Tuesday, January 25, 2011

ನಮ್ಮ ಜನಜೀವನದ ನೈಜ ಚಿತ್ರಣ ನೀಡುವ ಭೋಜರಾಜರ ಕಥೆಗಳು


ಕೊಪ್ಪಳ : ಕಥೆಗಾರ,ಕವಿ,ಲೇಖಕರಾಗಿ ಹೆಸರು ಮಾಡಿರುವ ಭೋಜರಾಜ ಸೊಪ್ಪಿಮಠರ ಕಥೆಗಳು ನಮ್ಮ ಜನಜೀವನಕ್ಕೆ ಹತ್ತಿರವಾಗಿರುವಂತಹವು. ನೆಲದ ಗುಣ ಅವರ ಕತೆಗಳಲ್ಲಿವೆ. ಪಾತ್ರಗಳ ಪೋಷಣೆ,ವಿಶ್ಲೇಷಣೆ ಹಾಗೂ ಭಾಷೆಯ ಬಳಕೆ ಅತ್ಯುತ್ತಮವಾಗಿದೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹದ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭೋಜರಾಜ ಕಥೆಗಳ ಕುರಿತು ಮಾತನಾಡಿದರು. ಇದುವರೆಗೆ ೩೦ಕ್ಕೂ ಹೆಚ್ಚು ಕಥೆಗಳನ್ನು ಪ್ರಕಟಿಸಿರುವ , ಹತ್ತಾರು ಲೇಖನ,ಕವನಗಳನ್ನು ಪ್ರಕಟಿಸಿರುವ ಭೋಜರಾಜ ಸೊಪ್ಪಿಮಠರ ಕಥೆಗಳಲ್ಲಿ ನಮ್ಮ ಜನರ ಭವಣೆಗಳನ್ನು, ತಮ್ಮ ಸುತ್ತಮುತ್ತಲ ಜನಜೀವನದ ಬಗೆಗಿನ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು.
ಇದಕ್ಕೂ ಮೊದಲು ಸಿರಾಜ್ ಬಿಸರಳ್ಳಿ- ಲಹರಿ, ವಿರಣ್ಣ ಹುರಕಡ್ಲಿ-ಆಶಯ,ಡಾ.ಮಹಾಂತೇಶ ಮಲ್ಲನಗೌಡರ- ಹಂಪಿ,ಶಿವಪ್ರಸಾದ ಹಾದಿಮನಿ-ಗವಿಮಠ, ವಾಗೀಶ ಪಾಟೀಲ್- ನಿರೀಕ್ಷೆ,ವಿಠ್ಠಪ್ಪ ಗೋರಂಟ್ಲಿ- ಹುಟ್ಟಲಾರದ ಕವಿತೆ ಕವನಗಳನ್ನು ವಾಚನ ಮಾಡಿದರು. ನಂತರ ಕತೆಗಾರ ಭೋಜರಾಜ ಸೊಪ್ಪಿಮಠ ತಮ್ಮ "ವರ್ಷ ಗರ್ಭ" ಕಥೆಯನ್ನು ವಾಚನ ಮಾಡಿದರು. ಅತ್ಯುತ್ತಮ ಎನ್ನಬಹುದಾದ ರೀತಿಯಲ್ಲಿ ಧ್ವನಿಯ ಏರಿಳಿತಗಳೊಂದಿಗೆ ಕಥಾ ವಾಚನ ಮಾಡಿದ ರೀತಿ ಗಮನ ಸೆಳೆಯುವಂತಿತ್ತು. ನಂತರ ತಮಗೆ ಕಥೆ ಬರೆಯಲು ಪ್ರೇರಣೆ ಸಿಕ್ಕ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಮತ್ತು ವಾಚನ ಮಾಡುವ ರೀತಿ ಕಲಿಸಿಕೊಟ್ಟ ಶಾಸ್ತ್ರಿಗಳ ಬಗ್ಗೆ ಸೊಪ್ಪಿಮಠ ಮಾತನಾಡಿದರು.
ಕಾರ್‍ಯಕ್ರಮದಲ್ಲಿ ಸಣ್ಣಪ್ಪ ಭಾವಿಹುಡೇದ,ಹನುಮಂತಪ್ಪ ಅಂಡಗಿ, ಯಶವಂತ್ ಮತ್ತಿತರರು ಭಾಗವಹಿಸಿದ್ದರು. ವಂದನಾರ್ಪಣೆಯನ್ನು ಶಿವಪ್ರಸಾದ ಹಾದಿಮನಿ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

No comments:

Post a Comment