡೆ ಹರಡಬೇಕು ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕವಿಸಮಯದಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ಕವನಗಳ ಮಟ್ಟ ಏನೇ ಇರಲಿ ಬರೆಯಬೇಕು ಎನ್ನುವ ಕುತೂಹಲದ ಮನಸ್ಥಿತಿ ಇಟ್ಟುಕೊಂಡು ಬರೆಯುತ್ತಿರುವ ಕವಿಗಳಿಗೆ ಅಭಿನಂದನೆಗಳು ಎಂದರು.

ಈ ಸಲದ ಕವಿಸಮಯ ಮುಕ್ತ ಕವನಗಳದಾಗಿತ್ತು. ಲಕ್ಷ್ಮೀ ಓತಗೇರಿ -ಹೆಣ್ಣು, ಅಲಿನವಾಜ್-ರಾಜಕೀಯ, ಕರೆಂಟ್, ಪುಷ್ಪಲತಾ ಏಳುಬಾವಿ -ಚುಟುಕು, ಕೋಳೂರು ರಂಗನಾಥ-ಟಾಲ್‌ಸ್ಟಾಯ್ , ಪ್ರಮೋದ ತುರ್ವಿಹಾಳ- ಮಗುವಿಗೊಂದು,ಮಾನಪ್ಪ ಬೆಲ್ಲದ-ನೊಂದಮನ ಕೈಚಾಚಿದಾಗ, ಮಹೇಶ್ ಬಳ್ಳಾರಿ-ಕ್ಯಾಸ್ ಬ್ಲಾಂಕ್,ಜಡೆಯಪ್ಪ - ದಲಿತರು,ಶಿವಪ್ರಸಾದ ಹಾದಿಮನಿ-ಭಾವೈಕ್ಯತೆ,ವೀರಣ್ಣ ಹುರಕಡ್ಲಿ- ಮಾತು, ವಿಠ್ಠಪ್ಪ ಗೋರಂಟ್ಲಿ- ಕವನ, ಜಿ.ಎಸ್.ಬಾರಕೇರ- ತುಂಗಭದ್ರೆ,ಸಿರಾಜ್ ಬಿಸರಳ್ಳಿ- ದ್ವೇಷ ಕವನಗಳನ್ನು ವಾಚನ ಮಾಡಿದರು. ವೀರಕನ್ನಡಿಗ ಸಂಘದ ಶಿವಾನಂದ ಹೊದ್ಲೂರ, ಪತ್ರಕರ್ತ ಮಹೇಶ ಬಾಬು ಉಪಸ್ಥಿತರಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

ಶಬ್ದ ಶಕ್ತಿ ಸುಂದರ ಕವಿತೆಗೆ ಮುಖ್ಯ - ಡಾ.ಕೆ.ಬಿ.ಬ್ಯಾಳಿ



ನಾವು ಬಳಸುವ ಶಬ್ದಗಳು ಕವಿತೆಗೆ ಶಕ್ತಿಯನ್ನು ನೀಡುತ್ತವೆ. ಶಬ್ದ ಶಕ್ತಿಯಿಂದ ಕವಿತೆಗಳು ಸುಂದರ ರೂಪ ಪಡೆಯುತ್ತವೆ. ಕವಿತೆಗಳ ಅರ್ಥ ಇನ್ನೂ ಹೆಚ್ಚಾಗುತ್ತದೆ ಎಂದು ಹಿರಿಯ ಕವಿ ಡಾ.ಕೆ.ಬಿ.ಬ್ಯಾಳಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕವಿಸಮೂಹ,ಕನ್ನಡನೆಟ್.ಕಾಂ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕವಿತೆಯನ್ನು ವಿಮರ್ಶೆ ಮಾಡಬಾರದು ಅದನ್ನು ಕವಿಯು ತನ್ನ ಭಾವನೆಗಳಿಗೆ ತಕ್ಕಂತೆ ಬರೆದಿರುತ್ತಾನೆ. ಕವಿತೆ ಹುಟ್ಟಿದ ಸಮಯ, ಸಂದರ್ಭ ಮತ್ತು ಕವಿಯ ಮನಸ್ಥಿತಿಗೆ ಅನುಗುಣವಾಗಿ ಕವನವಿರುತ್ತದೆ. ಅದನ್ನೆಲ್ಲಾ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಬಹುದಷ್ಟೆ ಎಂದರು. ಕೆಲವು ಸಲ ಈ ಕವನಗಳನ್ನು ವಿಮರ್ಶೆ ಮಾಡುವಲ್ಲಿ ವಿಮರ್ಶಕ ಸೋಲುತ್ತಾನೆ. ಕವಿತೆ ಯಾವಾಗ ಎಲ್ಲಿ ಹುಟ್ಟುತ್ತದೋ ಗೊತ್ತಿಲ್ಲ, ಹುಟ್ಟಿದ ತಕ್ಷಣ ಬರೆಯಿರಿ , ಹಿರಿಯ ಕವಿಗಳ , ಅನುಭವಿಗಳ ಸಲಹೆ ಸೂಚನೆಗಳನ್ನು ಪಾಲಿಸಿದರೆ ಸುಂದರ ಕವಿತೆ ರಚನೆ ಸಾಧ್ಯ ಎಂದರು.
ವಿಮರ್ಶೆಗೂ ಮೊದಲು ಡಾ.ಕೆ.ಬಿ.ಬ್ಯಾಳಿಯವರು ಹಾಯ್ಕುಗಳು ಮತ್ತು ರುಬಾಯಿಗಳನ್ನು ಕುರಿತು ಮಾತನಾಡಿದರು. ಹಾಯಕುಗಳ ಮೂಲ ಮತ್ತು ಅದು ಈಗ ನಡೆದು ಬರುತ್ತಿರುವ ದಾರಿಯನ್ನು ತಿಳಿಸಿದ ಅವರು, ರುಬಾಯಿಗಳ ಬಗ್ಗೆಯೂ ಮಾತನಾಡಿ ಅದರ ರಚನೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಮಾತನಾಡಿದರು.
ಈ ಸಲದ ಕವಿಸಮೂಹ ಕಾರ್‍ಯಕ್ರಮದಲ್ಲಿ ೨೦ ಕವಿಗಳು ತಮ್ಮ ಕವನ ವಾಚನ ಮಾಡಿದ್ದು ವಿಶೇಷವಾಗಿತ್ತು.
ಎನ್.ಜಡೆಯಪ್ಪ- ಜೀವನವಲ್ಲ, ಎ.ಪಿ.ಅಂಗಡಿ-ಇಂತವರು ಇರ್ತಾರ, ವಿರೇಶ ಹುಲ್ಲೂರ-ಅಂಕಿತ, ಶಾಂತಾದೇವಿ ಹಿರೇಮಠ- ಎಲ್ಲಿಗೆ ಹೋದೆ?, ಲಕ್ಷ್ಮೀ- ಕವಿಯ ಆಸೆ, ಪುಷ್ಪಲತಾ ಏಳುಭಾವಿ- ಹಾಯ್ಕುಗಳು, ವಾಗೀಶ ಪಾಟೀಲ್-ಬೇಡಿಕೆ, ಮಹಾಂತೇಶ ಮಲ್ಲನಗೌಡರ- ಬದುಕು, ಶರಣಬಸಪ್ಪ ಅಳ್ಳಳ್ಳಿ-ಮಾಯ,ನಾಶ, ಶಿ.ಕಾ.ಬಡಿಗೇರ-ನಿರಾಸೆ, ಕಾರಣ, ಮಹೇಶ ಬಳ್ಳಾರಿ- ಬದುಕು ಜಟಕಾ ಬಂಡಿ, ಶ್ರೀನಿವಾಸ ಚಿತ್ರಗಾರ- ಕವಿ, ಕಿವಿ, ಜಿ.ಎಸ್.ಬಾರಕೇರ- ಇಟಗಿ ದೇವಾಲಯ, ಎಸ್.ಚೌಡೇಶ್- ಪೋಸ್ಟಮ್ಯಾನ್, ವೀರಣ್ಣ ಹುರಕಡ್ಲಿ- ಕೇಳುವರಾರು?, ಅಲ್ಲಮಪ್ರಭು ಬೆಟ್ಟದೂರು-ಮಠ,ಸಾರು ಚುಟುಕುಗಳು, ವೀರಣ್ಣ ವಾಲಿ- ಜೆಡ್ ಗುಡಿ, ವಿಠ್ಠಪ್ಪ ಗೋರಂಟ್ಲಿ-ಮೌನ ಮಾತಾದಾಗ, ಸಿರಾಜ್ ಬಿಸರಳ್ಳಿ- ಕನಸುಗಳು ಕವನ ವಾಚನ ಮಾಡಿದರು. ಈ ಎಲ್ಲ ಕವನಗಳ ಕುರಿತು ಡಾ.ಕೆ.ಬಿ.ಬ್ಯಾಳಿಯವರು ಮಾತನಾಡಿದರು.
ಮುಂದಿನ ವಾರದ ಕವಿಸಮಯದಲ್ಲಿ ಜಿಲ್ಲೆಯ ಪ್ರತಿಭಾವಂತ ಯುವಕವಿ ಮಹೇಶ ಬಳ್ಳಾರಿಯವರ ಕಗ್ಗತ್ತಲು ಕವನ ಸಂಕಲನ ಕುರಿತು ಸಂವಾದ ನಡೆಸಲು ತೀರ್‍ಮಾನಿಸಲಾಗಿದೆ.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

೯ನೇ ಕವಿಸಮಯ ಕಾರ್ಯಕ್ರಮ ಯಶಸ್ವಿ


ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಯಶಸ್ವಿಯಾಗಿ ನಡೆಯಿತು. ಕವಿಸಮೂಹ ಪ್ರತಿವಾರ ಹಮ್ಮಿಕೊಳ್ಳುತ್ತಿರುವ ಈ ಕಾರ್‍ಯಕ್ರಮದಲ್ಲಿ ಪ್ರತಿವಾರ ಕವಿಗಳು ಹೊಸ ಹೊಸ ಕವನಗಳನ್ನು ರಚಿಸುತ್ತಿದ್ದಾರೆ ಮತ್ತು ಅವುಗಳ ಬಗ್ಗೆ ಮುಕ್ತವಾದ ವಿಮರ್ಶೆ , ಸಂವಾದ ನಡೆಯುತ್ತಿದೆ. ಈ ಹೊಸ ಬಗೆಯ ಪರಿಕಲ್ಪನೆಯು ಆಸಕ್ತರನ್ನು ಸೆಳೆಯುತ್ತಿದೆ.

ಅದೇ ರೀತಿ ಈ ವಾರ ಹಮ್ಮಿಕೊಂಡಿದ್ದ ಕಾರ್‍ಯಕ್ರಮದಲ್ಲಿ ಆಧ್ಯಾತ್ಮಿಕ ಕವನಗಳನ್ನು ರಚಿಸುವುದರ ಮೂಲಕ ಹೆಸರು ಮಾಡಿರುವ ವೀರಣ್ಣ ಹುರಕಡ್ಲಿಯವರು ನೀರು-ಪನ್ನೀರು ಎಂಬ ಕವನವನ್ನು ವಾಚಿಸಿದರು. ಎಲ್ಲರನ್ನೂ ಸಮಾನವಾಗಿ ಕಾಣುವ ನೀರು ಪನ್ನೀರಾಗುವ ಬಗೆ,ಕಲ್ಪನೆ ಎಲ್ಲರ ಮೆಚ್ಚುಗೆ ಪಡೆಯಿತು. ಪುಷ್ಪಾವತಿ ಏಳುಬಾವಿಯವರು ವಾಚಿಸಿದ - ಮಣ್ಣು, ವಲಸೆ ಪಕ್ಷಿಗಳು ಮತ್ತು ಹಾಯ್ಕುಗಳು, ವಾಗೀಶ ಬಳ್ಳಾರಿ- ಕೋರಿಕೆ, ಕರೆಯೋಲೆ, ಶರಣಬಸಪ್ಪ ಅಳ್ಳಳ್ಳಿ- ನಿರ್‍ಮೂಲನೆ,ಶೀಲಗೆಟ್ಟವಳು, ಶಿ.ಕಾ.ಬಡಿಗೇರರ- ಸಂಭ್ರಮ, ಬರ, ಜಡೆಯಪ್ಪ- ನಿಷ್ಪಲ, ಹೆಣ್ಣಿಗೊಂದು ಸಂದೇಶ, ಮಹೇಶ ಬಳ್ಳಾರಿ- ಬದುಕು ಜಟಕಾ ಬಂಡಿ, ಶಾಂತಾದೇವಿ ಹಿರೇಮಠರ- ಬರ-ವರ,ಶಿಕ್ಷಣ ಮತ್ತು ಸಿರಾಜ್ ಬಿಸರಳ್ಳಿ - ವಿರಹ, ರಾತ್ರಿ ಚುಟುಕು ಮತ್ತು ಕವನಗಳನ್ನು ವಾಚಿಸಿದರು. ಈ ಕವನಗಳ ಬಗ್ಗೆ ಮುಕ್ತವಾಗಿ ಶಿ.ಕಾ.ಬಡಿಗೇರ ವಿಮರ್ಶೆ ಮಾಡಿದರು. ಎಲ್ಲ ಕವಿಗಳು,ಕವಿಯಿತ್ರಿಯರು ಸಂವಾದದಲ್ಲಿ ಪಾಲ್ಗೊಂಡರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ಕಾರ್‍ಯಕ್ರಮದಲ್ಲಿ ಜಿ.ಎಸ್.ಗೋನಾಳ,ಮಹೇಶ ಉಳ್ಳಾಗಡ್ಡಿ ಮತ್ತಿತರ ಆಸಕ್ತರು ಪಾಲ್ಗೊಂಡಿದ್ದರು

ಕಾವ್ಯ ವಾಚನ ಒಂದು ದೊಡ್ಡ ಕಲೆ- ಅಲ್ಲಮಪ್ರಭು ಬೆಟ್ಟದೂರು



ಕೊಪ್ಪಳ : ಕಾವ್ಯ ವಾಚನ ಎಂಬುದು ಒಂದು ದೊಡ್ಡ ಕಲೆ. ಅದನ್ನು ಉತ್ತಮಪಡಿಸಿಕೊಳ್ಳಬೇಕು. ಕಾವ್ಯ ವಾಚನಕ್ಕೆ ತಕ್ಕಂತಹ ಕವನಗಳನ್ನು ಕವಿಗಳು ಆಯ್ದುಕೊಳ್ಳಬೇಕು.ಕೇಳುಗನಿಗೆ ಸ್ಪಷ್ಟವಾಗಿ ಕೇಳುವಂತಿರಬೇಕು ಎಂದು ಹಿರಿಯ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕವಿಸಮೂಹ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವಿತೆಗಳನ್ನು ವಿಮರ್ಶಿಸಿ ಮಾತನಾಡುತ್ತಿದ್ದರು. ಕವಿಸಮಯದಂತಹ ಕಾರ್‍ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ವಿಚಾರ ಹಂಚಿಕೊಳ್ಳುವುದರಿಂದ ಎಲ್ಲರ "ಚಾರಗಳು ಬೆಳೆಯುತ್ತವೆ. ಕವಿಸಮೂಹ ಹಮ್ಮಿಕೊಂಡಿರುವ ಕವಿಸಮಯ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.

ಕವಿಸಮಯ ಕಾರ್‍ಯಕ್ರಮದಲ್ಲಿ ಒಟ್ಟು ಹನ್ನೆರಡು ಕವಿಗಳು ತಮ್ಮ ಕವನ ವಾಚನ ಮಾಡಿದರು.ಕವನಗಳು ಒಳ್ಳೆಯ ಆಶಯ ಹೊಂದಿವೆ. ಚರಿತ್ರೆಯನ್ನು ಬೇಗ ಮರೆಯುವ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು. ಬಹುರಾಷ್ಟ್ರೀಯ ಕಂಪನಿಗಳ, ಸಂಘ ಪರಿವಾರದ ಕುತಂತ್ರಗಳ, ಬಡವರ ಹಕ್ಕಿನ, ಬೆವರಿನ ಬಗ್ಗೆ ಬರೆದ ಕವನಗಳನ್ನು ಮೆಚ್ಚಿಕೊಂಡು ಮಾತನಾಡಿದ ಅವರು , ಸ್ಥಳೀಯ ಚರಿತ್ರೆಯ ಪ್ರಚಾರವಾಗಬೇಕು , ಚರಿತ್ರೆಯ ಜೊತೆಗೆ ವರ್ತಮಾನವನ್ನು ಮರೆಯಬಾರದು ಎಂದರು.ಕವಿ ಗೋಷ್ಠಿಯಲ್ಲಿ ಜಡೆಯಪ್ಪ-ಅಂತರಿಗಳ ಅಂತರ, ಶಿ.ಕಾ.ಬಡಿಗೇರ- ಒಂದು ಮೊಳೆಯ ಸ್ವಗತ,ಶ್ರೀನಿವಾಸ ಚಿತ್ರಗಾರ-ಹನಿಗಳು, ಮೆಹಮೂದ ಮಿಯ- ಮನ್ವಂತರ, ಜಿ.ಎಸ್.ಬಾರಕೇರ- ಕೊಪ್ಪಳ ಜಿಲ್ಲೆ, ಹನುಮಪ್ಪ ಬಾರಕೇರ- ಮಹಾದೇವ ದೇವಾಲಯ, ಲಕ್ಷ್ಮೀ - ನಿಸರ್ಗ, ಪುಷ್ಪಲತಾ ಏಳುಭಾವಿ- ಬಹುರಾಷ್ಟ್ರೀಯ ಕಂಪನಿಗಳು, ವಿಮಲಾ ಇನಾಂದಾರ್-ಹಕ್ಕು, ಬಿ.ಎಸ್.ಪಾಟೀಲ್- ಸೋಲು, ಸಿರಾಜ್ ಬಿಸರಳ್ಳಿ- ನನ್ನೂರ ಕೋಗಿಲೆಗಳು ಹಾಡುವುದಿಲ್ಲ, ಅಲ್ಲಮಪ್ರಭು ಬೆಟ್ಟದೂರು- ಕರ್ನಾಟಕದ ಕತೆ ಎಂಬ ಕವನಗಳನ್ನು ವಾಚಿಸಿದರು.

ಕವಿಗ್ಠೋಯಲ್ಲಿ ಬಸವರಾಜ ಶೀಲವಂತರ, ಶಿವಾನಂದ ಹೊದ್ಲೂರ,ಡಾ. ರಾಜೇಶ್ವರಿ ಇನಾಂದಾರ್ ಅಳವಂಡಿ, ಭುಜಂಗಸ್ವಾಮಿ ಇನಾಂದಾರ್ ಇನ್ನಿತರರು ಭಾಗವಹಿಸಿದ್ದರು. ಬಿ.ಎಸ್.ಪಾಟೀಲ್ ಸ್ವಾಗತಿಸಿದರೆ, ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು

ಆಶಾವಾದಿ ಕವಿಯಿಂದ ಉತ್ತಮ ಸಮಾಜ ನಿರ್ಮಾಣ- ಬಿ.ಎಸ್.ಪಾಟೀಲ್


ನಿರಾಶಾವಾದಿಯಾಗಬಾರದು ಸಮಾಜದಲ್ಲಿ ಕೆಟ್ಟದರ ಜೊತೆಗೆ ಒಳ್ಳೆಯದು ಯಾವತ್ತೂ ಇರುತ್ತದೆ.ಆಶಾವಾದಿ ಕವಿ ಉತ್ತಮ ಸಮಾಜ ನಿರ್ಮಾಪಕನಾಗುತ್ತಾನೆ ಎಂದು ಸರಕಾರಿ ಅಭಿಯೋಜಕ ಮತ್ತು ಸರಕಾರಿ ವಕೀಲರಾದ ಬಿ.ಎಸ್.ಪಾಟೀಲರು ಹೇಳಿದರು.ಅವರು ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಮರ್ಶೆ ಮಾಡುತ್ತ ಮಾತನಾಡುತ್ತಿದ್ದರು.

ಕುಲಾಂತರಿ ಎಂಬ ವಿಷಯದ ಮೇಲೆ ಕವನ ಮಂಡಿಸಿದ ವಿವಿದ ಕವಿಗಳ ಕವನಗಳ ವಿಮರ್ಶೆ ಮಾಡಿದ ಅವರು ಬಿ.ಎಸ್.ಪಾಟೀಲರು ಕುಲಾಂತರಿ ತಳಿಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ನೀ ಮನಸು ಮಾಡಿದರೆ ಜಡೆಯಪ್ಪ, ಕುಲಾಂತರಿ-ಮಹೇಶ ಬಳ್ಳಾರಿ,ಬಸವಣ್ಣ- ಗವಿಸಿದ್ದಪ್ಪ ಬಾರಕೇರ, ಕಲ್ಯಾಣದ ಬೆಳಕು-ಶ್ರೀನಿವಾಸ ಚಿತ್ರಗಾರ, ನಾನು -ಡಾ.ಮಹಾಂತೇಶ ಮಲ್ಲನಗೌಡರ, ಬಡವಾಗುತಿದೆ ನಿಸರ್ಗ- ಪುಷ್ಪಲತಾ ಏಳುಬಾವಿ, ಸ್ನೇಹ- ಮಂಜುಳಾ, ವರ್ತಮಾನ ಕುಲಾಂತರಿ-ವೀರಣ್ಣ ಹುರಕಡ್ಲಿ, ದಂಡು-ಸಿರಾಜ್ ಬಿಸರಳ್ಳಿ, ಕುಲಾಂತರಿ- ವಿಠ್ಠಪ್ಪ ಗೋರಂಟ್ಲಿ ಇವು ಆಯಾ ಕವಿಗಳು ವಾಚಿಸಿದ ಕವನಗಳು.ಕುಲಾಂತರಿ ತಳಿಗಳ ಬಗ್ಗೆ , ಕುಲಾಂತರಿಯ ಬಗ್ಗೆ ವಿರೋಧವಿಲ್ಲ. ಅದು ಹೀಗಿರುವ ರೂಪ ಬದಲಿಸಿಕೊಂಡು ರೈತರಿಗೆ , ಜನರಿಗೆ ಉಪಯೋಗವಾಗುವಂತೆ ಬಂದರೆ ಸ್ವಾಗತವಿದೆ ಎಂದು ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಮಹೇಶ ಬಳ್ಳಾರಿ ರಚಿಸಿದ್ದ ಕುಲಾಂತರಿ ಎಂಬ ಕವಿತೆಯು ವಾರದ ಕವಿತೆಯಾಗಿ ಆಯ್ಕೆಗೊಂಡು. ಎಲ್ಲರಿಂದ ಮೆಚ್ಚುಗೆ ಪಡೆಯಿತು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಹುಸೇನ್ ಪಾಷಾ,ಶಿ.ಕಾ.ಬಡಿಗೇರ ಇನ್ನಿತರರು ಭಾಗವಹಿಸಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.


ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರ


June 8, 2010
ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರ
ಕೊಪ್ಪಳ : ಬಸವಣ್ಣನ ಬಗ್ಗೆ ಬರೆದ ಕವಿತೆಗಳು ನಮ್ಮನ್ನು ಮತ್ತೊಮ್ಮೆ ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುತ್ತವೆ ಎಂದು ಯುವ ಕವಿ ಶಿ.ಕಾ.ಬಡಿಗೇರ ಹೇಳಿದರು. ಅವರು ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಮರ್ಶೆ ಮಾಡುತ್ತ ಮಾತನಾಡುತ್ತಿದ್ದರು.
ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ಆಶಯ ಹೊತ್ತಿರುವ ಕವನಗಳಲ್ಲಿ ಬಸವಣ್ಣನನ್ನು ಸಶಕ್ತವಾಗಿ ಕವನಗಳಲ್ಲಿ ಬಿಂಬಿಸಲಾಗಿದೆ ಎಂದರು. ಕವಿಸಮಯದಲ್ಲಿ ಭಾಗವಹಿಸಿದ್ದ ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಕವಿತೆಯನ್ನುಂಥದ್ದು ಅನುಭವಿಸವಂಥದ್ದು, ಗದ್ಯದಲ್ಲಿ ಬರೆಯಲಾಗದ್ದನ್ನು ಪದ್ಯದಲ್ಲಿ ಬರೆಯಬೇಕು ಅದೂ ಕಾವ್ಯಾತ್ಮಕವಾದಾಗ ಓದುಗರನ್ನು ಸೆಳೆಯುತ್ತದೆ ಎಂದರು. ಗಂಗಾವತಿಯ ಮೆಹಮುದ್ ಮಿಯಾ ಕಲ್ಯಾಣದ ಬೆಳಕು ವಿಶ್ವಮಾನವ ಬಸವಣ್ಣ ಕವನ ವಾಚಿಸಿದರು. ಕುಷ್ಟಗಿಯ ಚೌಡೇಶ್ ಎಸ್. ಅಣ್ಣ ಬಸವಣ್ಣ , ಪುಷ್ಪಲತಾ ಏಳುಭಾವಿ- ವಿಶ್ವಮಾನವ ಜ್ಯೋತಿ , ವೀರಣ್ಣ ಹುರಕಡ್ಲಿ- ಛಲ , ವಿಜಯಲಕ್ಷ್ಮೀ ಹಿರೇಮಠ-ಜಗಜ್ಯೋತಿ ಬಸವಣ್ಣ, ಸಿರಾಜ್ ಬಿಸರಳ್ಳಿ- ಕ್ಷಮಿಸು ಬಸವ, ಡಾ.ಗೀತಾ ಪರವಿ- ಕಲ್ಯಾಣ ಬಸವ, ವಿಠ್ಠಪ್ಪ ಗೋರಂಟ್ಲಿ- ಕಲ್ಯಾಣದ ಬೆಳಕು,ಶಿ.ಕಾ.ಬಡಿಗೇರ-ಬಸವಪಥ ಎಂಬ ಕವನಗಳನ್ನು ವಾಚಿಸಿದರು. ಕೆಲವು ಕವಿತೆಗಳಲ್ಲಿ ಬಸವಣ್ಣ ಆದರ್ಶ ಮತ್ತು ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನ ಅನಿವಾರ್‍ಯತೆಯ ಬಗ್ಗೆ ಕವಿಗಳು ಬಹಳ ಚೆನ್ನಾಗಿ ಮನಮುಟ್ಟುವಂತೆ ಕವನ ರಚಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕವಿಸಮಯ ಕಾರ್‍ಯಕ್ರಮದಲ್ಲಿ ಬಸವಲಿಂಗಯ್ಯ ಸಸಿಮಠ,ವಿಶ್ವನಾಥ ನಿಲೂಗಲ್, ಬಸವರಾಜ ಶೀಲವಂತರ, ಹುಸೇನಪಾಷಾ, ಮಹೇಶ್ ಬೆಳವಣಿಕೆ, ನೀಲಕಂಠಪ್ಪ,ಪಂಪಾಪತಿ ಹೊನ್ನಳ್ಳಿ,ಮಲ್ಲಿಕಾರ್ಜುನ ಹಡಪದ ಯಲಬುರ್ಗಾ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
ಮುಂದಿನ ರವಿವಾರದ ಕವಿಸಮಯ ಕಾರ್‍ಯಕ್ರಮಕ್ಕೆ ಕುಲಾಂತರಿ ಎಂಬ ವಿಷಯದ ಮೇಲೆ ಕವನ ರಚಿಸಲು ಎಲ್ಲರಿಗೂ ಸೂಚಿಸಲಾಯಿತು. ಪ್ರಸ್ತುತ ಸಂದರ್ಭದಲ್ಲಿ ಕುಲಾಂತರಿ ಎನ್ನುವದು ಕೇವಲ ತಳಿಗಳಿಗೆ ಸೀಮಿತವಾಗಿಲ್ಲ ಅದು ನಮ್ಮ ವ್ಯಾಪಕ ಜನಜೀವನವನ್ನೇ ಪ್ರಭಾವಿಸುತ್ತಿದೆ. ಪೀಳಿಗೆಗಳನ್ನು, ಜನಸಮೂಹವನ್ನು ಮಾನಸಿಕವಾಗಿ, ದೈಹಿಕವಾಗಿ , ಭೌದ್ದಿಕವಾಗಿ ಬದಲಾಯಿಸುತ್ತಿದೆ. ಅದರ ಬಗ್ಗೆ ಕವನ ರಚಿಸಲು ಕೋರಲಾಗಿದೆ.

ಕವಿಯಾದವನು ಹೊಸ ಹೊಸ ಪರಿಷ್ಕಾರಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು

ಪ್ರತಿವಾರ ಹಮ್ಮಿಕೊಳ್ಳಲಾಗುತ್ತಿರುವ ಕವಿಸಮಯ ಕಾರ್‍ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ಈ ವಾರ ಎಂಟು ಜನ ಕವಿಗಳು ತಮ್ಮ ಕವನ ವಾಚನ ಮಾಡಿದರು. ನಂತರ ಅವುಗಳ ವಿಮರ್ಶೆಯನ್ನು ಕವಿ ವೀರಣ್ಣ ವಾಲಿ ಮಾಡಿದರು.ಇಟಗಿಯ ಜಡೆಯಪ್ಪನವರ ಹೂವೇ ನೀನು ಬೇಕು ಮತ್ತು ಎಚ್ಚರ ಕವನಗಳ ಬಗ್ಗೆ ಮಾತನಾಡಿದ ವಾಲಿಯವರು ಹೂವು ಎಲ್ಲ ಕಾಲಕ್ಕೂ ಸಲ್ಲುವಂಥದ್ದು ಅದರ ಬಗ್ಗೆ ಬರೆದಿರುವ ಜಡೆಯಪ್ಪನವರ ಕವನ ಬಹಳ ಚೆನ್ನಾಗಿದೆ ಎಂದರು. ಶ್ರೀನಿವಾಸ ಚಿತ್ರಗಾರರ ಪಾಪುವಿನ ಸುತ್ತ ಕವನ ಮಕ್ಕಳ ಗಮನ ಸೆಳೆಯುತ್ತದೆ ಮತ್ತು ದೂರವಿಡಿ ಕವನ ಅಧಿಕಾರಸ್ಥರ ಗೋಸುಂಬೆತನವನ್ನು ತೋರಿಸುತ್ತದೆ ಎಂದರು. ಗವಿಸಿದ್ದಪ್ಪ ಬಾರಕೇರ ಇಟಗಿ, ವಸಂತ ಎಂಬ ಕವನಗಳನ್ನು ವಾಚಿಸಿದರು.ಕವಿಯಿತ್ರಿ ಪುಷ್ಪಾವತಿ ಏಳುಭಾವಿಯವರು ನಾಗರಿಕ ಶಿಲ್ಪಿ ಮತ್ತು ಕುಲಾಂತರಿ ಎಂಬ ಪ್ರಸ್ತುತ ಸಮಸ್ಯೆಗಳ ಬಗ್ಗೆ ಕವನ ವಾಚಿಸಿದರು. ಕುಲಾಂತರಿ ತಳಿಗಳ ಅಪಾಯದ ಬಗ್ಗೆ ಹೇಳುವ ಕವನ ಬಹಳ ಚೆನ್ನಾಗಿತ್ತು, ಜಲಾಲೂದ್ದೀನ್ ರೂಮಿಯ ಕವನವನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ ಮಹೇಶ ಬಳ್ಳಾರಿ ಬಹಾಳ ಚೆನ್ನಾಗಿ ಅನುವಾದಿಸಿದ್ದಾರೆ ,ಅರಣ್ಯ ಮತ್ತು ನದಿ ತಾತ್ವಿಕ ಚಿಂತನೆಯ ಕಾವ್ಯ ಎಂದರು .
ವಿಠ್ಠಪ್ಪ ಗೋರಂಟ್ಲಿಯವರು ವಿಶ್ವಮಾನವ ಬಸವಣ್ಣ ಎಂಬ ಕವನವನ್ನು ವಾಚಿಸಿದರು. ಇದರ ಬಗ್ಗೆ ಮಾತನಾಡಿದ ವಾಲಿಯವರು ಬಸವಣ್ಣನ ಸಿದ್ದಾಂತಗಳ ಬಗ್ಗೆ ಹೇಳುವ ಕವನ ಕೊನೆಯಲ್ಲಿ ಬಸಣ್ಣ ಕೆಲವೇ ಜನರ ಕೈಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂಬ ವ್ಯಂಗ್ಯವನ್ನು ಹೊರ ಹೊಮ್ಮಿಸುವ ಕವನ ಬಹಳ ಪ್ರಭಾವಯುತವಾಗಿದೆ ಎಂದರು. ಕವನಗಳ ವಿಮರ್ಶೆ ಮಾಡಿದ ವೀರಣ್ಣ ವಾಲಿಯವರು ಕವಿ ಪ್ರಜಾರಾಜ್ಯದಲ್ಲಿ ದೊಡ್ಡ ವ್ಯಕ್ತಿ. ಲೋಕದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯುಳ್ಳವನು. ಜಾಗತೀಕರಣ ಮದ್ಯೆ ಕಾವ್ಯ ತನ್ನದೇ ಆದ ಸ್ಥಾನ ಪಡೆಯುತ್ತಿದೆ ಎಂದರು.
ಕಾರ್‍ಯಕ್ರಮದಲ್ಲಿ ಮಹೇಶ ಬಳ್ಳಾರಿ, ಜಡೆಯಪ್ಪ ಎನ್, ಶ್ರೀನಿವಾಸ ಚಿತ್ರಗಾರ,ಗವಿಸಿದ್ದಪ್ಪ ಬಾರಕೇರ, ಪುಷ್ಪಲತಾ ಏಳುಬಾವಿ, ವೀರಣ್ಣ ವಾಲಿ, ಲಕ್ಷ್ಮಿ ಶೆಟ್ಟರ್, ವಿಠ್ಠಪ್ಪ ಗೋರಂಟ್ಲಿ,ಶಿವಾನಂದ ಹೊದ್ಲೂರ ಇನ್ನಿತರರು ಉಪಸ್ಥಿತರಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ಮುಂದಿನ ವಾರದ ಕವಿ ಸಮಯದಲ್ಲಿ ಬಸವಣ್ಣನ ಕುರಿತು ಕವನ ರಚನೆ ಮಾಡಬೇಕು ಎಂದು ನಿರ್ಧರಿಸಲಾಗಿದ್ದು ಆಸಕ್ತ ಕವಿಗಳು ಕಲ್ಯಾಣದ ಬೆಳಕು ಎಂಬ ವಿಷಯದ ಬಗ್ಗೆ ಅಥವಾ ವಿಶ್ವಮಾನವ ಬಸವಣ್ಣನ ಬಗ್ಗೆ ಕವಿತೆಗಳನ್ನು ಬರೆದುಕೊಂಡು ಬರಬೇಕೆಂದು ತೀರ್‍ಮಾನಿಸಲಾಯಿತು.

ಕುಮಾರವ್ಯಾಸ ಭಾರತ ಕಾವ್ಯವಾಚನ




ಸ್ನೇಹ ಜೀವಿ,ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಸರಳತೆ,ಸಾಹಿತ್ಯ ಸೇವೆ ಎಲ್ಲರಿಗೆ ಆದರ್ಶಪ್ರಾಯ-ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಯಾವಾಗಲೂ ಸಾಹಿತ್ಯವನ್ನೇ ಧ್ಯಾನಿಸುತ್ತ ತಮ್ಮ ದುಡಿಮೆಯ ಕೆಲಭಾಗವನ್ನು ಸಾಹಿತ್ಯದ ಕೆಲಸಗಳಿಗೆ ಮೀಸಲಿಟ್ಟಿರುವ ಡಾ.ಮಹಾಂತೇಶ ಮಲ್ಲನಗೌಡರು ಕಿರಿಯರ ಜೊತೆಗೆ ಕಿರಿಯರಾಗಿ ಹಿರಿಯರ ಜೊತೆ ಕಿರಿಯರಾಗಿ ಸದಾ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ ಅವರು ಇಂತಹ ನೂರಾರು ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವಂತಾಗಲಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಹೇಳಿದರು . ಅವರು ಮಂಗಳವಾರ ೧-೬-೨೦೧೦ ರಂದು ಡಾ.ಮಹಾಂತೇಶ ಮಲ್ಲನಗೌಡರ ಹುಟ್ಟುಹಬ್ಬದ ಪ್ರಯುಕ್ತ ಕನ್ನಡನೆಟ್.ಕಾಂ ಇ-ಪತ್ರಿಕೆ ಮತ್ತು ಕವಿ ಸಮೂಹ ಕೊಪ್ಪಳ ಇವರು ಜಂಟಿಯಾಗಿ ಹಮ್ಕೊಂಮಿಡಿದ್ದ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರಳವಾಗಿ ಎಲ್ಲರಿಗೂ ಆದರ್ಶರಾಗಿ ಬದುಕುತ್ತಿರುವ ಡಾ.ಮಹಾಂತೇಶ ಮಲ್ಲನಗೌಡರು ತಮ್ಮ ಕವನಗಳಿಂದ ಪ್ರೇಮಕವಿ ಎಂದೇ ಹೆಸರುವಾಸಿಯಾಗಿದ್ದಾರೆ. ಇವರ ಸಾಹಿತ್ಯ ಸೇವೆ ಇನ್ನೂ ಹೆಚ್ಚಾಗಲಿ ಎಂದು ಆಶಿಸಿದರು.
ಪ್ರಾರ್ಥನೆಯನ್ನು ಶೇಖರಪ್ಪ ಶೇಡ್ಮಿ ಮಾಡಿದರು. ಸ್ವಾಗತ ಭಾಷಣವನ್ನು ಮಾಡಿದ ಕನ್ನಡನೆಟ್.ಕಾಂ ನ ಸಿರಾಜ್ ಬಿಸರಳ್ಳಿ ಈ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುವದರಲ್ಲಿ ಕನ್ನಡನೆಟ್.ಕಾಂ ಮತ್ತು ಕವಿಸಮೂಹ ಕೇವಲ ನಿಮಿತ್ತ ಮಾತ್ರ . ತಮ್ಮ ಹುಟ್ಟುಹಬ್ಬವನ್ನು ಸಾಹಿತ್ಯ ಕಾರ್‍ಯಕ್ರಮದೊಂದಿಗೆ ಆಚರಿಸಬೇಕು ಎನ್ನುವ ಜಿಲ್ಲೆಯ ಹಿರಿಯ ಕವಿ, ಪ್ರೇಮ ಕವಿ ಡಾ.ಮಹಾಂತೇಶ ಮಲ್ಲನಗೌಡರ ಅವರ ಸದಾಶಯದಿಂದ ಈ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ, ಅವರ ಸಾಹಿತ್ಯ ಸೇವೆ ಇದೇ ರೀತಿ ಮುಂದುವರೆಯಲಿ ಕಿರಿಯರಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.
ನಂತರ ಡಾ.ಮಹಾಂತೇಶ ಮಲ್ಲನಗೌಡರಿಗೆ ಕನ್ನಡನೆಟ್.ಕಾಂ, ಕವಿಸಮೂಹ ಹಾಗು ಮಿತ್ರಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕುಮಾರವ್ಯಾಸ ಭಾರತ ಕಾವ್ಯವಾಚನಕ್ಕೂ ಮೊದಲು ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ಮಹಾಂತೇಶ ಮಲ್ಲನಗೌಡರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ಹಿರಿಕಿರಿಯರು ಎನ್ನುವ ಯಾವುದೇ ಬೇದ ಬಾವವಿಲ್ಲದ ಎಲ್ಲರೊಡನೆ ಸೇರಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡವರು.ಅವರ ಹುಟ್ಟು ಹಬ್ಬದಂದು ಈ ಕಾರ್‍ಯಕ್ರಮ ಹಮ್ಮಿಕೊಂಡಿದ್ದು ಅರ್ಥಪೂರ್ಣ ಎಂದರು. ನಂತರ ಕುಮಾರವ್ಯಾಸ ಭಾರತ ಕಾವ್ಯ ವಾಚನ ನಡೆತು. ಹಳೆಗನ್ನಡದ ಕಾವ್ಯವನ್ನು ಓದುವದರ ಜೊತೆಗೆ ವಿಠ್ಠಪ್ಪ ಗೋರಂಟ್ಲಿಯವರು ಅದಕ್ಕೆ ಅರ್ಥಪೂರ್ಣವಾಗಿ ವಿವರಣೆಯನ್ನು ನೀಡಿದರು. ಯುದ್ದ ಭೂಮಿಯಲ್ಲಿ ಕೃಷ್ಣ ಮತ್ತು ಅರ್ಜುನರ ನಡುವೆ ನಡೆಯುವ ಮಾತುಕತೆ, ಕೃಷ್ಣ ಅರ್ಜುನನನ್ನು ಯುದ್ದಕ್ಕಾಗಿ ಸಿದ್ದಪಡಿಸುವ ರೀತಿ, ಶಸ್ತ್ರತ್ಯಾಗಕ್ಕೆ ಸಿದ್ದನಾದ ಅರ್ಜುನನ್ನು ಹೀಗಳೆಯುವ ಕೃಷ್ಣನ ವಾಕ್ ಚಾತುರ್‍ಯ ಹೀಗೆ ಪ್ರತಿಯೊಂದು ನುಡಿಗೂ ಇರುವ ಅರ್ಥವನ್ನು ಕಾವ್ಯಾತ್ಮಕವಾಗಿ, ಅಧ್ಯಾತ್ಮಿಕವಾಗಿ ವಿವರಿಸಿದ್ದು ಸಭಿಕರ ಮೆಚ್ಚುಗೆ ಪಡೆತು.
ಅಧ್ಯಕ್ಷಿಯ ಭಾಷಣ ಮಾಡಿದ ಬಿ.ಎಸ್.ಪಾಟೀಲರು -ಸ್ನೇಹ ಜೀವಿಗಳಾಗಿರುವ ಸಾಹಿತ್ಯ ಪ್ರೇಮಿ ಡಾ.ಮಹಾಂತೇಶ ಮಲ್ಲನಗೌಡರು ಇನ್ನೂ ನೂರಾರು ವರ್ಷ ಬದುಕಿ ಬಾಳಲಿ ಕಿರಿಯರಿಗೆ ಅವರ ಮಾರ್ಗದರ್ಶನ ಸಿಗಲಿ ಎಂದು ಹಾರೈಸಿದರು. ಸರಳತೆ ಎಂದರೆ ಮಲ್ಲನಗೌಡರು ಎನ್ನುವಷ್ಟು ಸರಳವಾಗಿ ಬದುಕುತ್ತಿರುವ ಅವರನ್ನು ನೋಡಿ ನಾವು ಕಿರಿಯರು ಕಲಿಯುವುದು ಬಹಾಳ ಇದೆ. ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದು ಹಾರೈಸಿ ಕುಮಾರವ್ಯಾಸ ಭಾರತ ವಾಚನ ಮಾಡಿದ "ಠ್ಠಪ್ಪ ಗೋರಂಟ್ಲಿಯವರು ತಮ್ಮ ವಾಚನದ ಮೂಲಕ, ವಿವರಣೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ ಎಂದರು. ವೇದಿಕೆಯ ಮೇಲೆ ಐ.ಪತ್ತಾರ, ಮಹಾಂತೇಶ ಮಲ್ಲನಗೌಡರ್, ಬಿ.ಸಿಪಾಟೀಲ್, ಎಚ್.ಎಸ್.ವಾಲ್ಮೀಕಿ,ಎ.ಎಂ.ಮದರಿ ಜಿ.ಎಸ್.ಗೋನಾಳ,ಶಿ.ಕಾ.ಬಡಿಗೇರ ಉಪಸ್ಥಿತರಿದ್ದರು.
ಸದಾನಂದ ಜ್ಞಾನಾಶ್ರಮವು ಸಭಿಕರಿಂದ ತುಂಬಿತ್ತು. ಕಾರ್‍ಯಕ್ರಮದ ನಿರೂಪಣೆಯನ್ನು ಕವಿ ಶ್ರೀನಿವಾಸ ಚಿತ್ರಗಾರ ಮಾಡಿದರು. ವಂದನಾರ್ಪಣೆಯನ್ನು ಶಿ.ಕಾ.ಬಡಿಗೇರ ನೆರವೇರಿಸಿದರು.ಕಾರ್‍ಯಕ್ರಮದಲ್ಲಿ ಬಸವರಾಜ ಶೀಲವಂತರ, ಮಹೇಶ ಬಳ್ಳಾರಿ, ಹನುಮಂತಪ್ಪ ಅಂಡಗಿ, ವಾಯ್.ಬಿ.ಜೂಡಿ, ಜಯಕರ್ನಾಟಕ ಸಂಘಟನೆಯ ವಿಜಯಕುಮಾರ ಕವಲೂರ, ಬಸವೇಶ್ವರ ಯುವಕ ಮಂಡಳದ ಶಿವಕುಮಾರ,ವೀರಣ್ಣ ಹುರಕಡ್ಲಿ, ಪ್ರಲ್ಹಾದ ಗಂಗಾವತಿ, ಪಂಪಣ್ಣ ಬೆಟಗೇರಿ,ಶ್ರೀಮತಿ ರಡ್ಡೇರ್ ಮತ್ತು ಶ್ರೀಮತಿ ಮಲ್ಲನಗೌಡರ್ ಹಾಗೂ ಸದಾನಂದ ಜ್ಞಾನಾಶ್ರಮದ ಸದ್ಭಕ್ತರು ಉಪಸ್ತಿತರಿದ್ದರು.

ಯಶಸ್ವಿ 4ನೇ ಕವಿಸಮಯ ಕಾರ್ಯಕ್ರಮ



ಕೊಪ್ಪಳ : ಸಮಾನ ಮನಸ್ಕ ಕವಿಮಿತ್ರರ ಸಮೂಹ ನಗರದ ಐಬಿ ಆವರಣದಲ್ಲಿ ಹಮ್ಮಿಕೊಂಡಿದ್ದ ೪ನೇ ಕವಿಸಮಯ ಕಾರ್‍ಯಕ್ರಮ ಯಶಸ್ವಿಯಾಗಿ ಜರುಗಿತು. ಯುವಕವಿಗಳ ಕವಿತೆಗಳಿಗೆ ಹಿರಿಯ ಕವಿಗಳು ವಿಮರ್ಶೆ ಮಾಡಿದರು.

ಮಹೇಶ್ ಬಳ್ಳಾರಿ ವಾಚಿಸಿದ ಓಂ ಅಸತೋಮಾ ಮತ್ತು ಸಾವಿನ ಹಕ್ಕಿ ಕವಿತೆಯನ್ನು ಉಲ್ಲೇಖಿಸಿ ಮಾತನಾಡಿದ ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿಯವರು ಸಾವಿನ ನೂರು ಅರ್ಥಗಳನ್ನು ಅದರ ಅನುಭವನ್ನು ಸರಿಯಾಗಿ ಧ್ವನಿಸಿದೆ ಈ ಕವಿತೆ, ಸಣ್ಣ ವಯಸ್ಸಿಗೆ ಸಾವಿನ ಬಗ್ಗೆ ಬರೆಯುವುದಕ್ಕಿಂತ ಜೀವನ್ಮುಖಿ ಕವಿತೆಗಳನ್ನು ರಚಿಸಿ ಎಂದರು. ಶ್ರೀನಿವಾಸ ಚಿತ್ರಗಾರರ ತಲೆದಿಂಬು ಕವನದಲ್ಲಿ ತಾಯಿಯನ್ನು ತಲೆದಿಂಬಿಗೆ ಹೋಲಿಸಿ ಬರೆದ ಕವಿತೆಯು ಹೊಸ ಬಗೆಯ ಪರಿಕಲ್ಪನೆಯಾಗಿದ್ದು ಉತ್ತಮವಾಗಿ ಮೂಡಿ ಬಂದಿದೆ ಎಂದರು. ಇಟಗಿಯಿಂದ ಆಗಮಿಸಿದ್ದ ಯುವ ಕವಿ ಜಡೆಯಪ್ಪ ಎನ್ ಇವರ ಕವಿತೆಯು ಪ್ರಸ್ತುತ ಸಮಸ್ಯೆಗಳನ್ನು ,ತಮ್ಮಲ್ಲಿಯ ಆವೇಶವನ್ನು ವ್ಯಕ್ತಪಡಿಸುತ್ತಿದ್ದು ಆದಷ್ಟು ಕವಿತೆಯು ಪ್ರತಿಮೆ,ರೂಪಕ,ಉಪಮೆಗಳ ಮೂಲಕ ಒಡಮೂಡಬೇಕು ಎಂದರು. ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕಿ ಲಕ್ಷ್ಮೀಯ ಕವನಕ್ಕೆ ಪ್ರತಿಕ್ರಿಯಿಸಿದ ವಿಠ್ಠಪ್ಪ ಗೋರಂಟ್ಲಿಯವರು ಇನ್ನೂ ಹೆಚ್ಚಿನ ಪ್ರಮಾಣದ ಓದಿನ ಮೂಲಕ ಕವನಗಳನ್ನು ಬರೆಯುವ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಲು ಸಲಹೆ ನೀಡಿದರು. ನಂತರ ಸಿರಾಜ್ ಬಿಸರಳ್ಳಿಯವರ ದಾರಿ ತಪ್ಪಿದ ಕವಿತೆಯ ಬಗ್ಗೆ ಮಾತನಾಡಿದ ಗೋರಂಟ್ಲಿಯವರು ಕೆಲವು ಸಲ ಕವಿತೆಯು ಕವಿಯನ್ನು ಮೀರಿ ಬೆಳೆಯುತ್ತಾ ಹೋಗುತ್ತದೆ ಅದೇ ರೀತಿ ಈ ಕವಿತೆ ಎಂದರು. ಆಲದ ಮರಕ್ಕೆ ನೇತು ಹಾಕುವ ಕೊನೆಯ ಸಾಲುಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ, ಕವಿ ಮತ್ತು ಕವಿತೆ ಇಂದು ಎದುರಿಸುತ್ತಿರುವ ಸಮಸ್ಯೆಯನ್ನು ಹೇಳುತ್ತಿದೆ ಎಂದರು. ಕೊನೆಯಲ್ಲಿ ಬಿ.ಎಸ್.ಪಾಟೀಲ್ ರ ಕವಿತೆಗಳಿಗೆ ಪ್ರತಿಕ್ರಿಯಿಸಿ ತಮ್ಮ ಯೌವನ ಕಾಲದಲ್ಲಿ ಬರೆದಂತಹ ಈ ಕವಿತೆಗಳು ಇನ್ನೂ ಹೆಚ್ಚು ಪ್ರೌಢವಾಗಬಹುದಿತ್ತು ಎಂದು ಅಭಿಪ್ರಾಯ ಪಟ್ಟರು.

ಕವಿತೆಗಳನ್ನು ಮುಕ್ತವಾಗಿ ವಿಮರ್ಶೆ ಮಾಡುವುದರಿಂದ ಕವಿಗಳಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಅವಕಾಶವಾಗುತ್ತದೆ ಎಂದು ಮಹಾಂತೇಶ ಮಲ್ಲನಗೌಡರ್ ಹೇಳಿದರು. ಈ ಕಾರ್‍ಯಕ್ರಮಗಳಿಂದ ಯುವಕವಿಗಳ ಪ್ರತಿಭೆಗೆ ಒಳ್ಳೆಯ ಅವಕಾಶ ಮಾಡಿಕೊಟ್ಟಂತೆ ಎಂದರು. ಕಾರ್‍ಯಕ್ರಮದಲ್ಲಿ ಮಹೇಶ್ ಬಳ್ಳಾರಿ, ಶ್ರೀನಿವಾಸ್ ಚಿತ್ರಗಾರ್, ಎನ್.ಜಡಿಯಪ್ಪ, ಬಿ.ಎಸ್.ಪಾಟೀಲ್, ಲಕ್ಷ್ಮೀ, ಸಿರಾಜ್ ಬಿಸರಳ್ಳಿ ಹಾಗೂ ಇತರರು ಭಾಗವಹಿಸಿದ್ದರು.

2ನೇ ಕವಿಸಮಯ ಕಾರ್ಯಕ್ರಮ

ನಗರದಲ್ಲಿ ರವಿವಾರ ನಡೆದ ಕವಿ ಸಮಯದಲ್ಲಿ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ,ಶಿ.ಕಾ.ಬಡಿಗೇರ,ಸಿರಾಜ್ ಬಿಸರಳ್ಳಿ,ವೀರಣ್ಣ ಹುರಕಡ್ಲಿ, ವೀರಣ್ಣ
ವಾಲಿ ಮುಂತಾದವರು ಭಾಗವಹಿಸಿ, ಕವಿತೆ ವಾಚಿಸಿದರು.

ಕವಿಸಮೂಹಕ್ಕೆ ಸ್ವಾಗತ

ಕವಿಸಮೂಹದ ಈ ಬ್ಲಾಗ್ ಗೆ ತಮ್ಮೆಲ್ಲರಿಗೂ ಸುಸ್ವಾಗತ. ಕವಿಸಮೂಹ ಕೊಪ್ಪಳದ ಸಮಾನ ಮನಸ್ಕ ಸಾಹಿತ್ಯ ಆಸಕ್ತರಿಂದ ರೂಪಿತಗೊಂಡಿರುವ ಒಂದು ಸಮೂಹ. ಕವಿಸಮೂಹದಿಂದ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಮೊದಲಿಗೆ ಕವಿಸಮಯ ಎನ್ನುವ ಪ್ರತಿವಾರದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕವಿಸಮಯ ಪ್ರತಿರವಿವಾರ ಸಾಯಂಕಾಲ 4.30ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿದೆ. ಈ ಕವಿಸಮಯದಲ್ಲಿ ಕವಿಗಳು ತಮ್ಮ ಕವಿತೆಗಳನ್ನು/ಗಜಲ್ /ಶಾಯಿರಿ ಗಳನ್ನು ವಾಚನ ಮಾಡುತ್ತಾರೆ. ಅಂದಿನ ದಿನದ ವಿಶೇಷ ಅತಿಥಿಗಳು ಆಯಾ ಕವನದ ವಿಮರ್ಶೆ ಮತ್ತು ಕವಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.
ಪ್ರತಿವಾರ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ವಿವಿದೆಡೆಯೆಂದ ಕವಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಕವಿಗೋಷ್ಠಿಯ ನಂತರ ಜಿಲ್ಲೆಯ ಸಾಹಿತಿಗಳ ಕೃತಿಗಳ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿವಾರ ಒಬ್ಬ ಕವಿಯ ಕವನಸಂಕಲನದ ಬಗ್ಗೆ ಚರ್ಚೆ ,ಸಂವಾದ ಮತ್ತು ವಿಮರ್ಶೆ ನಡೆಯುತ್ತದೆ.
ಕನ್ನಡ ಸಾಹಿತ್ಯದ ಬಗ್ಗೆ ಆರೋಗ್ಯ ಪೂರ್ಣ ಚರ್ಚೆ ನಡೆಯಲಿ, ಉತ್ತಮ ಸಾಹಿತ್ಯ ರಚನೆಯಾಗಲಿ, ಕಿರಿಯರಿಗೆ ಹಿರಿಯರಿಂದ ಮಾರ್ಗದರ್ಶನ ಸಿಗಲಿ, ಕೊಪ್ಪಳದ ಕವಿಗಳು ,ಸಾಹಿತಿಗಳು ಹೆಚ್ಚಿನದನ್ನು ಸಾಧಿಸಲಿ ಇದಕ್ಕೆ ಕವಿಸಮೂಹ ದಿಂದ ಸಾಧ್ಯವಾಗುವ ಎಲ್ಲ ಪ್ರೇರಣೆ ,ಮಾರ್ಗದರ್ಶನ ನೀಡಬೇಕು ಎನ್ನುವದು ಕವಿಸಮೂಹದ ಆಶಯ
ಮುಂದಿನ ದಿನಗಳಲ್ಲಿ ಕವಿಸಮೂಹದಿಂದ ಪುಸ್ತಕ ಪ್ರಕಟಣೆ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ.
-
-ಸಿರಾಜ್ ಬಿಸರಳ್ಳಿ