Monday, October 4, 2010

ಹಂತ ಹಂತವಾಗಿ ಕವಿ ಬೆಳೆಯುತ್ತಾ ಹೋಗಬೇಕು - ಶಾಂತಾದೇವಿ ಹಿರೇಮಠ : ಕವಿಯ ಮನಸ್ಸು ಪ್ರಯೋಗಶೀಲವಾಗಿರಬೇಕು- ವಿ.ಹರಿನಾಥಬಾಬು





ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹದ ೨೩ನೇ ಕವಿಸಮಯ ಕಾರ್‍ಕ್ರಮ ವಿಶೇಷವಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ಹಿರಿಯ ಕವಿಯತ್ರಿ ಬೆಳೆಯುವ ಕವಿಗಳಿಗೆ "ಅಂಬೆಗಾಲಿಡುವ ಮಗುವಿನಂತೆ ಕವಿ ಬೆಳೆಯುತ್ತಾ ಹೋಗಬೇಕು. ಯಾರೂ ಒಮ್ಮೇಲೆ ಶ್ರೇಷ್ಠ ಕವಿಯಾಗಲು ಸಾಧ್ಯವಿಲ್ಲ. ನಿರಂತರ ಓದು,ಜೀವನಾನುಭವ ಕವಿಯನ್ನು ಬೆಳೆಸುತ್ತದೆ. ಎಲ್ಲ ಹಿರಿಯ ಕಿರಿಯರ ಕವನಗಳನ್ನು ಓದುತ್ತಾ ಬೆಳೆಯುತ್ತಾ ಹೋಗಬೇಕು ಎಂದು ಹೇಳಿದರು. ಯುವಕವಿಗಳು ವಿಮರ್ಶೆಗೆ ಹೆದರಿ ಬರೆಯುವುದನ್ನು ನಿಲ್ಲಿಸಬಾರದು.ಸ್ವವಿಮರ್ಶೆ ಮಾಡಿಕೊಳ್ಳುತ್ತ ಉತ್ತಮ ಕಾವ್ಯ ರಚನೆಯಲ್ಲಿ ತೊಡಗಬೇಕು. ತಾವು ಇನ್ನೂ ಕಲಿಯುವ ಕವಿಯತ್ರಿ, ತಮಗೆ ಎಲ್ಲರ ಮಾರ್ಗದರ್ಶನ ಅಗತ್ಯ ಎನ್ನುವ ಮೂಲಕ ಸೌಜನ್ಯ ಮೆರೆದರು.
ಕವಿಸಮಯದಲ್ಲಿ ೨೨ ಕವಿಗಳು ಕವನ ವಾಚನ ಮಾಡಿದರು. ಕವನಗಳ ವಿಮರ್ಶೆಯನ್ನು ಇನ್ನೊರ್ವ ಅತಿಥಿ ಕವಿ ವಿ.ಹರಿನಾಥ ಬಾಬು ಮಾಡಿದರು. ಕವನಗಳ ವಿಶ್ಲೇಷಣೆ ಮಾಡಿ ಮಾತನಾಡಿದ ಅವರು "ಕವಿ ಎನ್ನುವ ಕ್ರಿಯಾಪದದಂತೆ ಕವಿಯಾದವನು ಎಲ್ಲವನ್ನೂ,ಎಲ್ಲರನ್ನೂ ಆವರಿಸಿಕೊಳ್ಳಬೇಕು. ನಮ್ಮ ಕವಿತೆಗಳು ಎಲ್ಲರನ್ನು ಸಮ್ಮೋಹನಗೊಳಿಸುವಂತಿರಬೇಕು. ಸಶಕ್ತವಾದ ಪದಗಳ ಬಳಕೆ ಕವಿತೆಗೆ ತೂಕ ನೀಡುತ್ತದೆ. ಭಾಷೆಯನ್ನು ಒಡೆದು ಕಟ್ಟುತ್ತಾ ಹೋಗಬೇಕು.ಹಾಗಾದಾಗ ಹೊಸದನ್ನು ಕಟ್ಟಲು ಸಾಧ್ಯ. ಕವಿತೆಗೆ ರೂಪಕ,ಉಪಮೆ, ಅಲಂಕಾರಗಳು ಬೇಕು. ಆದರೆ ಅವೇ ಕವನಕ್ಕೆ ಭಾರವಾಗುವಂತಿರಬಾರದು. ನಿರಂತರ ಗಂಭೀರವಾದ ಓದು ಬೆಳಕಿನಂತೆ. ಅದು ಕವಿಯನ್ನು ಉತ್ತಮವಾದ ದಾರಿಗೆ ನಡೆಸುತ್ತದೆ, ಕವಿಗಳು ಹೆಚ್ಚಾದಂತೆ ಮಾನವತೆ ಹೆಚ್ಚಾಗುತ್ತೆ. ಸಮಕಾಲೀನ ಸಮಸ್ಯೆಗಳಿಗೆ ತತ್ ಕ್ಷಣಕ್ಕೆ ಪ್ರತಿಕ್ರಿಸುವಂತಾಗಬೇಕು.ಬರೆದ ಕವಿತೆಯನ್ನು ಕೇಳುಗರಿಗೆ ಸರಿಯಾಗಿ ಮುಟ್ಟಿಸುವ ಕೆಲಸವಾಗಬೇಕು. ಕವಿಯ ಮನಸ್ಸು ಸದಾ ಪ್ರಯೋಗಶೀಲವಾಗಿರಬೇಕು. ಹೊಸತನದ ಸೃಷ್ಟಿಸಲು ಸಾಧ್ಯ ಎಂದು ಅವರು ಹೇಳಿದರು".
ಕವಿಸಮಯದಲ್ಲಿ ಮಹೇಶ ಬಳ್ಳಾರಿ-ಪುಟ್ಟಜ್ಜ, ಜಿ.ಎಸ್.ಬಾರಕೇರ-ತುಂಗಭದ್ರೆಯರು, ಶ್ರೀನಿವಾಸ ಚಿತ್ರಗಾರ-ಸಾಕಿನ್ನು ಮಗಳೆ, ವಾಸುದೇವ ಕುಲಕರ್ಣಿ- ಸೋಮಾರಿ, ಶಾಂತಾದೇವಿ ಹಿರೇಮಠ- ಸಾಕಾರ ರೂಪಿ, ಕನಕಪ್ಪ ತಳವಾರ- ಕವಿತೆ ಎಂದರೆ ಏನಂತಿ?, ಎಸ್.ಎಂ.ಕಂಬಾಳಿಮಠ-ಹುಲಿ ಬಂತು ಹುಲಿ,ಅಲ್ಲಮಪ್ರಭು ಬೆಟ್ಟದೂರ- ಗಾಂಧಿ, ರೊಟ್ಟಿ, ಸುಮತಿ- ಬೆನ್ನ ಹಿಂದಿನ ಹೆರಳು, ಶಿ.ಕಾ.ಬಡಿಗೇರ-ಕವಿತೆಯ ಬೆನ್ನತ್ತಿ, ವಿ.ಹರಿನಾಥ ಬಾಬು-ಲಂಗಗಳು, ಎ.ಪಿ.ಅಂಗಡಿ- ಇಂಡಿಯಾ ಗಾಂಧಿ, ಶಿವಪ್ರಸಾದ ಹಾದಿಮನಿ- ಗಾನಯೋಗಿ ಪುಟ್ಟರಾಜರ ನೆನೆದು, ವೀರಣ್ಣ ಹುರಕಡ್ಲಿ- ಶಾಂತಿ ತತ್ವ, ಪುಷ್ಪಲತಾ ಏಳುಬಾವಿ- ಹಾಯ್ಕುಗಳು, ಲಕ್ಷ್ಮೀ- ಕನಸು, ಹನುಮಂತಪ್ಪ ಅಂಡಗಿ- ಪುಟ್ಟರಾಜರು, ರಮೇಶ ಬನ್ನಿಕೊಪ್ಪ- ಆ ಮುಗ್ದ ಹುಡುಗಿ, ಮಾನಪ್ಪ ಬೆಲ್ಲದ- ಧರೆಯ ಬೆಳಕು, "ಠ್ಠಪ್ಪ ಗೋರಂಟ್ಲಿ- ಪುಟ್ಟರಾಜರು ಏರಿದ ಎತ್ತರ, ಸಿರಾಜ್ ಬಿಸರಳ್ಳಿ- ಬೆಂಕಿ ಹಚ್ಚಿ ಎನ್ನುವ ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಶಂಕರಪ್ಪ ಕಾತರಕಿ, ಕೃಷ್ಣಪ್ಪ ಸಂಗಟಿ,ಮಂಜುನಾಥ ಗೊಂಡಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment