Monday, October 25, 2010

ಹಳೆಯ ಪರಂಪರೆಯ ಕಾವ್ಯವನ್ನು ಯುವಕವಿಗಳು ಓದಬೇಕು- ವೀರಣ್ಣ ವಾಲಿ


ಕೊಪ್ಪಳ : ಕಾವ್ಯ ಸಾಂಸ್ಕೃತಿಕ ಮಡಿಲನ್ನು ಕಟ್ಟುತ್ತದೆ. ಕಾವ್ಯಂ ರಸಾತ್ಮಕ ವಾಕ್ಯಂ ಎನ್ನುವಂತೆ ಕಾವ್ಯದಲ್ಲಿ ರಸಬೇಕು. ಜೀವನದ ಅಭಿವ್ಯಕ್ತಿಯೇ ಕಾವ್ಯ. ನಮ್ಮ ಸಧ್ಯದ ಸಾಮಾಜಿಕ ಅವ್ಯವಸ್ಥೆಯನ್ನು ಎದುರಿಸುವುದಕ್ಕೆ ಕಾವ್ಯ ಪ್ರಭಾವಶಾಲಿ ಮಾಧ್ಯಮ,ಸಾಹಿತ್ಯ ಯಾವತ್ತೂ ನಿಂತ ನೀರಲ್ಲ ಅದು ನಿರಂತರ ಚಲನಶೀಲತ್ವ ಹೊಂದಿದೆ. ನಮ್ಮ ಕಾವ್ಯ ಪರಂಪರೆಯು ಶ್ರೀಮಂತವಾದುದು. ಯುವಕವಿಗಳು ಹೆಚ್ಚಿನ ಅಧ್ಯಯನ ಮಾಡಬೇಕು. ಹಳೆಯ ಪರಂಪರೆಯ ಕಾವ್ಯವನ್ನು ಓದುವದರ ಮೂಲಕ ತಮ್ಮ ಕಾವ್ಯವನ್ನು ಗಟ್ಟಿಗೊಳಿಸಿಕೊಳ್ಳುವತ್ತ ಸಾಗಬೇಕು ಎಂದು ಬಂಡಾಯ ಕವಿ ವೀರಣ್ಣ ವಾಲಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನ್ಯಭಾಷಾ ಸಾಹಿತ್ಯವನ್ನು ಓದುವುದರಿಂದ ಬೆಳವಣಿಗೆ ಸಾಧ್ಯ,ನಿರಂತರ ಅಧ್ಯಯನ ಶೀಲತೆಯಿಂದ ಸಮೃದ್ದ, ಗಟ್ಟಿಯಾದ ಕಾವ್ಯ ರಚನೆ ಸಾಧ್ಯ ಅದರತ್ತ ಯುವ ಕವಿಗಳು ಗಮನ ಹರಿಸಬೇಕು ಎಂದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎನ್.ಜಡಿಯಪ್ಪ- ಒಳಬರಬೇಡ ಹೊರಗೆ ನಿಲ್ಲು, ಶಿವಪ್ರಸಾದ ಹಾದಿಮನಿ-ಹಗರಣಗಳು ಎಷ್ಟು ಬಲ್ಲಿರಾ?, ಶಾಂತಪ್ಪ ಬಡಿಗೇರ-ಭೂದೇವಿ, ಎಂ.ಎಸ್.ಕಂಬಾಳಿಮಠ-ಭುವಿಯ ಬಾನು,ಶಿ.ಕಾ.ಬಡಿಗೇರ-ನಮನ,ವಾಗೀಶ ಪಾಟೀಲ್- ಆ ದಿನಗಳು, ಮಲ್ಲಿಕಾರ್‍ಜುನ - ಅರ್ಥ, ಶ್ರೀಮತಿ ಅರುಣಾ ನರೇಂದ್ರ- ಆಧುನಿಕ ವಚನಗಳು ಕವನಗಳನ್ನು ವಾಚನ ಮಾಡಿದರು. ವೀರಣ್ಣ ಹುರಕಡ್ಲಿ, ತಿಪ್ಪೇಸ್ವಾಮಿ ಭೋದಾ, ಗಿರೀಶ ಹೊನ್ನಾಳು ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಎನ್.ಜಡೆಯಪ್ಪ ,ವಂದನಾರ್ಪಣೆ- ಎಸ್.ಎಂ.ಕಂಬಾಳಿಮಠ ಮಾಡಿದರು. ಶಿ.ಕಾ.ಬಡಿಗೇರ ಕಾರ್‍ಯಕ್ರಮ ನಿರೂಪಿಸಿದರು.

Monday, October 18, 2010

ಕವಿಗೆ ಬದ್ದತೆ ಇರಬೇಕು - ಡಾ.ಮಹಾಂತೇಶ ಮಲ್ಲನಗೌಡರ



ಕೊಪ್ಪಳ : ಕವಿ ಸ್ವಸಂತೊಷಕ್ಕಾಗಿ ರಚಿಸಿದ ಕವಿತೆ ಎಲ್ಲರಿಗೂ ತಲುಪಬೇಕು. ಓದುಗರು ಅವರವರ ಭಾವನೆಗಳಿಗೆ ತಕ್ಕಂತೆ ಕವನವನ್ನು ಅರ್ಥೈಸಿಕೊಳ್ಳುತ್ತಾರೆ. ಹೀಗಾಗಿ ಕವನಗಳು ನಾನಾ ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಹಾಡುವುದು ಅನಿವಾರ್‍ಯ ಕರ್ಮ ನನಗೆ ಎನ್ನುವಂತೆ ವಿಮರ್ಶೆಗಳಿಗೆ ಅಂಜದೇ ಕವಿ ಬರೆಯುತ್ತಾ ಹೋಗಬೇಕು . ಕವಿಯಾದವನು ಸಮಾಜದೊಂದಿಗೆ ಹೋರಾಟಕ್ಕಿಳಿಯುತ್ತಾನೆ. ಸ್ವಂತ ಬದುಕು ಮತ್ತು ಸಾಮಾಜಿಕ ಬದುಕುಗಳ ನಡುವೆ ಹೋರಾಡುತ್ತ ಕವಿತೆ ಬರೆಯುವ ಕವಿಗೆ ಬದ್ದತೆ ಇರಬೇಕು ಎಂದು ಹಿರಿಯ ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಕಾವ್ಯದ ವಿಮರ್ಶೆ ಮಾಡಿ ಮಾತನಾಡುತ್ತಿದ್ದರು. ಇತ್ತೀಚಿಗೆ ಬದ್ದತೆ ಇರುವ ಕವಿಗಳು, ಸಾಹಿತಿಗಳು ಕಡಿಮೆಯಾಗುತ್ತಿದ್ದಾರೆ ಸಾಮಾಜಿಕ ಜೀವನದಲ್ಲಿ ಹೋರಾಟದ ಬದಲು ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಿದ್ದಾರೆ ಎಂದು ಅವರು ವಿಷಾಧಿಸಿದರು.
ಡಾ.ಮಹಾಂತೇಶ ಮಲ್ಲನಗೌಡರು ಭಾವಪೂರ್ಣವಾಗಿ ತಮ್ಮ ಭಾವಗೀತೆಯನ್ನು ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದಕ್ಕೂ ಮೊದಲು ನಡೆದ ಕವನ ವಾಚನದಲ್ಲಿ ಶಿವಪ್ರಸಾದ ಹಾದಿಮನಿ- ರಸ ಋಷಿಗೆ ನಮನ, ಎನ್.ಜಡೆಯಪ್ಪ- ಚುಟುಕುಗಳು, ರಮೇಶ ಬನ್ನಿಕೊಪ್ಪ-ವಿಮೋಚನೆ, ಶಿ.ಕಾ.ಬಡಿಗೇರ-ಒಡಲ ದನಿ, ಮಹೇಶ ಬಳ್ಳಾರಿ-ನಿತ್ಯಾನಂದ, ಸಿರಾಜ್ ಬಿಸರಳ್ಳಿ- ತೇರು ಎಳೆಯೋಣ, ಎ.ಪಿ.ಅಂಗಡಿ- ಕಿನ್ನಾಳದ ಗೊಂಬೆಗಳು, ಬಸಪ್ಪ ಬಾರಕೇರ- ವಚನಗಳು, ಪುಷ್ಪಲತಾ ಏಳುಬಾವಿ- ಹೈಕುಗಳು, ಶಾಂತೇಶ ಬಡಿಗೇರ- ಅಂಬೆ ಕವನಗಳನ್ನು ವಾಚನ ಮಾಡಿದರು. ಮಹೇಶ ಬಳ್ಳಾರಿ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, October 11, 2010

ಸಮಾಜ ಮುಖಿ ಕಾವ್ಯ ಸೃಷ್ಟಿಯಾಗಲಿ- ಈಶ್ವರ ಹತ್ತಿ




ಕೊಪ್ಪಳ : ಇಂದಿನ ಬದುಕು ಅಸ್ತಿರತೆ,ತಳಮಳದಿಂದ ಕೂಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕವಿ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜಮುಖಿ ಕಾವ್ಯ ರಚಿಸಬೇಕು ಎಂದು ವಿಮರ್ಶಕ,ಕವಿ ಈಶ್ವರ ಹತ್ತಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾವ್ಯ ಎನ್ನುವುದು ಜೀವನಾನುಭವವಾಗಿರಬೇಕು, ಕಿರಿದಾದ ಶಬ್ದಗಳಲ್ಲಿ ದೊಡ್ಡ ಅರ್ಥವನ್ನು ನೀಡುವಂತಾಗಬೇಕು. ಇದಕ್ಕಾಗಿ ಯುವಕವಿಗಳು ಹಿರಿಯ ಕವಿಗಳ ಕಾವ್ಯವನ್ನು ಓದಬೇಕು, ಭಾಷೆಯನ್ನು ಸರಿಯಾಗಿ ದುಡಿಸಿಕೊಳ್ಳಬೇಕು. ಮೊದಲು ಕಾವ್ಯ ಕವಿಗೆ ಆನಂದ ನೀಡಿದರೆ ಅದು ಎಲ್ಲರಿಗೂ ತಲುಪುತ್ತದೆ. ಕಾಟಾಚಾರಕ್ಕೆ ಎಂಬಂತೆ ಬರೆದರೆ ಅದು ಕಾವ್ಯವಾಗಲಾರದು,ಕಾವ್ಯದ ಲಕ್ಷಣಗಳ ಬಗ್ಗೆ ಅರಿವಿಟ್ಟುಕೊಂಡು ಕಲಾತ್ಮಕವಾಗಿ ಬರೆದಾಗ ಕಾವ್ಯ ನಿಲ್ಲುತ್ತದೆ ಎಂದು ಹೇಳಿದರು.
ಕವಿಸಮಯದಲ್ಲಿ ಶಿವಪ್ಪ ಶೆಟ್ಟರ್-ನೀನೇ ನೀನು, ಎನ್.ಜಡೆಯಪ್ಪ-ಗಾಂಧಿ ಕನಸು,ಮಲ್ಲಿಕಾರ್ಜುನ- ಅಂಧಕಾರ, ಶಾಂತಾದೇವಿ ಹಿರೇಮಠ- ಒಲಿದರೆ ನಾರಿ ಮುನಿದರೆ ಮಾರಿ, ಎಸ್.ಎಂ.ಕಂಬಾಳಿಮಠ- ಕೇಳಿ, ಹರಿಯಲು ಬಿಡಿ, ನಾಗೇಂದ್ರ ಪ್ರಸಾದ ಕಾಮನೂರ-ಇನ್ನಾದರೂ ನೆಟ್ಟಗಾಗಿರಿ, ಶಿ.ಕಾ.ಬಡಿಗೇರ- ಒಡಲ ದನಿ, ವೀರಣ್ಣ ಹುರಕಡ್ಲಿ- ಇಂದಿನ ಆದರ್ಶ ಜೀವಿಗಳು, ಸಿರಾಜ್ ಬಿಸರಳ್ಳಿ-ಭರವಸೆ,ಸುಮತಿ-ಮುಖ ಮುಖವಾಡಗಳು, ಪುಷ್ಪಲತಾ ಏಳುಬಾವಿ- ಮರಳು, ಗಜಲ್, ರಮೇಶ ಬನ್ನಿಕೊಪ್ಪ- ಈ ಸ್ವಾಮಿಯರೇ ಹೀಗೆ, ಈಶ್ವರ ಹತ್ತಿ- ತ್ರಿಪದಿಗಳು, ಬಸವರಾಜ್ ಸೂಳಿಬಾವಿ- ಹಾಯ್ಕುಗಳು, ಅರೀಪ್ ರಾಜಾರ ಕವನಗಳನ್ನು ವಾಚನ ಮಾಡಿದರು.
ತಿಪ್ಪೆಸ್ವಾಮಿ ಬೋದಾ,ಹಿರಿಯ ಪತ್ರಕರ್ತರಾದ ಬಸವರಾಜ ಶೀಲವಂತರ, ಬಸವರಾಜ ಸೂಳಿಬಾವಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ಸ್ವಾಗತಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, October 4, 2010

ಹಂತ ಹಂತವಾಗಿ ಕವಿ ಬೆಳೆಯುತ್ತಾ ಹೋಗಬೇಕು - ಶಾಂತಾದೇವಿ ಹಿರೇಮಠ : ಕವಿಯ ಮನಸ್ಸು ಪ್ರಯೋಗಶೀಲವಾಗಿರಬೇಕು- ವಿ.ಹರಿನಾಥಬಾಬು





ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹದ ೨೩ನೇ ಕವಿಸಮಯ ಕಾರ್‍ಕ್ರಮ ವಿಶೇಷವಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ಹಿರಿಯ ಕವಿಯತ್ರಿ ಬೆಳೆಯುವ ಕವಿಗಳಿಗೆ "ಅಂಬೆಗಾಲಿಡುವ ಮಗುವಿನಂತೆ ಕವಿ ಬೆಳೆಯುತ್ತಾ ಹೋಗಬೇಕು. ಯಾರೂ ಒಮ್ಮೇಲೆ ಶ್ರೇಷ್ಠ ಕವಿಯಾಗಲು ಸಾಧ್ಯವಿಲ್ಲ. ನಿರಂತರ ಓದು,ಜೀವನಾನುಭವ ಕವಿಯನ್ನು ಬೆಳೆಸುತ್ತದೆ. ಎಲ್ಲ ಹಿರಿಯ ಕಿರಿಯರ ಕವನಗಳನ್ನು ಓದುತ್ತಾ ಬೆಳೆಯುತ್ತಾ ಹೋಗಬೇಕು ಎಂದು ಹೇಳಿದರು. ಯುವಕವಿಗಳು ವಿಮರ್ಶೆಗೆ ಹೆದರಿ ಬರೆಯುವುದನ್ನು ನಿಲ್ಲಿಸಬಾರದು.ಸ್ವವಿಮರ್ಶೆ ಮಾಡಿಕೊಳ್ಳುತ್ತ ಉತ್ತಮ ಕಾವ್ಯ ರಚನೆಯಲ್ಲಿ ತೊಡಗಬೇಕು. ತಾವು ಇನ್ನೂ ಕಲಿಯುವ ಕವಿಯತ್ರಿ, ತಮಗೆ ಎಲ್ಲರ ಮಾರ್ಗದರ್ಶನ ಅಗತ್ಯ ಎನ್ನುವ ಮೂಲಕ ಸೌಜನ್ಯ ಮೆರೆದರು.
ಕವಿಸಮಯದಲ್ಲಿ ೨೨ ಕವಿಗಳು ಕವನ ವಾಚನ ಮಾಡಿದರು. ಕವನಗಳ ವಿಮರ್ಶೆಯನ್ನು ಇನ್ನೊರ್ವ ಅತಿಥಿ ಕವಿ ವಿ.ಹರಿನಾಥ ಬಾಬು ಮಾಡಿದರು. ಕವನಗಳ ವಿಶ್ಲೇಷಣೆ ಮಾಡಿ ಮಾತನಾಡಿದ ಅವರು "ಕವಿ ಎನ್ನುವ ಕ್ರಿಯಾಪದದಂತೆ ಕವಿಯಾದವನು ಎಲ್ಲವನ್ನೂ,ಎಲ್ಲರನ್ನೂ ಆವರಿಸಿಕೊಳ್ಳಬೇಕು. ನಮ್ಮ ಕವಿತೆಗಳು ಎಲ್ಲರನ್ನು ಸಮ್ಮೋಹನಗೊಳಿಸುವಂತಿರಬೇಕು. ಸಶಕ್ತವಾದ ಪದಗಳ ಬಳಕೆ ಕವಿತೆಗೆ ತೂಕ ನೀಡುತ್ತದೆ. ಭಾಷೆಯನ್ನು ಒಡೆದು ಕಟ್ಟುತ್ತಾ ಹೋಗಬೇಕು.ಹಾಗಾದಾಗ ಹೊಸದನ್ನು ಕಟ್ಟಲು ಸಾಧ್ಯ. ಕವಿತೆಗೆ ರೂಪಕ,ಉಪಮೆ, ಅಲಂಕಾರಗಳು ಬೇಕು. ಆದರೆ ಅವೇ ಕವನಕ್ಕೆ ಭಾರವಾಗುವಂತಿರಬಾರದು. ನಿರಂತರ ಗಂಭೀರವಾದ ಓದು ಬೆಳಕಿನಂತೆ. ಅದು ಕವಿಯನ್ನು ಉತ್ತಮವಾದ ದಾರಿಗೆ ನಡೆಸುತ್ತದೆ, ಕವಿಗಳು ಹೆಚ್ಚಾದಂತೆ ಮಾನವತೆ ಹೆಚ್ಚಾಗುತ್ತೆ. ಸಮಕಾಲೀನ ಸಮಸ್ಯೆಗಳಿಗೆ ತತ್ ಕ್ಷಣಕ್ಕೆ ಪ್ರತಿಕ್ರಿಸುವಂತಾಗಬೇಕು.ಬರೆದ ಕವಿತೆಯನ್ನು ಕೇಳುಗರಿಗೆ ಸರಿಯಾಗಿ ಮುಟ್ಟಿಸುವ ಕೆಲಸವಾಗಬೇಕು. ಕವಿಯ ಮನಸ್ಸು ಸದಾ ಪ್ರಯೋಗಶೀಲವಾಗಿರಬೇಕು. ಹೊಸತನದ ಸೃಷ್ಟಿಸಲು ಸಾಧ್ಯ ಎಂದು ಅವರು ಹೇಳಿದರು".
ಕವಿಸಮಯದಲ್ಲಿ ಮಹೇಶ ಬಳ್ಳಾರಿ-ಪುಟ್ಟಜ್ಜ, ಜಿ.ಎಸ್.ಬಾರಕೇರ-ತುಂಗಭದ್ರೆಯರು, ಶ್ರೀನಿವಾಸ ಚಿತ್ರಗಾರ-ಸಾಕಿನ್ನು ಮಗಳೆ, ವಾಸುದೇವ ಕುಲಕರ್ಣಿ- ಸೋಮಾರಿ, ಶಾಂತಾದೇವಿ ಹಿರೇಮಠ- ಸಾಕಾರ ರೂಪಿ, ಕನಕಪ್ಪ ತಳವಾರ- ಕವಿತೆ ಎಂದರೆ ಏನಂತಿ?, ಎಸ್.ಎಂ.ಕಂಬಾಳಿಮಠ-ಹುಲಿ ಬಂತು ಹುಲಿ,ಅಲ್ಲಮಪ್ರಭು ಬೆಟ್ಟದೂರ- ಗಾಂಧಿ, ರೊಟ್ಟಿ, ಸುಮತಿ- ಬೆನ್ನ ಹಿಂದಿನ ಹೆರಳು, ಶಿ.ಕಾ.ಬಡಿಗೇರ-ಕವಿತೆಯ ಬೆನ್ನತ್ತಿ, ವಿ.ಹರಿನಾಥ ಬಾಬು-ಲಂಗಗಳು, ಎ.ಪಿ.ಅಂಗಡಿ- ಇಂಡಿಯಾ ಗಾಂಧಿ, ಶಿವಪ್ರಸಾದ ಹಾದಿಮನಿ- ಗಾನಯೋಗಿ ಪುಟ್ಟರಾಜರ ನೆನೆದು, ವೀರಣ್ಣ ಹುರಕಡ್ಲಿ- ಶಾಂತಿ ತತ್ವ, ಪುಷ್ಪಲತಾ ಏಳುಬಾವಿ- ಹಾಯ್ಕುಗಳು, ಲಕ್ಷ್ಮೀ- ಕನಸು, ಹನುಮಂತಪ್ಪ ಅಂಡಗಿ- ಪುಟ್ಟರಾಜರು, ರಮೇಶ ಬನ್ನಿಕೊಪ್ಪ- ಆ ಮುಗ್ದ ಹುಡುಗಿ, ಮಾನಪ್ಪ ಬೆಲ್ಲದ- ಧರೆಯ ಬೆಳಕು, "ಠ್ಠಪ್ಪ ಗೋರಂಟ್ಲಿ- ಪುಟ್ಟರಾಜರು ಏರಿದ ಎತ್ತರ, ಸಿರಾಜ್ ಬಿಸರಳ್ಳಿ- ಬೆಂಕಿ ಹಚ್ಚಿ ಎನ್ನುವ ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಶಂಕರಪ್ಪ ಕಾತರಕಿ, ಕೃಷ್ಣಪ್ಪ ಸಂಗಟಿ,ಮಂಜುನಾಥ ಗೊಂಡಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.