Tuesday, August 3, 2010

ಯಶಸ್ವಿ 4ನೇ ಕವಿಸಮಯ ಕಾರ್ಯಕ್ರಮ



ಕೊಪ್ಪಳ : ಸಮಾನ ಮನಸ್ಕ ಕವಿಮಿತ್ರರ ಸಮೂಹ ನಗರದ ಐಬಿ ಆವರಣದಲ್ಲಿ ಹಮ್ಮಿಕೊಂಡಿದ್ದ ೪ನೇ ಕವಿಸಮಯ ಕಾರ್‍ಯಕ್ರಮ ಯಶಸ್ವಿಯಾಗಿ ಜರುಗಿತು. ಯುವಕವಿಗಳ ಕವಿತೆಗಳಿಗೆ ಹಿರಿಯ ಕವಿಗಳು ವಿಮರ್ಶೆ ಮಾಡಿದರು.

ಮಹೇಶ್ ಬಳ್ಳಾರಿ ವಾಚಿಸಿದ ಓಂ ಅಸತೋಮಾ ಮತ್ತು ಸಾವಿನ ಹಕ್ಕಿ ಕವಿತೆಯನ್ನು ಉಲ್ಲೇಖಿಸಿ ಮಾತನಾಡಿದ ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿಯವರು ಸಾವಿನ ನೂರು ಅರ್ಥಗಳನ್ನು ಅದರ ಅನುಭವನ್ನು ಸರಿಯಾಗಿ ಧ್ವನಿಸಿದೆ ಈ ಕವಿತೆ, ಸಣ್ಣ ವಯಸ್ಸಿಗೆ ಸಾವಿನ ಬಗ್ಗೆ ಬರೆಯುವುದಕ್ಕಿಂತ ಜೀವನ್ಮುಖಿ ಕವಿತೆಗಳನ್ನು ರಚಿಸಿ ಎಂದರು. ಶ್ರೀನಿವಾಸ ಚಿತ್ರಗಾರರ ತಲೆದಿಂಬು ಕವನದಲ್ಲಿ ತಾಯಿಯನ್ನು ತಲೆದಿಂಬಿಗೆ ಹೋಲಿಸಿ ಬರೆದ ಕವಿತೆಯು ಹೊಸ ಬಗೆಯ ಪರಿಕಲ್ಪನೆಯಾಗಿದ್ದು ಉತ್ತಮವಾಗಿ ಮೂಡಿ ಬಂದಿದೆ ಎಂದರು. ಇಟಗಿಯಿಂದ ಆಗಮಿಸಿದ್ದ ಯುವ ಕವಿ ಜಡೆಯಪ್ಪ ಎನ್ ಇವರ ಕವಿತೆಯು ಪ್ರಸ್ತುತ ಸಮಸ್ಯೆಗಳನ್ನು ,ತಮ್ಮಲ್ಲಿಯ ಆವೇಶವನ್ನು ವ್ಯಕ್ತಪಡಿಸುತ್ತಿದ್ದು ಆದಷ್ಟು ಕವಿತೆಯು ಪ್ರತಿಮೆ,ರೂಪಕ,ಉಪಮೆಗಳ ಮೂಲಕ ಒಡಮೂಡಬೇಕು ಎಂದರು. ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕಿ ಲಕ್ಷ್ಮೀಯ ಕವನಕ್ಕೆ ಪ್ರತಿಕ್ರಿಯಿಸಿದ ವಿಠ್ಠಪ್ಪ ಗೋರಂಟ್ಲಿಯವರು ಇನ್ನೂ ಹೆಚ್ಚಿನ ಪ್ರಮಾಣದ ಓದಿನ ಮೂಲಕ ಕವನಗಳನ್ನು ಬರೆಯುವ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಲು ಸಲಹೆ ನೀಡಿದರು. ನಂತರ ಸಿರಾಜ್ ಬಿಸರಳ್ಳಿಯವರ ದಾರಿ ತಪ್ಪಿದ ಕವಿತೆಯ ಬಗ್ಗೆ ಮಾತನಾಡಿದ ಗೋರಂಟ್ಲಿಯವರು ಕೆಲವು ಸಲ ಕವಿತೆಯು ಕವಿಯನ್ನು ಮೀರಿ ಬೆಳೆಯುತ್ತಾ ಹೋಗುತ್ತದೆ ಅದೇ ರೀತಿ ಈ ಕವಿತೆ ಎಂದರು. ಆಲದ ಮರಕ್ಕೆ ನೇತು ಹಾಕುವ ಕೊನೆಯ ಸಾಲುಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ, ಕವಿ ಮತ್ತು ಕವಿತೆ ಇಂದು ಎದುರಿಸುತ್ತಿರುವ ಸಮಸ್ಯೆಯನ್ನು ಹೇಳುತ್ತಿದೆ ಎಂದರು. ಕೊನೆಯಲ್ಲಿ ಬಿ.ಎಸ್.ಪಾಟೀಲ್ ರ ಕವಿತೆಗಳಿಗೆ ಪ್ರತಿಕ್ರಿಯಿಸಿ ತಮ್ಮ ಯೌವನ ಕಾಲದಲ್ಲಿ ಬರೆದಂತಹ ಈ ಕವಿತೆಗಳು ಇನ್ನೂ ಹೆಚ್ಚು ಪ್ರೌಢವಾಗಬಹುದಿತ್ತು ಎಂದು ಅಭಿಪ್ರಾಯ ಪಟ್ಟರು.

ಕವಿತೆಗಳನ್ನು ಮುಕ್ತವಾಗಿ ವಿಮರ್ಶೆ ಮಾಡುವುದರಿಂದ ಕವಿಗಳಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಅವಕಾಶವಾಗುತ್ತದೆ ಎಂದು ಮಹಾಂತೇಶ ಮಲ್ಲನಗೌಡರ್ ಹೇಳಿದರು. ಈ ಕಾರ್‍ಯಕ್ರಮಗಳಿಂದ ಯುವಕವಿಗಳ ಪ್ರತಿಭೆಗೆ ಒಳ್ಳೆಯ ಅವಕಾಶ ಮಾಡಿಕೊಟ್ಟಂತೆ ಎಂದರು. ಕಾರ್‍ಯಕ್ರಮದಲ್ಲಿ ಮಹೇಶ್ ಬಳ್ಳಾರಿ, ಶ್ರೀನಿವಾಸ್ ಚಿತ್ರಗಾರ್, ಎನ್.ಜಡಿಯಪ್ಪ, ಬಿ.ಎಸ್.ಪಾಟೀಲ್, ಲಕ್ಷ್ಮೀ, ಸಿರಾಜ್ ಬಿಸರಳ್ಳಿ ಹಾಗೂ ಇತರರು ಭಾಗವಹಿಸಿದ್ದರು.

No comments:

Post a Comment